ಜಿಮ್​-2025ರಲ್ಲಿ ಉತ್ತರ ಕರ್ನಾಟಕಕ್ಕೆ ಆದ್ಯತೆ ನೀಡಲಿ

10 vikram 3 Arvind Bellad
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಬೆಂಗಳೂರಿನಲ್ಲಿ ಫೆ. 12ರಿಂದ ನಡೆಯುವ ಗ್ಲೋಬಲ್​ ಇನ್ವೆಸ್ಟರ್ಸ್​ ಮೀಟ್​-2025ರಲ್ಲಿ (ಜಿಮ್​-2025) ಉತ್ತರ ಕರ್ನಾಟಕಕ್ಕೆ ವಿಶೇಷ ಆದ್ಯತೆ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದೇನೆ. ಉತ್ತರ ಕರ್ನಾಟಕದವರೇ ಆದ ಬೃಹತ್​ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ ಹಾಗೂ ಐಟಿಬಿಟಿ ಸಚಿವ ಪ್ರಿಯಾಂಕ್​ ಖರ್ಗೆ ಅವರಿಗೂ ಮನವಿ ಮಾಡುವುದಾಗಿ ವಿಧಾನಸಭೆ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಉತ್ತರ ಕರ್ನಾಟಕ ಹೇರಳ ನೈಸರ್ಗಿಕ ಸಂಪನ್ಮೂಲ, ಕೈಗಾರಿಕೆಗೆ ಯೋಗ್ಯ ಭೂಮಿ ಹಾಗೂ ಮಾನವ ಸಂಪನ್ಮೂಲದ ಆಗರವಾಗಿದೆ. ಆದರೆ, ದಕ್ಷಿಣ ಕರ್ನಾಟಕಕ್ಕೆ ಹೋಲಿಸಿದರೆ ಕೈಗಾರಿಕೆಗಳ ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಇಲ್ಲಿನ ವಿದ್ಯಾವಂತ ಯುವ ಸಮುದಾಯ, ಕೌಶಲ ಕಾರ್ಮಿಕರು ಕೆಲಸ ಅರಸಿ ಬೆಂಗಳೂರು, ಮಂಗಳೂರು, ಮುಂಬೈ ಸೇರಿ ಇತರ ಕಡೆಗಳಿಗೆ ಗುಳೆ ಹೋಗುವಂತಾಗಿದೆ. ಪ್ರಾದೇಶಿಕ ಅಸಮಾನತೆ, ಮೂಲಸೌಕರ್ಯದ ಕೊರತೆ, ಉದ್ಯೋಗಾವಕಾಶ ಅಭಾವ, ಇತರ ಕಾರಣಗಳಿಂದ ನಮ್ಮ ಭಾಗ ನಿರೀಕ್ಷಿತ ಅಭಿವೃದ್ಧಿ ಕಂಡಿಲ್ಲ. ಹೀಗಾಗಿ ಜಿಮ್​ನಲ್ಲಿ ಆದ್ಯತೆ ನೀಡುವಂತೆ ಮನವಿ ಮಾಡಲಾಗಿದೆ.

ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಬಂಡವಾಳ ಆಕರ್ಷಿಸಲು ಹಾಗೂ ಕೈಗಾರಿಕೆಗಳನ್ನು ತರಲು ಪ್ರತ್ಯೇಕ ಕೈಗಾರಿಕಾ ನೀತಿ ರೂಪಿಸಿ ಉತ್ತರ ಕರ್ನಾಟಕದಲ್ಲಿ ಹೂಡಿಕೆ ಮಾಡುವ ಕೈಗಾರಿಕೆಗಳಿಗೆ ವಿಶೇಷ ಅನುಕೂಲಗಳು ಹಾಗೂ ತೆರಿಗೆ ರಿಯಾಯಿತಿ ನೀಡಲು ಸರ್ಕಾರ ಮುಂದಾಗಬೇಕು. ಇಲ್ಲಿನ ರಸ್ತೆ ಸಂಪರ್ಕ, ವಿದ್ಯುತ್​ ಮತ್ತು ನೀರು ಸರಬರಾಜು ಸೌಲಭ್ಯಗಳ ಕುರಿತು ಹೂಡಿಕೆದಾರರಿಗೆ ಹೆಚ್ಚಿನ ಮಾಹಿತಿ ಒದಗಿಸಲು ಸ್ಪಷ್ಟ ಕಾರ್ಯತಂತ್ರ ರೂಪಿಸಬೇಕು.

ಜಿಮ್​ 2025ರಲ್ಲಿ ಉತ್ತರ ಕರ್ನಾಟಕವು ಕೈಗಾರಿಕೆಗಳ ಸ್ಥಾಪನೆಗೆ ಯೋಗ್ಯ ಮತ್ತು ಪ್ರಶಸ್ತ ತಾಣವಾಗಿದೆ ಎಂದು ನಿರೂಪಿಸಲು ಹಾಗೂ ಸಾಮರ್ಥ್ಯ ಪ್ರದರ್ಶಿಸಲು ಮತ್ತು ಈ ಭಾಗವು ಹೂಡಿಕೆಗೆ ಲಾಭದಾಯಕ ತಾಣ ಎಂದು ಪರಿಗಣಿಸಲು ವಿಶೇಷ ಸೆಷನ್​​ಗಳನ್ನು ಆಯೋಜಿಸಬೇಕು. ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕದ ಹು-ಧಾ, ಬೆಳಗಾವಿ, ಬಾಗಲಕೋಟೆ, ಬಳ್ಳಾರಿ, ಕಲಬುರಗಿ, ಬೀದರ್​ ಮತ್ತು ರಾಯಚೂರು ಜಿಲ್ಲೆಗಳಲ್ಲಿ ವಿಶೇಷ ಕೈಗಾರಿಕಾ ವಲಯಗಳನ್ನು ಅಭಿವೃದ್ಧಿಪಡಿಸುವತ್ತ ಸರ್ಕಾರ ಗಮನಹರಿಸಬೇಕು.

ರಾಜ್ಯದ ಸಮಗ್ರ ಅಭಿವೃದ್ಧಿಗೆ ಉತ್ತರ ಕರ್ನಾಟಕಕ್ಕೂ ಸಮಾನ ಅವಕಾಶ ಮತ್ತು ಆದ್ಯತೆ ದೊರಕಬೇಕು. ಈ ಕುರಿತು ಸರ್ಕಾರ ಸೂಕ್ತ ನಿರ್ಧಾರ ಕೈಗೊಂಡು ಜಿಮ್​ 2025ರಲ್ಲಿ ಉತ್ತರ ಕರ್ನಾಟಕಕ್ಕೆ ವಿಶೇಷ ಪ್ರಾತಿನಿಧ್ಯ ನೀಡುವಂತೆ ಅರವಿಂದ ಬೆಲ್ಲದ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net