

ವಿಜಯವಾಣಿ ಸುದ್ದಿಜಾಲ ಉಡುಪಿ
ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣ ಕಾರ್ಯಕ್ರಮದಡಿ ಏಳನೇ ಸುತ್ತಿನ ಕಾಲುಬಾಯಿ ಜ್ವರ ನಿಯಂತ್ರಣ ಲಸಿಕಾ ಕಾರ್ಯಕ್ರಮ ಏ.26ರಿಂದ ಜೂ.4ರ ವರೆಗೆ ನಡೆಯಲಿದೆ. ಅಗತ್ಯವಿರುವ ಲಸಿಕೆ ಹಾಗೂ ಇನ್ನಿತರ ಸಾಮಗ್ರಿಗಳ ದಾಸ್ತಾನು ಇದ್ದು, ಜಿಲ್ಲೆಯಲ್ಲಿ ಎಲ್ಲ ಜಾನುವಾರುಗಳಿಗೂ ಸಹ ಲಸಿಕೆ ಹಾಕಿಸುವ ಮೂಲಕ ಶೇ.100 ಗುರಿ ಸಾಧಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಸೂಚನೆ ನೀಡಿದರು.
ಉಡುಪಿ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಏ.19ರಂದು ಆಯೋಜಿಸಿದ್ದ ಜಾನುವಾರು ಕಾಲುಬಾಯಿ ಜ್ವರ ನಿಯಂತ್ರಣ ಲಸಿಕಾ ಕಾರ್ಯಕ್ರಮದ ಜಿಲ್ಲಾ ಮಟ್ಟದ ನಿರ್ವಹಣಾ ಸಮಿತಿ ಸಭೆ ಹಾಗೂ ಪಶು ಸಂಜೀವಿನಿ ವಾಹನಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಸಭೆಯಲ್ಲಿ ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ. ಎಂ.ಸಿ. ರೆಡ್ಡಪ್ಪ, ಮುಖ್ಯ ಪಶು ವೈದ್ಯಾಧಿಕಾರಿ ಡಾ.ಸಂದೀಪ, ತಾಲೂಕುಗಳ ಆಡಳಿತ ಮುಖ್ಯ ಪಶುವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.
ಕಳೆದ ಆರನೇ ಸುತ್ತಿನ ಕಾಲುಬಾಯಿ ಜ್ವರ ನಿಯಂತ್ರಣ ಲಸಿಕಾ ಕಾರ್ಯಕ್ರಮದಲ್ಲಿ ಜಿಲ್ಲೆಯ 2,08,558 ಜಾನುವಾರುಗಳ ಗುರಿ ನಿಗದಿಪಡಿಸಿ 2,00,888 ಜಾನುವಾರುಗಳಿಗೆ ಲಸಿಕೆ ಹಾಕಿಸಿ ಶೇ.96 ಪ್ರಗತಿ ಸಾಧಿಸಲಾಗಿದೆ. ಏಳನೇ ಸುತ್ತಿನಲ್ಲಿಯೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ಜಾನುವಾರುಗಳಿಗೆ ಲಸಿಕೆ ಹಾಕಿಸುವ ಮೂಲಕ ಅವುಗಳ ಆರೋಗ್ಯ ರಕ್ಷಣೆ ಮಾಡಬೇಕು. ಜಿಲ್ಲೆಯ ಕಾಪು, ಉಡುಪಿ, ಬೈಂದೂರು, ಹೆಬ್ರಿ, ಕುಂದಾಪುರ, ಕಾರ್ಕಳ ಹಾಗೂ ಬ್ರಹ್ಮಾವರ ತಾಲೂಕು ಮತ್ತು ಉಡುಪಿ ಪಾಲಿಕ್ಲಿನಿಕ್ನಲ್ಲಿ ತಲಾ ಒಂದರಂತೆ ಒಟ್ಟು 8 ಪಶು ಸಂಜೀವಿನಿ ಆಂಬುಲೆನ್ಸ್ ಘಟಕ ಕಾರ್ಯನಿರ್ವಹಿಸುತ್ತಿದೆ. ಪ್ರತಿ ಚಿಕಿತ್ಸಾ ಘಟಕದ ವಾಹನದಲ್ಲಿ ಪಶುವೈದ್ಯರು, ಪಶುವೈದ್ಯ ಸಹಾಯಕ ಹಾಗೂ ವಾಹನ ಚಾಲಕರು ನೇಮಕಗೊಂಡಿದ್ದಾರೆ. 2024-25ನೇ ಸಾಲಿನಲ್ಲಿ ಈ ವಾಹನಗಳ ಮೂಲಕ ಒಟ್ಟು 7,488 ಜಾನುವಾರುಗಳಿಗೆ ಚಿಕಿತ್ಸೆ ನೀಡಲಾಗಿದೆ.
ಪಶುವೈದ್ಯರು, ಸಿಬ್ಬಂದಿ, ಕೆಎಂಎಫ್ ಸಿಬ್ಬಂದಿ ಹಾಗೂ ತರಬೇತಿ ಹೊಂದಿರುವ ಪಶು ಸಖಿಯರ ಮೂಲಕ ಲಸಿಕಾ ಕಾರ್ಯಕ್ರಮ ನಡೆಯಲಿದೆ. ಇವರು ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ರೈತರು ಸಹಕಾರ ನೀಡಬೇಕು. ಜಾನುವಾರುಗಳ ಉತ್ಪನ್ನ ಹೆಚ್ಚಿಸಲು ಈ ಕಾರ್ಯಕ್ರಮ ಪ್ರಯೋಜನಕಾರಿಯಾಗಿದೆ. | ಡಾ. ಕೆ.ವಿದ್ಯಾಕುಮಾರಿ. ಉಡುಪಿ ಜಿಲ್ಲಾಧಿಕಾರಿ