

ಬೆಂಗಳೂರು: ನಷ್ಟದ ಕಾರಣಕ್ಕೆ ಮುಚ್ಚಿರುವ ಸರ್ಕಾರಿ ಕ್ಷೇತ್ರದ ಮೈಸೂರು ಶುಗರ್ ಕಂಪನಿ ಲಿ. (ಮೈಶುಗರ್), ಸಹಕಾರಿ ರಂಗದ ಶ್ರೀರಾಮ ಹಾಗೂ ಪಾಂಡವಪುರ ಸಕ್ಕರೆ ಕಾರ್ಖಾನೆಗಳನ್ನು ಖಾಸಗಿಯವರಿಗೆ ಹಸ್ತಾಂತರಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ಸಕ್ಕರೆ ಖಾತೆ ಸಚಿವ ಶಿವರಾಂ ಹೆಬ್ಬಾರ್ ತಿಳಿಸಿದರು.
ಮೇಲ್ಮನೆಯಲ್ಲಿ ಜೆಡಿಎಸ್ನ ಶ್ರೀಕಂಠೇಗೌಡ ಪ್ರಶ್ನೆಗೆ ಉತ್ತರಿಸಿ, ಮೈಶುಗರ್ ಉನ್ನತೀಕರಣಕ್ಕೆ ಪ್ರಯತ್ನಿಸಿ ಈವರೆಗೆ 410 ಕೋಟಿ ರೂ. ಬಂಡವಾಳ ಹೂಡಿಕೆ ಮಾಡಿದ್ದರೂ ಪ್ರಯೋಜನವಾಗಿಲ್ಲ. ಇದೇ ಮೊತ್ತದಲ್ಲಿ ಹೊಸದೊಂದು ಸಕ್ಕರೆ ಕಾರ್ಖಾನೆ ನಿರ್ವಿುಸಬಹುದಾಗಿತ್ತು. ಹೀಗಾಗಿ ಖಾಸಗಿಯವರಿಗೆ ಒಪ್ಪಿಸಲು ತೀರ್ವನವಾಗಿದೆ ಎಂದರು.
ಮೈಶುಗರ್ ರಾಜ್ಯದ ಏಕೈಕ ಸರ್ಕಾರಿ ಸಕ್ಕರೆ ಕಾರ್ಖಾನೆಯಾಗಿದ್ದು, 60 ಎಕರೆಯಷ್ಟು ದೊಡ್ಡದಿದೆ. ಡಿಸ್ಟಿಲರಿ ಹಾಗೂ ಕೋ-ಜನ್ಗೂ ಅವಕಾಶವಿರುವ ಕಾರಣಕ್ಕೆ ಆ ಭಾಗದ ರೈತರು, ಸಂಘ-ಸಂಸ್ಥೆಗಳು ಹಾಗೂ ಜನರು ಖಾಸಗೀಕರಣಕ್ಕೆ ವಿರೋಧಿಸುತ್ತಿದ್ದಾರೆ ಎಂದು ಶ್ರೀಕಂಠೇಗೌಡ ಸರ್ಕಾರದ ಗಮನಸೆಳೆದರು.
ಸಚಿವ ಹೆಬ್ಬಾರ್ ಉತ್ತರಿಸಿ, ಮೈಶುಗರ್ನಲ್ಲಿದ್ದ 175 ಕಾರ್ವಿುಕ ಸಿಬ್ಬಂದಿ ಈಗಾಗಲೇ ವಿಆರ್ಎಸ್ ತೆಗೆದುಕೊಂಡಿದ್ದಾರೆ. ಉಳಿದ ಬೆರಳೆಣಿಕೆಯಷ್ಟು ಕಾರ್ವಿುಕರಿಂದ ನಡೆಸಲು ಸಾಧ್ಯವಿಲ್ಲ. ನಿರ್ಣಯದ ಪ್ರಕಾರ, 3 ಕಾರ್ಖಾನೆಗಳನ್ನು ಪಿಪಿಪಿ ಮಾದರಿಯಲ್ಲಿ 40 ವರ್ಷಗಳಿಗೆ ಗುತ್ತಿಗೆ ನೀಡಲಿದ್ದು, ಆಸಕ್ತ ಖಾಸಗಿ ಕಂಪನಿಗಳಿಗೆ ಹಸ್ತಾಂತರಿಸಿ ಜೂನ್ ಒಳಗೆ ಕಬ್ಬು ಕಟಾವಿಗೆ ವ್ಯವಸ್ಥೆ ಮಾಡಲಾಗುವುದು ಎಂದರು.