ಮೊದಲ ಸ್ಥಾನದಲ್ಲಿ ಪ್ರಿಯಾಂಕಾ: ಇನ್​ಸ್ಟಾಗ್ರಾಂ ಶ್ರೀಮಂತ ಸೆಲೆಬ್ರಿಟಿಗಳ ಪಟ್ಟಿ ಬಿಡುಗಡೆ

Ullasa
Published on

ಬಾಲಿವುಡ್ ಸೆಲೆಬ್ರಿಟಿಗಳು ಇನ್​ಸ್ಟಾಗ್ರಾಂನಲ್ಲಿ ಒಂದಲ್ಲ ಒಂದು ಪೋಸ್ಟ್​ಗಳನ್ನು ಹಾಕುತ್ತಲೇ ಇರುತ್ತಾರೆ. ಎಲ್ಲ ಪೋಸ್ಟ್​ಗಳು ಸಹ ಉಚಿತ ಮತ್ತು ಅವೆಲ್ಲವೂ ಅವರ ವೈಯಕ್ತಿಕ ಎಂದು ಹೇಳುವುದು ಕಷ್ಟ. ಏಕೆಂದರೆ, ಕೆಲವು ಪೋಸ್ಟ್​ಗಳು ಪ್ರಾಯೋಜಿತವಾಗಿರುತ್ತವೆ. ಸೆಲೆಬ್ರಿಟಿಗಳು ತಮ್ಮ ಖಾತೆಗಳ ಮೂಲಕ ಜನಪ್ರಿಯ ಬ್ರಾಂಡ್​ಗಳ ಪ್ರಚಾರ ಮಾಡಿದರೆ, ಅವರಿಗೆ ಕೈತುಂಬಾ ಹಣ ಸಿಗುತ್ತದೆ. ಹಾಗೆ ಪ್ರಾಯೋಜಿತ ಪೋಸ್ಟ್​ಗಳ ಮೂಲಕ ಅತೀ ಹೆಚ್ಚು ಹಣ ಸಂಪಾದಿಸುವ ಭಾರತೀಯ ಸೆಲೆಬ್ರಿಟಿಗಳ ಪಟ್ಟಿ ಬಿಡುಗಡೆಯಾಗಿದ್ದು, ಈ ಪಟ್ಟಿಯಲ್ಲಿ ಪ್ರಿಯಾಂಕಾ ಚೋಪ್ರಾಗೆ ಮೊದಲ ಸ್ಥಾನ ಸಿಕ್ಕಿದೆ. ಬಾಲಿವುಡ್ ಸೆಲೆಬ್ರಿಟಿಗಳ ಪೈಕಿ ಅತೀ ಹೆಚ್ಚು ಹಿಂಬಾಲಕರನ್ನು ಹೊಂದಿರುವವರೆಂದರೆ ಅದು ಪ್ರಿಯಾಂಕಾ ಚೋಪ್ರಾ.

ಪ್ರಿಯಾಂಕಾ, ಹಾಲಿವುಡ್ ಚಿತ್ರಗಳಲ್ಲೂ ನಟಿಸಿರುವುದರಿಂದ ಜಗತ್ತಿನಾದ್ಯಂತ ಅವರಿಗೆ ಅಭಿಮಾನಿಗಳಿದ್ದಾರೆ. ಇನ್​ಸ್ಟಾಗ್ರಾಂನಲ್ಲೇ ಅವರಿಗೆ 63 ಮಿಲಿಯನ್ ಹಿಂಬಾಲಕರಿದ್ದಾರೆ. ಅವರ ಒಂದು ಪೋಸ್ಟ್ ಅತೀ ಹೆಚ್ಚು ಜನರಿಗೆ ತಲುಪುವುದರಿಂದ, ಪ್ರಾಯೋಜಿತ ಪೋಸ್ಟ್​ಗಳನ್ನು ಹಾಕುವುದಕ್ಕೆ ಅವರಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ಒಂದು ಪೋಸ್ಟ್ ಹಾಕುವುದಕ್ಕೆ ಪ್ರಿಯಾಂಕಾಗೆ 1.80 ಕೋಟಿ ರೂ.ಗಳವರೆಗೂ ಕೊಡಲಾಗುತ್ತದೆ ಎಂದು ಹೇಳಲಾಗಿದೆ. ಪ್ರಿಯಾಂಕಾ ನಂತರದ ಸ್ಥಾನದಲ್ಲಿ ಆಲಿಯಾ ಭಟ್ ಇದ್ದು, ಅವರಿಗೆ 53 ಮಿಲಿಯನ್ ಹಿಂಬಾಲಕರಿದ್ದಾರೆ. ಆಲಿಯಾ ಸಹ ಒಂದು ಪೋಸ್ಟ್ ಹಾಕುವುದಕ್ಕೆ ಒಂದು ಕೋಟಿ ರೂ. ಪಡೆಯುತ್ತಾರಂತೆ. 24.8 ಮಿಲಿಯನ್ ಹಿಂಬಾಲಕರಿಂದಾಗಿ ಮೂರನೇ ಸ್ಥಾನದಲ್ಲಿರುವ ಶಾರೂಖ್ ಖಾನ್, ಒಂದು ಪೋಸ್ಟ್ ಹಾಕುವುದಕ್ಕೆ ಪಡೆಯುವ ಹಣ 80 ಲಕ್ಷ ರೂ ಅಂತೆ. ಇನ್ನು, ಅಮಿತಾಭ್ ಬಚ್ಚನ್ ಅವರಿಗೆ 26.6 ಮಿಲಿಯನ್ ಹಿಂಬಾಲಕರಿದ್ದು, ಒಂದು ಪೋಸ್ಟ್​ಗೆ ಅವರಿಗೆ 50 ಲಕ್ಷ ರೂ. ಸಂದಾಯವಾಗುತ್ತದೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net