ಪ್ರೊ ಕಬಡ್ಡಿ ಲೀಗ್​ ಆಟಗಾರರ ಹರಾಜು ಪ್ರಕ್ರಿಯೆಯ ಪರಿಷ್ಕೃತ ದಿನಾಂಕ ಪ್ರಕಟ

kabaddi web
Published on

ಮುಂಬೈ: ಇತ್ತೀಚೆಗೆ ಮುಂದೂಡಲ್ಪಟ್ಟಿದ್ದ ಪ್ರೊ ಕಬಡ್ಡಿ ಲೀಗ್​ 10ನೇ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆ ಅಕ್ಟೋಬರ್​ 9 ಮತ್ತು 10ರಂದು ಮರುನಿಗದಿಯಾಗಿದೆ. 500ಕ್ಕೂ ಅಧಿಕ ಆಟಗಾರರು ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದು, ತಂಡಗಳ ಬಜೆಟ್​ ಮಿತಿ ಈ ಬಾರಿ 4.4 ಕೋಟಿ ರೂ.ನಿಂದ 5 ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ಟೂರ್ನಿಯ ಸಂಟಕ ಮಶಾಲ್​ ಸ್ಪೋರ್ಟ್ಸ್​ ಶುಕ್ರವಾರ ಪ್ರಕಟಿಸಿದೆ.

ಈ ಮುನ್ನ ಸೆಪ್ಟೆಂಬರ್​ 8-9ರಂದು ನಿಗದಿಯಾಗಿದ್ದ ಹರಾಜು ಪ್ರಕ್ರಿಯೆಯನ್ನು, ಏಷ್ಯಾಡ್​ಗೆ ಮುನ್ನ ನಿಗದಿಯಾಗಿರುವ ತರಬೇತಿ ಶಿಬಿರದತ್ತ ಆಟಗಾರರು ಗಮನ ಕೇಂದ್ರೀಕರಿಸಲಿ ಎಂದು ಭಾರತೀಯ ಅಮೆಚೂರ್​ ಕಬಡ್ಡಿ ಒಕ್ಕೂಟದ ಮನವಿಯ ಮೇರೆಗೆ ಮುಂದೂಡಲಾಗಿತ್ತು. ಹರಾಜಿನಲ್ಲಿ ಪಾಲ್ಗೊಳ್ಳುವ ಆಟಗಾರರನ್ನು ಎ, ಬಿ, ಸಿ ಮತ್ತು ಡಿ ಎಂದು 4 ಕೆಟಗರಿಗಳಲ್ಲಿ ವಿಂಗಡಿಸಲಾಗುತ್ತದೆ. ಇದರಲ್ಲಿ ಮತ್ತೆ ಆಲ್ರೌಂಡರ್ಸ್​, ಡಿಫೆಂಡರ್ಸ್​, ರೈಡರ್ಸ್​ ಎಂಬ ಉಪವಿಭಾಗಗಳು ಇರುತ್ತವೆ.

ಎ, ಬಿ, ಸಿ, ಡಿ ಕೆಟಗರಿಯ ಆಟಗಾರರಿಗೆ ಕ್ರಮವಾಗಿ 30, 20, 13, 9 ಲಕ್ಷ ರೂ. ಮೂಲಬೆಲೆ ನಿಗದಿಪಡಿಸಲಾಗಿದೆ. 12 ತಂಡಗಳು ಈಗಾಗಲೆ ಒಟ್ಟು 84 ಆಟಗಾರರನ್ನು ರಿಟೇನ್​ ಮಾಡಿಕೊಂಡಿವೆ. ಪವನ್​ ಶೆರಾವತ್​, ವಿಕಾಸ್​ ಕಂಡೋಲಾ, ಜಲ್​ ಅತ್ರಚಲಿ ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ ಪ್ರಮುಖ ಆಟಗಾರರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net