More

    ಸರ್ಕಾರದ ಜತೆ ಮಾತುಕತೆ ಭರವಸೆ

    ಕಾರವಾರ: ಅಣು ವಿದ್ಯುತ್ ನಿಗಮದ ನಿವೃತ್ತ ಉದ್ಯೋಗಿಗಳಿಗೆ ಪಿಂಚಣಿ ಸೌಲಭ್ಯ ಒದಗಿಸುವ ಬಗ್ಗೆ ಭಾರತ ಸರ್ಕಾರದ ಜತೆ ಮಾತುಕತೆ ನಡೆಸುವುದಾಗಿ ಭಾರತೀಯ ಅಣು ಶಕ್ತಿ ಆಯೋಗ(ಎಇಸಿ) ಚೇರ್ಮನ್ ಹಾಗೂ ಭಾರತ ಸರ್ಕಾರದ ಅಣು ಶಕ್ತಿ ಇಲಾಖೆ(ಡಿಎಇ) ಕಾರ್ಯದರ್ಶಿ ಡಾ. ಅಜಿತ್ ಕುಮಾರ್ ಮೊಹಾಂತಿ ಅವರು ಭರವಸೆ ನೀಡಿದ್ದಾರೆ.

    ಬುಧವಾರ ಕೈಗಾ ಅಣು ವಿದ್ಯುತ್ ಕೇಂದ್ರಕ್ಕೆ ಭೇಟಿ ನೀಡಿ ಅವರು ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ತಮ್ಮನ್ನು ಭೇಟಿಯಾದ ಕೈಗಾ ಪರಿಯೋಜನಾ ನೌಕರರ ಸಂಘದ ಪದಾಧಿಕಾರಿಗಳ ಅಹವಾಲನ್ನು ಆಲಿಸಿದರು. ಅವರ ಜತೆ ಕೆಲಕಾಲ ಚರ್ಚೆ ನಡೆಸಿದರು.

    ಅಣು ವಿದ್ಯುತ್ ನಿಗಮದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಗೆ ನಿವೃತ್ತಿಯ ನಂತರ ಪಿಂಚಣಿ ಸೌಲಭ್ಯ ಒದಗಿಸುವಂತೆ ಕರ್ನಾಟಕ ಹೈಕೋರ್ಟ್ ಧಾರವಾಡ ಪೀಠವು 2021ರ ನವೆಂಬರ್​ನಲ್ಲೇ ಆದೇಶ ನೀಡಿದೆ. ಅದನ್ನು ಆಧರಿಸಿ ಭಾರತೀಯ ಅಣು ವಿದ್ಯುತ್ ನಿಗಮ(ಎನ್​ಪಿಸಿಐಎಲ್) ಉಪ ಸಮಿತಿಯೊಂದನ್ನು ರಚಿಸಿದ್ದು, ಆ ಸಮಿತಿಯು ಅಣು ವಿದ್ಯುತ್ ನಿಗಮದ ಚೇರ್ಮನ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಅವರಿಗೆ ವರದಿ ನೀಡಿದೆ.

    2004ಕ್ಕೂ ಪೂರ್ವದಲ್ಲಿ ಕರ್ತವ್ಯಕ್ಕೆ ಸೇರಿದವರಿಗೆ ಹಳೆಯ ಪಿಂಚಣಿ ವ್ಯವಸ್ಥೆ ನೀಡಬೇಕು. ಹಾಗೂ ಇಲಾಖೆಯ ಮಾರ್ಗಸೂಚಿಯಂತೆ ಇತರರಿಗೂ ಪಿಂಚಣಿ ವ್ಯವಸ್ಥೆ ಜಾರಿ ಮಾಡಬೇಕು ಎಂದು ಉಪ ಸಮಿತಿ ಶಿಫಾರಸು ಮಾಡಿದೆ. ವರದಿಯನ್ನು ಆಧರಿಸಿ ಪಿಂಚಣಿ ಯೋಜನೆಯನ್ನು ಜಾರಿ ಮಾಡಬೇಕು ಎಂದು ಆಗ್ರಹಿಸಿ ನಾವು ಎನ್​ಪಿಸಿಐಎಲ್ ಸಿಎಂಡಿ ಹಾಗೂ ಇಲಾಖೆಗೆ ಈಗಾಗಲೇ ನಾಲ್ಕು ಬಾರಿ ಮನವಿ ನೀಡಿದ್ದೇವೆ. ಆದರೂ ಸ್ಪಂದನೆ ದೊರೆತಿಲ್ಲ ಎಂದು ಸಮಸ್ಯೆ ಹೇಳಿಕೊಂಡರು.

    ಅಲ್ಲದೆ, ಕೈಗಾ ಅಣು ವಿದ್ಯುತ್ ಸ್ಥಾವರಕ್ಕಾಗಿ ಸ್ಥಳೀಯರು ತಮ್ಮ ಮನೆ, ಜಮೀನುಗಳನ್ನು ನೀಡಿದ್ದಾರೆ. ಅದರಲ್ಲಿ ಕೆಲವರು ಎನ್​ಪಿಸಿಐಎಲ್​ನಲ್ಲಿ ಉದ್ಯೋಗ ಮಾಡಿ ನಿವೃತ್ತರಾಗಿದ್ದಾರೆ. ಆದರೆ, ಹೆಚ್ಚಿನವರ ಕರ್ತವ್ಯದ ಅವಧಿ ಕಡಿಮೆ ಇದ್ದುದರಿಂದ ಅವರಿಗೆ ಪಿಎಫ್ ಮುಂತಾದ ನಿವೃತ್ತಿ ಧನವೂ ಕಡಿಮೆ ಬಂದಿದೆ. ಪಿಂಚಣಿ ಉಪಧನ 2,3 ಲಕ್ಷದಷ್ಟು ಮಾತ್ರ ಬಂದಿದೆ. ಇದರಿಂದ ಅವರು ಜೀವನ ನಡೆಸುವುದೂ ಕಷ್ಟವಾಗಿದೆ. ಅಂಥವರಿಗೂ ಹಳೆಯ ಪಿಂಚಣಿ ವ್ಯವಸ್ಥೆ ಜಾರಿ ಮಾಡಬೇಕು ಎಂದು ಮನವಿ ಮಾಡಿದರು.

    ಸಭೆಯ ಸಂದರ್ಭದಲ್ಲಿ ಕೈಗಾ ಕೇಂದ್ರ ನಿರ್ದೇಶಕ ಪ್ರಮೋದ ರಾಯಚೂರ್, ಎಚ್​ಆರ್ ವಿಭಾಗದ ಮುಖ್ಯಸ್ಥೆ ಸುವರ್ಣಾ ಗಾಂವಕರ್, ಡಿಜಿಎಂ ಅಜಯ್ ಥಾಮಸ್, ಹಿರಿಯ ಮ್ಯಾನೇಜರ್ ಪತ್ತಾರ್, ಮತ್ತು ಮ್ಯಾನೇಜರ್ ಕಲ್ಪೇಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts