ವಿಜಯವಾಣಿ ಸುದ್ದಿಜಾಲ ಕೊಕ್ಕರ್ಣೆ
ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿ ಅನುಷ್ಠಾನವಾಗುತ್ತಿದ್ದು ಸಂಬಂಧಿಸಿದ ಇಲಾಖೆಗಳು ಈ ಕುರಿತು ಅಗತ್ಯ ಮಾಹಿತಿ ಮತ್ತು ಪ್ರಚಾರ ಕಾರ್ಯ ನಡೆಸಬೇಕಿದೆ ಎಂದು ಬ್ರಹ್ಮಾವರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷೆ ಡಾ.ಸುನೀತಾ ಶೆಟ್ಟಿ ಹೇಳಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಜರುಗಿದ ಗ್ಯಾರಂಟಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ, ಇಲಾಖೆಗಳ ಮೂಲಕ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಅಂಕಿ ಅಂಶಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಸುವ ಕೆಲಸವಾಗಬೇಕು ಎಂದು ಸೂಚಿಸಿದರು.
ಸಮಿತಿ ಸದಸ್ಯೆ ಗೋಪಿ ನಾಯ್ಕ ಮಾತನಾಡಿ, ಮಳೆಗಾಲ ಆರಂಭದ ಹಿನ್ನೆಲೆಯಲ್ಲಿ ಮೆಸ್ಕಾಂ ಇಲಾಖೆ ಸಾರ್ವಜನಿಕರಿಗೆ ತುರ್ತಾಗಿ ಸ್ಪಂದಿಸಬೇಕು ಎಂದು ಆಗ್ರಹಿಸಿದರು. ಚೇರ್ಕಾಡಿ ಪೇತ್ರಿಯಂತಹ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಹೆಚ್ಚಾಗಿದ್ದು, ಸಿಬ್ಬಂದಿ ನಿಯೋಜನೆ ಅಗತ್ಯವಿದೆ ಎಂದರು.
ಸದಸ್ಯ ರಮೇಶ್ ತಿಂಗಳಾಯ ಮಾತನಾಡಿ, ಕೋಡಿ ಬೇಂಗ್ರೆ ಪ್ರದೇಶದಲ್ಲಿ ಸರ್ಕಾರಿ ಬಸ್ ಇಲ್ಲ. ವಿದ್ಯಾರ್ಥಿಗಳು ಹಾಗೂ ನೌಕರರಿಗೆ ಅನುಕೂಲವಾಗುವಂತೆ ಬಸ್ ಸೌಲಭ್ಯ ಕಲ್ಪಿಸಬೇಕು ಎಂದರು. ಹಲವು ಬಾರಿ ತಿಳಿಸಿದರೂ ಕೆಎಸ್‌ಆರ್‌ಟಿಸಿ ಚಾಲಕರು ನಿಗದಿತ ನಿಲ್ದಾಣದಲ್ಲಿ ನಿಲ್ಲಿಸದ ಕಾರಣ ಮಹಿಳೆಯರಿಗೆ ಶಕ್ತಿ ಯೋಜನೆಯ ಸೌಲಭ್ಯ ಪಡೆಯಲು ಸಾಧ್ಯವಾಗದ ಕುರಿತು ಆಕ್ರೋಶ ವ್ಯಕ್ತಪಡಿಸಿದ ಸದಸ್ಯ ಶ್ರೀಕಾಂತ ಆಚಾರ್ಯ ಈ ಕುರಿತು ತತ್‌ಕ್ಷಣವೇ ಕ್ರಮಕ್ಕೆ ಆಗ್ರಹಿಸಿದರು.
ಇಕೆವೈಸಿ ಮತ್ತು ಖಾತಾ ಸಂಬಂಧಿಸಿದ ತಾಂತ್ರಿಕ ಸಮಸ್ಯೆಗಳಿಂದ ಕೆಲವು ಫಲಾನುಭವಿಗಳಿಗೆ ಗೃಹಲಕ್ಷ್ಮೀ ಸೌಲಭ್ಯಕ್ಕೆ ತೊಂದರೆಯಾಗಿದ್ದು ಇಲಾಖಾ ಹಂತದಲ್ಲಿ ಶೀಘ್ರ ಕ್ರಮ ಕೈಗೊಳ್ಳುವಂತೆ ಡಾ.ಸುನೀತಾ ಶೆಟ್ಟಿ ಸೂಚಿಸಿದರು.
ತಾಲೂಕು ಪಂಚಾಯಿತಿ ಇಒ ಎಚ್.ವಿ.ಇಬ್ರಾಹಿಂಪುರ, ಲೆಕ್ಕಾಧಿಕಾರಿ ಮೆಲ್ವಿನ್, ಸಹಾಯಕ ನಿರ್ದೇಶಕ ಮಹೇಶ್ ಕೆ., ಮೆಸ್ಕಾಂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಕೌಶಲಾಭಿವೃದ್ಧಿ ಇಲಾಖೆ, ಕೆಎಸ್‌ಆರ್‌ಟಿಸಿ, ತಾಲೂಕು ಪಂಚಾಯಿತಿ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು. ಗೋಪಾಲ್ ಸ್ವಾಗತಿಸಿದರು. ಮಹೇಶ್ ವಂದಿಸಿದರು.