ಗುಡವಿಯಲ್ಲಿ ಸಂತಾನೋತ್ಪತ್ತಿ ಸಂಭ್ರಮ; ಮಂಡಗದ್ದೆ ಪಕ್ಷಿಧಾಮ ಬರಡು!

Mandagadde
Published on

| ಶಿವಪ್ಪ ಹಿತ್ಲರ್/ ಅರವಿಂದ ಅಕ್ಲಾಪುರ ಶಿವಮೊಗ್ಗ

ವಿದೇಶಿ ಹಕ್ಕಿಗಳನ್ನು ಕಣ್ತುಂಬಿಕೊಳ್ಳಬೇಕು ಎಂದರೆ ಮಲೆನಾಡಿನ ಮಡಿಲಿನಲ್ಲಿರುವ ಮಂಡಗದ್ದೆ ಮತ್ತು ಗುಡವಿ ಪಕ್ಷಿಧಾಮಗಳು ನೆನಪಾಗುವುದು ಸಹಜ. ಸಂತಾನೋತ್ಪತ್ತಿಗೆ ವಿಶ್ವದೆಲ್ಲೆಡೆಯಿಂದ ಮಲೆನಾಡಿನ ಈ ಎರಡು ಪಕ್ಷಿಧಾಮಗಳಿಗೆ ಬರುವ ಪಕ್ಷಿಗಳನ್ನು ವೀಕ್ಷಣೆ ಮಾಡಲೆಂದೇ ರಾಜ್ಯಾದ್ಯಂತ ಪಕ್ಷಿಪ್ರೇಮಿಗಳು ಇಲ್ಲಿಗೆ ಬರುವ ಕಾಲ ಇತ್ತು. ಹೀಗಾಗಿಯೇ ಮಂಡಗದ್ದೆ ಎಂದರೆ, ಪಕ್ಷಿಧಾಮ ಎನ್ನುವ ಅನ್ವರ್ಥನಾಮ ಸಹಜವಾಗಿತ್ತು. ಆದರೆ ಈ ಪಕ್ಷಿಧಾಮ ತುಂಗೆಯಲ್ಲಿ ಮುಳುಗಡೆಯಾಗಿ ಇತಿಹಾಸದ ಪುಟ ಸೇರುವ ದಿನಗಳು ಸಮೀಪಿಸುತ್ತಿವೆ. ನಿರ್ಲಕ್ಷ್ಯ್ಕೆ ತುತ್ತಾಗಿದ್ದರೂ ಗುಡವಿ ಪಕ್ಷಿಧಾಮ ಇನ್ನೂ ಜೀವಂತಿಕೆ ಉಳಿಸಿಕೊಂಡಿದೆ. ಇಲ್ಲಿ ಮಲ್ಲಿಗೆ ಹೂವು ಚೆಲ್ಲಿದಂತೆ, ಶ್ವ್ವೇತವರ್ಣದ ವಲ್ಲಿ ಹಾಸಿದಂತೆ ಕಂಗೊಳಿಸುತ್ತ ಬಾನಂಗಳದಲ್ಲಿ ಹಾರುತ್ತಿರುವ ಪಕ್ಷಿಗಳ ಕಲರವ ಪ್ರವಾಸಿಗರನ್ನು ಮಂತ್ರ ಮುಗ್ಧರನ್ನಾಗಿಸುತ್ತದೆ. ಗುಡವಿ ಪಕ್ಷಿದಾಮದಲ್ಲಿ ಬಾನಾಡಿಗಳ ಸಂಭ್ರಮ ಮುಗಿಲು ಮುಟ್ಟಿದ್ದರೆ, ಮಂಡಗದ್ದೆ ಪಕ್ಷಿಧಾಮ ಯುದ್ಧ ನಂತರದ ರಣರಂಗದಂತೆ ಕಾಣಿಸುತ್ತಿದೆ.

ದ್ವೀಪದಲ್ಲಿ ಇದ್ದ ವೈಟೆಕ್ಸ್ ಮರಗಳು ನೆಲಕ್ಕುರುಳಿವೆ. ಇನ್ನು ಹಕ್ಕಿಗಳು ಇಲ್ಲಿಗೆ ವಲಸೆ ಬಂದು ಸಂತಾನೋತ್ಪತ್ತಿ ಮಾಡುವ ಮಾತೆಲ್ಲಿ? ಗುಡವಿ ಪಕ್ಷಿಧಾಮ ನಿರ್ಲಕ್ಷಕ್ಕೊಳಗಾಗಿದ್ದರೂ ಆಕರ್ಷಣೆ ಉಳಿಸಿಕೊಂಡಿದೆ. ಈ ಬಾರಿ ಮಳೆ ಉತ್ತಮವಾಗಿದ್ದರಿಂದ ಕೆರೆ ತುಂಬಿಕೊಂಡು ಎಲ್ಲೆಡೆ ಹಸಿರು ಕಂಗೊಳಿಸಿದ್ದು, ಸಂತಾನೋತ್ಪತ್ತಿಗಾಗಿ 50ರಿಂದ 55 ಸಾವಿರದಷ್ಟು ಪಕ್ಷಿಗಳು ಆಗಮಿಸಿವೆ. ಪ್ರತಿ ವರ್ಷ ಮಳೆಗಾಲ ಆರಂಭವಾಗುತ್ತಿದಂತೆ ಜೂನ್ ಮೊದಲ ವಾರದಿಂದ ವಲಸೆ ಬರುವ ಪಕ್ಷಿಗಳು ನವೆಂಬರ್ ಎರಡನೇ ವಾರದ ವೇಳೆಗೆ ಸಂತಾನೋತ್ಪತ್ತಿಯ ಕಾರ್ಯ ಮುಗಿಸಿಕೊಂಡು ಚಳಿಗಾಲ ಆರಂಭವಾಗುತ್ತಿದಂತೆ ಪರಿವಾರದೊಂದಿಗೆ ಮತ್ತೆ ಬೇರೆಡೆಗೆ ವಲಸೆ ಹೋಗುತ್ತವೆ. ಸೈಬೀರಿಯಾದ ಕರಿತಲೆ ಕೊಕ್ಕರೆ ಹಾಗೂ ಆಸ್ಟ್ರೇಲಿಯಾದ ತೂತುಬಿಲ್ಲೆ ಬೊಕಾಸ್ ಪಕ್ಷಿಗಳು ಗುಡವಿ ಪಕ್ಷಿಧಾಮಕ್ಕೆ ಬರುತ್ತವೆ. ಈ ಬಾರಿ ಸೈಬೀರಿಯಾದ ಹಕ್ಕಿಗಳು ಜುಲೈ ಮೊದಲ ವಾರದಲ್ಲಿ ಬಂದು ಸೆಪ್ಟೆಂಬರ್​ನಲ್ಲಿ ವಾಪಸ್ ಆಗಿವೆ. ಕಳೆದೆರಡು ವರ್ಷಗಳಿಗೆ ಹೋಲಿಸಿದರೆ, ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷಿಗಳು ಸೇರಿವೆ.

ಸ್ಥಳೀಯ ಬಿಳಿಕೊಕ್ಕರೆ, ಹಾವು ಹಕ್ಕಿ, ನೀರುಕಾಗೆ, ಬೂದುಬಕ, ರಾತ್ರಿಬುಕ, ಕೊಳದ ಬಕ, 12 ಪ್ರಬೇಧದ ನೀರುಕೋಳಿ, ಕರಿ ತಲೆ ಕೋಳಿ, ತುಪ್ಪಟ ಹಕ್ಕಿ, ನಕ್ಟಾ, ಲಿಟಲ್ ಗ್ರೇಬ್, ಪಿಂಟಲ್, ಕಾಮನ್ ಟೇಲ್, ಆಸ್ಟ್ರೀಚರ್, ಇಂಡಿಯನ್ ಮಾರ್ಟಿನ್, ಪರ್ಪಲ್ ಮಾರ್ಟಿನ್, ಕೂಟ್, ಉದ್ದಬಾಲದ ಹಕ್ಕಿ, ಬ್ರೌನ್ ವಿಂಗ್ಡ್ ಜಕಾನ್ ಹೀಗೆ 23ಕ್ಕೂ ಹೆಚ್ಚಿನ ಜಾತಿಯ ಪಕ್ಷಿಗಳು ಇವೆ. ಈಗಾಗಲೆ ಕೆಲ ಪಕ್ಷಿಗಳು ಮರಿಗೆ ಆಹಾರ ನೀಡುತ್ತಿದ್ದರೆ, ಇನ್ನು ಕೆಲವು ಪಕ್ಷಿಗಳು ತನ್ನ ಮರಿಗಳೊಂದಿಗೆ ಸ್ವಚ್ಛಂದವಾಗಿ ಹಾರಾಡುತ್ತಿವೆ. ಸಂಜೆಯಾದ ಬಳಿಕ ತಾಯಿ ಹಕ್ಕಿ ತನ್ನ ಮರಿಗಳಿಗೆ ಆಹಾರ ಉಣಿಸುವುದನ್ನು ನೋಡುವುದು, ಅವುಗಳ ಕಲರವ ಧ್ವನಿ ಕುತೂಹಲ ತರುತ್ತದೆ. ಒಣಗಿದ ಬಿದಿರಿನ ಪೊದೆಯೊಳಗೆ ಮೊಟ್ಟೆಯಿಟ್ಟು ಅಲ್ಲಿಯೇ ಮರಿ ಮಾಡಿ, ಅವುಗಳನ್ನು ಪೋಷಿಸಿ ವೈರಿಗಳಂತೆ ಇರುವ ಮಂಗಗಳಿಂದ ರಕ್ಷಿಸುವ ತಾಯಿಹಕ್ಕಿಯ ಹೊಣೆಗಾರಿಕೆ ಹೇಳಲಾಗದು.

ಪಕ್ಷಿಗಳು ಬಂದರೆ ಪ್ರವಾಸಿಗರು ಬರುತ್ತಾರೆ. ಈ ಬಾರಿ ಕಳದೆರಡು ವರ್ಷಗಳಿಗಿಂತ ಹೆಚ್ಚಿನ ಪಕ್ಷಿಗಳು ಬಂದಿವೆ. 5 ತಿಂಗಳು ಪಕ್ಷಿಗಳು ಇರುವಾಗ ಪ್ರವಾಸಿಗರ ಸಂಖ್ಯೆ ಹೆಚ್ಚಿರುತ್ತದೆ. ಕಳೆದೆರಡು ತಿಂಗಳಿಂದ 600ಕ್ಕೂ ಹೆಚ್ಚಿನ ಪ್ರವಾಸಿಗರು ಪಕ್ಷಿಧಾಾಮ ವೀಕ್ಷಿಸಿದ್ದಾರೆ. ವರ್ಷಕ್ಕೆ 2.5 ಲಕ್ಷ ರೂ. ಆದಾಯ ನಿರೀಕ್ಷಿಸಬಹುದು. | ಮಂಜುನಾಥ ವಲಯ ಉಪ ಅರಣ್ಯಾಧಿಕಾರಿ

ವಿದೇಶಿ ಪಕ್ಷಿಗಳು ಇನ್ನು ನೆನಪು ಮಾತ್ರ: ಕಳೆದ ಐದು ವರ್ಷಗಳವರೆಗೂ ಪ್ರತಿವರ್ಷ ಸೈಬೀರಿಯಾ, ಶ್ರೀಲಂಕಾ ಸೇರಿ ವಿವಿಧ ದೇಶಗಳಿಂದ ಜಾಲಪಾದ, ಹೊಟ್ಟೆಬಾಕ, ಕುಪ್ಪಳ ಮತ್ತಿತರೆ ಸಮುದ್ರ ಪಕ್ಷಿಗಳು ಸಂತಾನಾಭಿವೃದ್ಧಿಗೆಂದು ಮಂಡಗದ್ದೆ ಪಕ್ಷಿದಾಮಕ್ಕೆ ಬರುತ್ತಿದ್ದವು. ಕ್ರಮೇಣ ಮಳೆ ಹೆಚ್ಚಿದ ಕಾರಣ ನೀರಿನಲ್ಲಿ ಕೊಚ್ಚಿ ಹೋದ ಮೊಟ್ಟೆ, ಮರಿ, ಪಕ್ಷಿಗಳಿಗೆ ಲೆಕ್ಕವಿಲ್ಲ. ಬದುಕುಳಿದು ಸ್ವದೇಶಕ್ಕೆ ಹಾರಿಹೋದವು ಮತ್ತೆ ಇತ್ತಕಡೆ ಮುಖ ಮಾಡಲಿಲ್ಲ.

ಅಂತ್ಯ ಕಾಲದಲ್ಲಿ ಅಧಿಕೃತ ಘೋಷಣೆ: ವರ್ಷದ ಹಿಂದಷ್ಟೇ ಮಂಡಗದ್ದೆ ಪಕ್ಷಿಧಾಮವನ್ನು ಅಧಿಕೃತವಾಗಿ ಪ್ರವಾಸಿ ತಾಣ ಎಂದು ಘೊಷಿಸಲಾಯಿತು. ಬಳಿಕವೂ ಪ್ರವಾಸೋದ್ಯಮ ಇಲಾಖೆಯ ಕೃಪಾಕಟಾಕ್ಷ ಇದರ ಮೇಲೆ ಬೀಳಲಿಲ್ಲ. ಇದ್ದ 2-3ವೈಟೆಕ್ಸ್ ಮರಗಳು ಪ್ರವಾಹಕ್ಕೆ ಸಿಕ್ಕು ನೆಲ ಕಚ್ಚಿದವು. ಕಳೆದ ಮೂರ್ನಾಲ್ಕು ವರ್ಷಗಳ ಸತತ ಮಳೆಯ ಪರಿಣಾಮ ಹಕ್ಕಿಗಳು ಗೂಡು ಕಟ್ಟುವ ದ್ವೀಪ ಶಿಥಿಲಗೊಂಡಿತ್ತು. ಈ ವರ್ಷ ಪಕ್ಷಿಗಳ ಕಲರವವೇ ಇಲ್ಲದಂತಾಗಿದೆ.

ಮಂಡಗದ್ದೆ ಪಕ್ಷಿಧಾಮವೆಲ್ಲಿ?: ಒಂದು ಕಾಲದಲ್ಲಿ ಶಿವಮೊಗ್ಗ ಜಿಲ್ಲೆಯ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಹೆಸರು ಪಡೆದಿದ್ದ ಮಂಡಗದ್ದೆಯಲ್ಲಿ ಈಗ ಪಕ್ಷಿಧಾಮವೇ ಇಲ್ಲ. ಮಂಡಗದ್ದೆ ಮಾರ್ಗದಲ್ಲಿ ಸಾಗುವವರು ಗತಕಾಲದ ವೈಭವವನ್ನು ನೆನಪಿಸಿಕೊಂಡು ಮುಂದೆ ಸಾಗುವುದೊಂದೇ ಉಳಿದಿರುವ ಮಾರ್ಗ. ಆಳುವವರ ಅಚಾತುರ್ಯ ಮತ್ತು ಅಧಿಕಾರಿಗಳ ಉದಾಸೀನ ಮಂಡಗದ್ದೆ ಪಕ್ಷಿಧಾಮ ಇತಿಹಾಸದ ಪುಟ ಸೇರುವಂತಾಗಿದೆ. ತುಂಗಾ ಮೇಲ್ದಡೆ ಯೋಜನೆ ಅನುಷ್ಠಾನದ ವೇಳೆ ಪಕ್ಷಿದಾಮದ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳದ ಕಾರಣ, ಮಳೆಗಾಲದಲ್ಲಿ ಅಪಾರ ಪ್ರಮಾಣದ ನೀರು ಹರಿದುಬಂದು ದ್ವೀಪಕ್ಕೆ ಹೆಚ್ಚು ಹಾನಿ ಉಂಟಾಯಿತು. ವರ್ಷದಿಂದ ವರ್ಷಕ್ಕೆ ಹಾನಿ ಹೆಚ್ಚುತ್ತಿದ್ದಂತೆ ಪಕ್ಷಿಗಳು ಇತ್ತ ಮುಖ ಮಾಡುವುದೂ ಕಡಿಮೆಯಾಯಿತು. ಈ ಮೊದಲು ತುಂಗಾ ಅಣೆಕಟ್ಟು ಹಿನ್ನೀರು ಪಕ್ಷಿಗಳಿಗೆ ವರವಾಗಿತ್ತು. ಆಗ ಬಾನಾಡಿಗಳು ಸ್ವಚ್ಛಂದವಾಗಿ ವಿಹರಿಸುತ್ತಿದ್ದವು. ಯಾವಾಗ ತುಂಗಾ ಮೇಲ್ಡಂಡೆ ಯೋಜನೆಗಾಗಿ ಅಣೆಕಟ್ಟನ್ನು ಎತ್ತರಿಸಲಾಯಿತೋ ಅಂದಿನಿಂದ ತುಂಗಾನದಿಯ ಹಿನ್ನೀರಿನ ಮಟ್ಟ ಅಧಿಕವಾಯಿತು. ಮಳೆಗಾಲದಲ್ಲಿ ಬಾನಾಡಿಗಳಿಗೆ ಆಶ್ರಯ ನೀಡಿರುವ ನಡುಗಡ್ಡೆ ಮುಳುಗತೊಡಗಿತು. ಮರಗಳ ತಳಭಾಗದಲ್ಲಿ ಪಕ್ಷಿಗಳು ಕಟ್ಟುವ ಬಹುತೇಕ ಗೂಡುಗಳು ನೀರು ಪಾಲಾದವು. ಪ್ರತಿ ವರ್ಷ ಶೇ.25 ಗೂಡುಗಳು ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದವು. ಈಗ ಪಕ್ಷಿಗಳು ಗೂಡು ಕಟ್ಟುವ ವೈಟೆಕ್ಸ್ ಮರಗಳೂ ಇಲ್ಲದಾಗಿದೆ. ಪಕ್ಷಿದಾಮ ಇನ್ನು ನೆನಪು ಮಾತ್ರ.

ಸೊರಬದಿಂದ 13 ಕಿ.ಮೀ. ದೂರ: ಸೊರಬದಿಂದ 13 ಕಿಮೀ ದೂರದಲ್ಲಿರುವ ಗುಡವಿ ಪಕ್ಷಿಧಾಮವನ್ನು 1986ರಲ್ಲಿ ಗುರುತಿಸಲಾಗಿದೆ. 96 ಎಕರೆ ಅರಣ್ಯ ಭೂಮಿ ಇದ್ದು, 87 ಎಕರೆ ವಿಶಾಲವಾದ ಕೆರೆಯನ್ನೊಳಗಂಡಂತೆ 183 ಎಕರೆಯ ಈ ಪಕ್ಷಿಧಾಮ ಇತರ ಪಕ್ಷಿಧಾಮಗಳಿಗೆ ಹೋಲಿಸಿದರೆ ಕಡಿಮೆಯೇನು ಇಲ್ಲ. ಆಹಾರಕ್ಕಾಗಿ ವಿವಿಧ ಹಣ್ಣಿನ ಗಿಡ ಬೆಳೆಸಿ, ವೀಕ್ಷಕರಿಗೆ ಕೆಲ ನಿರ್ಬಂಧ ಹೇರುವ ಮೂಲಕ ಪಕ್ಷಿಗಳಿಗೆ ರಕ್ಷಣೆ ಒದಗಿಸಲಾಗಿದೆ. ವೀಕ್ಷಕರಿಗಾಗಿ ಗ್ರಾಮೀಣ ಮಾದರಿ ರಸ್ತೆ, ವೀಕ್ಷಣಾ ಗೋಪುರ, ಇಡೀ ಆವರಣ ಸುತ್ತು ಹಾಕಲು ಕಾಲು ಸಂಕ, ಅಲ್ಲಲ್ಲಿ್ಲ ವಿಶ್ರಾಂತಿ ಛಾವಣಿ, ಮಕ್ಕಳಿಗಾಗಿ ಕಿಂಡರ್ ಗಾರ್ಡನ್, ಬೋಟಿಂಗ್ ವ್ಯವಸ್ಥೆ, ಕುಡಿಯುವ ನೀರಿನ ಸೌಲಭ್ಯ ಒದಗಿಸಲಾಗಿದೆ. ಪ್ರಸ್ತತ ಕ್ಯಾಂಟೀನ್ ವ್ಯವಸ್ಥೆ ಇಲ್ಲ. ವಸತಿ ಗೃಹಗಳು ಸಮರ್ಪಕವಾಗಿಲ್ಲ. ಈಗ ಬೋಟಿಂಗ್ ಕೂಡ ಸ್ಥಗಿತಗೊಂಡಿವೆ. ಪ್ರವಾಸಿಗರು ಕೂತು ನೋಡುವಂಥ ವೀಕ್ಷಣಾ ಕಟ್ಟೆಗಳು ಶಿಥಿಲಗೊಂಡಿವೆ. ದ್ವಾರ ಬಾಗಿಲಿನಿಂದ ಪಕ್ಷಿಧಾಮದವರೆಗೂ ರಸ್ತೆಯೆಲ್ಲ ಹಾಳಾಗಿದೆ. ಪಕ್ಷಿಧಾಮದ ನಿರ್ವಹಣೆಗೆ ಸಿಬ್ಬಂದಿ ಕೊರತೆಯಿದ್ದು, ಪಕ್ಷಿಧಾಮಕ್ಕೆ ಪ್ರವೇಶ ಶುಲ್ಕ 50 ರೂ. ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net