

ಆಂಧ್ರಪ್ರದೇಶ: ಸೆಪ್ಟಂಬರ್ 07 ರಂದು ದೇಶಾದ್ಯಂತ ಬಹುತೇಕ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಗೊಂಡ ಬಾಲಿವುಡ್ ಕಿಂಗ್ ಖಾನ್ ನಟನೆಯ 'ಜವಾನ್' ಚಿತ್ರಕ್ಕೆ ಸಿನಿಪ್ರೇಕ್ಷಕರು ಫಿದಾ ಆಗಿದ್ದು, ಟಾಲಿವುಡ್ನ ಪ್ರಿನ್ಸ್ ಮಹೇಶ್ ಬಾಬು ಎಸ್ಆರ್ಕೆ ಮತ್ತು ಚಿತ್ರತಂಡದ ಕೆಲಸಕ್ಕೆ ಟ್ವೀಟ್ ಮುಖೇನ ಇದೀಗ ಭಾರೀ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
'ಪಠಾಣ್' ನಂತರ 'ಜವಾನ್' ಮೂಲಕ ಮತ್ತೊಮ್ಮೆ ತೆರೆ ಮೇಲೆ ಅಭಿಮಾನಿಗಳನ್ನು ಮನರಂಜಿಸಲು ಹಾಜರಾದ ಶಾರೂಖ್ ಖಾನ್ ನಟನೆ ವೀಕ್ಷಿಸಿದ ಸಿನಿಪ್ರೇಕ್ಷಕರು, ಇದೀಗ ಮೆಚ್ಚುಗೆಯ ಮಹಾಪೂರವನ್ನೇ ಹರಿಸಿದ್ದಾರೆ. ಸಿನಿಮಾದಲ್ಲಿ ಎಸ್ಆರ್ಕೆಗೆ ನಾಯಕಿಯಾಗಿ ಕಾಣಿಸಿಕೊಂಡ ನಟಿ ನಯನತಾರ ಮತ್ತು ಪ್ರಮುಖ ಪಾತ್ರದಲ್ಲಿ ಮಿಂಚಿದ ವಿಜಯ್ ಸೇತುಪತಿ ಪಾತ್ರಗಳನ್ನು ಕೂಡ ಪ್ರೇಕ್ಷಕರು ಮೆಚ್ಚಿದ್ದಾರೆ.
ಚಿತ್ರ ವೀಕ್ಷಿಸಿದ ತೆಲುಗು ಚಿತ್ರರಂಗದ ಪ್ರಿನ್ಸ್ ಮಹೇಶ್ ಬಾಬು, "ಜವಾನ್ ಬ್ಲಾಕ್ಬಸ್ಟರ್ ಸಿನಿಮಾ. ನಿರ್ದೇಶಕ ಅಟ್ಲಿ ಕಿಂಗ್ ಜತೆಗೆ ಕಿಂಗ್ ಗಾತ್ರದ ಮನರಂಜನೆಯನ್ನು ನೀಡಿದ್ದಾರೆ. ಇದು ಅವರ ವೃತ್ತಿಯ ಅತ್ಯುತ್ತಮ ಚಿತ್ರ. ಎಸ್ಆರ್ಕೆ ಲುಕ್, ನಟನೆ, ಪರದೆಯ ಮೇಲೆ ಕಾಣಿಸಿಕೊಂಡ ಪರಿ ಅದ್ಭುತ. ಜವಾನ್ ಶಾರೂಖ್ ಅವರ ಹಿಂದಿನ ದಾಖಲೆಗಳನ್ನು ಮುರಿಯಲಿದೆ" ಎಂದು ಟ್ವೀಟ್ ಮಾಡಿದ್ದಾರೆ.
ಸದ್ಯ ಪ್ರಿನ್ಸ್ ಟ್ವೀಟ್ಗೆ ಶಾರೂಖ್ ಫ್ಯಾನ್ಸ್ ಸಂತಸ ಪಟ್ಟಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ರಿ-ಟ್ವೀಟ್ ಮಾಡಿದ್ದಾರೆ.