

ನವದೆಹಲಿ: ಕರೊನಾ ಲಾಕ್ಡೌನ್ನಿಂದ ಲಕ್ಷಾಂತರ ವಲಸೆ ಕಾರ್ಮಿಕರು ಉದ್ಯೋಗ ಕಳೆದುಕೊಂಡಿದ್ದಾರೆ. ಹೊಟ್ಟೆ, ಬಟ್ಟೆಗಿಲ್ಲದೆ ಪರದಾಡುತ್ತಿದ್ದಾರೆ. ಇದೀಗ ದೇಶ ಅನ್ಲಾಕ್ ಮೊದಲನೇ ಹಂತದಲ್ಲಿದ್ದು, ವಲಸೆ ಕಾರ್ಮಿಕರ ಹಿತರಕ್ಷಣೆ, ಉದ್ಯೋಗವನ್ನು ಕೇಂದ್ರ ಸರ್ಕಾರ ಮೊದಲ ಆದ್ಯತೆಯಾಗಿ ಪರಿಗಣಿಸಿದೆ.
ಅದರ ಅಂಗವಾಗಿ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು 'ಗರೀಬ್ ಕಲ್ಯಾಣ್ ರೋಜ್ಗಾರ್ ಅಭಿಯಾನ್' ಯೋಜನೆಯನ್ನು ಉದ್ಘಾಟಿಸಿದ್ದಾರೆ. ಕೆಲಸ ಕಳೆದುಕೊಂಡು ತಮ್ಮ ಊರುಗಳಿಗೆ ವಾಪಸ್ ಆಗಿರುವ ವಲಸೆ ಕಾರ್ಮಿಕರಿಗೆ ಉದ್ಯೋಗ ಸೃಷ್ಟಿಸುವ ಯೋಜನೆ ಇದು. ಇದಕ್ಕಾಗಿ 50,000 ಕೋಟಿ ರೂಪಾಯಿಯನ್ನು ಕೇಂದ್ರ ಸರ್ಕಾರ ಮೀಸಲಾಗಿಟ್ಟಿದೆ. ಇದನ್ನೂ ಓದಿ: ಪಾಕಿಸ್ತಾನದ ಕಳ್ಳಾಟ ಬಯಲು; ಏನೇನೆಲ್ಲಾ ಇತ್ತು ಗೊತ್ತಾ ನೆಲಕ್ಕುರುಳಿದ ಡ್ರೋನ್ನಲ್ಲಿ?!
ಇಂದು ಯೋಜನೆಯ ಉದ್ಘಾಟನೆ ಮಾಡಿದ ಮೋದಿಯವರು ಮಾತನಾಡಿ, ಒಂದೊಂದು ಪಟ್ಟಣಗಳ ಅಭಿವೃದ್ಧಿಯಲ್ಲೂ ವಲಸೆ ಕಾರ್ಮಿಕರ ಕೊಡುಗೆ ಅಪಾರ. ಆದರೆ ಲಾಕ್ಡೌನ್ ಅವಧಿಯಲ್ಲಿ ಅವರು ತುಂಬ ಕಷ್ಟಪಟ್ಟಿದ್ದಾರೆ. ವಲಸೆ ಹೋಗಿದ್ದ ಊರಿನಲ್ಲಿ ಕೆಲಸವಿಲ್ಲದೆ, ವಾಪಸ್ ತಮ್ಮ ಊರಿಗೆ ಬಂದಿದ್ದಾರೆ. ಇದೀಗ ಅವರು ಇರುವಲ್ಲಿಯೇ ಉದ್ಯೋಗ ಸೃಷ್ಟಿಸಲು ಗರೀಬ್ ಕಲ್ಯಾಣ್ ರೋಜ್ಗಾರ್ ಯೋಜನೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಬಡಜನರ ಜೀವನ, ಕಲ್ಯಾಣಕ್ಕಾಗಿ ಯೋಜನೆಯೊಂದು ಶುರುವಾದ ಈ ದಿನ ಒಂದು ಐತಿಹಾಸಿಕ ದಿನವಾಗಿದೆ. ನನ್ನ ಕಾರ್ಮಿಕ ಸ್ನೇಹಿತರ ಅಗತ್ಯಗಳನ್ನು, ಭಾವನೆಗಳನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ ಎಂದು ಹೇಳಿದ್ದಾರೆ.
ಗರೀಬ್ ಕಲ್ಯಾಣ್ ರೋಜ್ಗಾರ್ ಅಭಿಯಾನವು ಬಿಹಾರದಿಂದ ಪ್ರಾರಂಭವಾಗಲಿದೆ. ಇಷ್ಟು ದಿನ ಬೇರೆ ರಾಜ್ಯ, ಊರುಗಳಿಗೆ ಹೋಗಿ, ಅಲ್ಲಿನ ಪಟ್ಟಣಗಳ ಅಭಿವೃದ್ಧಿಗೆ ಕಾರಣರಾಗುತ್ತಿದ್ದ ವಲಸಿಗರು, ಇನ್ನು ಮುಂದೆ ಅವರದ್ದೇ ಹಳ್ಳಿ, ನೆರೆಯ ಊರುಗಳ ಕಲ್ಯಾಣಕ್ಕಾಗಿ ಶ್ರಮಿಸಲಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಡಿಸೆಂಬರ್ನಲ್ಲೇ ವಕ್ಕರಿಸಿದೆ ಕರೊನಾ…ಒಳಚರಂಡಿಯ ತ್ಯಾಜ್ಯದಲ್ಲಿ ಅಡಗಿ ಕುಳಿತಿತ್ತು !
ಈ ಯೋಜನೆ ಅತಿ ಹೆಚ್ಚು ವಲಸೆ ಕಾರ್ಮಿಕರು ಇರುವ ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ, ಜಾರ್ಖಂಡ, ಒಡಿಶಾ ಮತ್ತು ರಾಜಸ್ಥಾನಗಳ 116 ಜಿಲ್ಲೆಗಳಲ್ಲಿ 125 ದಿನಗಳ ಕಾಲ ನಡೆಯಲಿದೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)