ಉಪ್ಪಿನಂಗಡಿ: ರಾಜ್ಯ ಸರ್ಕಾರ ಕೃಷಿಕರ ಅಭಿವೃದ್ಧಿಗಾಗಿ ಹಾಗೂ ಕೃಷಿ ಕಾರ್ಯದಲ್ಲಿ ಆಧುನಿಕತೆ ಅಳವಡಿಸಿಕೊಳ್ಳಲು ಹಲವಾರು ಯೋಜನೆ ಜಾರಿಗೊಳಿಸಿದ್ದು, ಈ ಯೋಜನೆಗಳು ಬಡ ಕೃಷಿಕರನ್ನು ತಲುಪಲು ಇಲಾಖಾಧಿಕಾರಿಗಳು ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದರು.
ಉಪ್ಪಿನಂಗಡಿಯ ರೈತ ಸಂಪರ್ಕ ಕೇಂದ್ರದಲ್ಲಿ ಸೋಮವಾರ ಆಯೋಜಿಸಲಾಗಿದ್ದ ರೈತ ಫಲಾನುಭವಿಗಳಿಗೆ ವಿವಿಧ ಸೌಲಭ್ಯ ವಿತರಿಸಿ ಮಾತನಾಡಿ, ಈ ಬಾರಿ ಹುಲ್ಲು ಕತ್ತರಿಸುವ ಯಂತ್ರ, ಔಷಧಿ ಸಿಂಪಡಣೆ ಯಂತ್ರ, ಪಿವಿಸಿ ಪೈಪ್, ಸ್ಪಿಂಕ್ಲರ್‌ಗಳನ್ನು ಆಯ್ದ ರೈತರಿಗೆ ವಿತರಿಸಲಾಗಿದೆ ಎಂದರು.
40ಕ್ಕೂ ಹೆಚ್ಚಿನ ಫಲಾನುಭವಿಗಳನ್ನು ಕೃಷಿ ಇಲಾಖಾಧಿಕಾರಿಗಳು ಯಾವುದೇ ಪ್ರಕಟಣೆ ನೀಡದೆ ಗುಪ್ತವಾಗಿ ವ್ಯವಹಾರ ಕುದುರಿಸಿ ಆಯ್ಕೆ ಮಾಡಿದ್ದಾರೆ ಎಂದು ಶಾಸಕರ ಮುಂದೆಯೇ ಆರೋಪ ವ್ಯಕ್ತವಾಗಿ ಅಧಿಕಾರಿಗಳನ್ನು ಇರಿಸುಮುರಿಸಿಗೆ ಒಳಗಾಗಿಸಿತು. ಸಾಲದಕ್ಕೆ ಸೌಲಭ್ಯಗಳ ವಿತರಣಾ ಕಾರ್ಯಕ್ರಮಕ್ಕೂ ಪತ್ರಿಕಾ ಮಾಧ್ಯಮದ ಮಂದಿಗೆ ಆಮಂತ್ರಣ ನೀಡದೆ ಗೌಪ್ಯತೆ ಕಾಪಾಡಲಾಗಿತ್ತು. ಇನ್ನು ಮುಂದೆ ಪ್ರಕಟಣೆ ಹೊರಡಿಸಿಯೇ ಫಲಾನುಭವಿಗಳ ಆಯ್ಕೆ ನಡೆಸಬೇಕೆಂದು ಶಾಸಕರು ತಾಕೀತು ಮಾಡಿದರು.
ಉಪ್ಪಿನಂಗಡಿ ಗ್ರಾಪಂ ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು, ಪಂಚಾಯಿತಿ ಸದಸ್ಯ ಯು.ಟಿ ತೌಷಿಫ್, ಡಾ.ರಾಜಾರಾಮ ಕೆ.ಬಿ, ಜಯಪ್ರಕಾಶ್ ಬದಿನಾರು, ಅಶ್ರಫ್ ಬಸ್ತಿಕಾರ್, ಚಂದ್ರಹಾಸ ಶೆಟ್ಟಿ, ಕೃಷ್ಣ ರಾವ್ ಅರ್ತಿಲ, ಸಣ್ಣಣ್ಣ, ಅಸ್ಕರಾಲಿ, ಅಜೀಜ್ ಬಸ್ತಿಕಾರ್, ಕೈಲಾರ್ ರಾಜಗೋಪಾಲ ಭಟ್, ಶಬೀರ್ ಕೆಂಪಿ ಮೊದಲಾದವರು ಉಪಸ್ಥಿತರಿದ್ದರು.
ಬಂಜಾರು ಕಾಲನಿ ಪ್ರಕರಣ ವಾಪಸ್ : ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಮನವಿ