

ನವದೆಹಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇಂದು (ಸೋಮವಾರ) ಸದನದಲ್ಲಿ ಹಿಂದೂಗಳನ್ನು ಹಿಂಸಾತ್ಮಕ ಎಂದು ಕರೆದಿದ್ದಾರೆ ಎಂದು ಬಿಜೆಪಿ ಆರೋಪಿಸುತ್ತಿದ್ದಂತೆ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ತಮ್ಮ ಸಹೋದರ ಹಿಂದೂಗಳನ್ನು ಅವಮಾನಿಸಿಲ್ಲ, ಆದರೆ ಬಿಜೆಪಿ ಮತ್ತು ಅದರ ನಾಯಕರ ಕುರಿತು ಮಾತನಾಡಿದ್ದಾರೆ ಎಂದು ಸಮಜಾಯಿಷಿ ನೀಡಿದ್ದಾರೆ.
ಸಂಸತ್ ಭವನದಿಂದ ಹೊರಟ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಅವರು, ಹಿಂದೂಗಳನ್ನು ಅವಮಾನಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿದರು. ಬಿಜೆಪಿ ಬಗ್ಗೆ ಹಾಗೂ ಪಕ್ಷದ ನಾಯಕರ ಬಗ್ಗೆ ರಾಹುಲ್ ಗಾಂಧಿ ಮಾತನಾಡಿದ್ದಾರೆ ಎಂದರು.
ರಾಹುಲ್ ಗಾಂಧಿ ಹೇಳಿದ್ದೇನು?:
ಇಂದು ಲೋಕಸಭೆಯಲ್ಲಿ ಶಿವನ ಫೋಟೋವನ್ನು ಹಿಡಿದು ಮಾತನಾಡಿದ್ದ ರಾಹುಲ್ ಗಾಂಧಿ, “ನಮ್ಮ ಮಹಾಪುರುಷರೆಲ್ಲರೂ ಅಹಿಂಸೆಯ ಬಗ್ಗೆ ಮಾತನಾಡಿದ್ದಾರೆ. ಆದರೆ ತಮ್ಮನ್ನು ತಾವು ಹಿಂದೂ ಎಂದು ಕರೆದುಕೊಳ್ಳುವವರು ಹಿಂಸೆ, ದ್ವೇಷ, ಅಸತ್ಯದ ಬಗ್ಗೆ ಮಾತ್ರ ಮಾತನಾಡುತ್ತಾರೆ. ನೀವು ಯಾವುದೇ ರೀತಿಯಲ್ಲಿ ಹಿಂದೂ ಅಲ್ಲ.” ಎಂದು ಬಿಜೆಪಿ ನಾಯಕರತ್ತ ಕೈ ತೋರಿಸಿ ಹೇಳಿದ್ದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಪ್ರಧಾನಿ ನರೇಂದ್ರ ಮೋದಿಯ, “ಇಡೀ ಹಿಂದೂ ಸಮುದಾಯವನ್ನು ಹಿಂಸಾತ್ಮಕ ಎಂದು ಕರೆಯುವುದು ಅತ್ಯಂತ ಗಂಭೀರವಾದ ಆರೋಪವಾಗಿದೆ” ಎಂದು ಹೇಳಿದ್ದರು. ಅದಕ್ಕೆ ತಿರುಗುತ್ತರ ನೀಡಿದ್ದ ರಾಹುಲ್ ಗಾಂಧಿ, “ನಾನು ಪ್ರಧಾನಿ ಮೋದಿ, ಬಿಜೆಪಿ-ಆರ್‌ಎಸ್‌ಎಸ್ ಹಿಂಸಾತ್ಮಕ ಧೋರಣೆ ತಳೆದಿದೆ ಎಂದು ಹೇಳಿದ್ದು. ಮೋದಿ, ಆರ್‌ಎಸ್‌ಎಸ್, ಬಿಜೆಪಿ ಮಾತ್ರ ಹಿಂದೂ ಸಮುದಾಯವಲ್ಲ” ಎಂದು ತಿರುಗೇಟು ನೀಡಿದ್ದರು.