ಮತ್ತೆ ನಿರ್ಮಾಣಕ್ಕೆ ಪುನೀತ್ ... ಹೊಸ ಚಿತ್ರ ಯಾವುದು ಗೊತ್ತಾ?

PRK Productions - Final
Published on

ಇತ್ತೀಚೆಗಷ್ಟೇ ಪುನೀತ್ ರಾಜಕುಮಾರ್ ಅವರ ಪಿಆರ್‌ಕೆ ಪ್ರೊಡಕ್ಷನ್ಸ್ ಬ್ಯಾನರ್‌ನಿಂದ ‘ಮಾಯಾ ಬಜಾರ್’ ಎಂಬ ಚಿತ್ರ ಬಿಡುಗಡೆಯಾಗಿದೆ. ಆ ಚಿತ್ರ ಅಮೇಜಾನ್ ಪ್ರೈಮ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಲೂ ಇದೆ. ಈ ಮಧ್ಯೆ ಪುನೀತ್ ನಿರ್ಮಾಣದಲ್ಲಿ ಫ್ಯಾಮಿಲಿ ಪ್ಯಾಕ್’ ಎಂಬ ಹೊಸ ಚಿತ್ರ ಸದ್ದಿಲ್ಲದೆ ಪ್ರಾರಂಭವಾಗಲಿದೆ.

ಎರಡು ವರ್ಷಗಳ ಹಿಂದೆ ‘ಸಂಕಷ್ಟಕರ ಗಣಪತಿ’ ಎಂಬ ವಿಭಿನ್ನ ಕಾನ್ಸೆಪ್ಟ್‌ನ ಸಿನಿಮಾ ಬಿಡುಗಡೆಯಾಗಿದ್ದು ನೆನಪಿರಬೇಕಲ್ಲಾ? ಆ ಚಿತ್ರ ತಕ್ಕ ಮಟ್ಟಿಗೆ ಸುದ್ದಿಯೂ ಆಯ್ತು. ಆದರೆ, ಆ ನಂತರ ಲಿಖಿತ್ ಶೆಟ್ಟಿ ಯಾವೊಂದು ಚಿತ್ರದಲ್ಲೂ ನಟಿಸಿರಲಿಲ್ಲ. ಈಗ ಲಿಖಿತ್ ಅಭಿನಯದಲ್ಲಿ ಪುನೀತ್,  'ಫ್ಯಾಮಿಲಿ ಪ್ಯಾಕ್’ ಎಂಬ ಹೊಸ ಚಿತ್ರ ನಿರ್ಮಿಸುತ್ತಿದ್ದಾರೆ. ಲಿಖಿತ್ ಈ ಚಿತ್ರದಲ್ಲಿ ನಾಯಕ ಅಷ್ಟೇ ಅಲ್ಲ, ಒನ್ ಆಪ್ ದಿ ನಿರ್ಮಾಪಕರೂ ಹೌದು.

ಈ ಹಿಂದೆ ‘ಸಂಕಷ್ಟಕರ ಗಣಪತಿ’ ಚಿತ್ರವನ್ನು ನಿರ್ದೇಶಿಸಿದ್ದ ಅರ್ಜುನ್ ಕುಮಾರ್’ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇನ್ನು ಇತ್ತೀಚೆಗೆ ‘ಲವ್ ಮಾಕ್‌ಟೇಲ್’, ‘ಪಾಪ್‌ಕಾರ್ನ್ ಮಂಕಿ ಟೈಗರ್’ ಮತ್ತು ‘ಶಿವಾರ್ಜುನ’ ಚಿತ್ರಗಳಲ್ಲಿ ನಟಿಸಿರುವ ಅಮೃತಾ ಅಯ್ಯಂಗಾರ್, ಲಿಖಿತ್ ಎದುರು ನಾಯಕಿಯಾಗಿ ಸೆಲೆಕ್ಟ್ ಆಗಿದ್ದಾರೆ. ಮಿಕ್ಕಂತೆ ರಂಗಾಯಣ ರಘು, ಅಚ್ಯುತ್ ಕುಮಾರ್, ತಿಲಕ್, ಅಶ್ವಿನಿ ಗೌಡ ಮುಂತಾದವರು ನಟಿಸುತ್ತಿರುವ ಈ ಚಿತ್ರಕ್ಕೆ ಗುರುಕಿರಣ್ ಸಂಗೀತ ಕಂಪೋಸ್ ಮಾಡಿದರೆ, ಮಾಸ್ತಿ ಮಂಜು ಸಂಭಾಷಣೆ ಬರೆಯುತ್ತಿದ್ದಾರೆ.

ಸದ್ಯಕ್ಕೆ ಚಿತ್ರದ ಫೋಟೋ ಶೂಟ್ ಮುಗಿದಿದ್ದು, ಲಾಕ್‌ಡೌನ್ ಮುಗಿದ ನಂತರ ಚಿತ್ರ ಪ್ರಾರಂಭವಾಗುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net