ಫೇಸ್‌ಬುಕ್‌ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡಿದ್ದ ಅರ್ಚಕಗೆ 6.43 ಲಕ್ಷ ರೂ. ವಂಚನೆ

cen police station
ಶಿವಮೊಗ್ಗ ಸಿಇಎನ್ ಠಾಣೆ
Published on

ಶಿವಮೊಗ್ಗ: ಫೇಸ್‌ಬುಕ್‌ನಲ್ಲಿ ಮಹಿಳೆಯೊಬ್ಬರು ಕಳುಹಿಸಿದ್ದ ಫ್ರೆಂಡ್ ರಿಕ್ವೆಸ್ಟ್ ಅಕ್ಸೆಪ್ಟ್ ಮಾಡಿದ್ದ ಶಿವಮೊಗ್ಗದ ಅರ್ಚಕರೊಬ್ಬರು 6.43 ಲಕ್ಷ ರೂ. ಕಳೆದುಕೊಂಡಿದ್ದು ವಂಚನೆ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ಮಮತಾ ಜಾಯ್ ಎಂಬ ಹೆಸರಿನಲ್ಲಿ ಅರ್ಚಕರಿಗೆ ಫೇಸ್‌ಬುಕ್‌ನಲ್ಲಿ ರಿಕ್ವೆಸ್ಟ್ ಬಂದಿತ್ತು. ಅದನ್ನು ಅಕ್ಸೆಪ್ಟ್ ಮಾಡಿಕೊಂಡಿದ್ದ ಅರ್ಚಕ ಕೆಲ ಸಮಯದ ನಂತರ ಆಕೆಗೆ ಫೇಸ್‌ಬಕ್ ಮೆಸೆಂಜರ್ ಮೂಲಕ ಜನ್ಮದಿನದ ಶುಭಾಶಯ ಕೋರಿದ್ದರು. ಅದಕ್ಕೆ ರಿಪ್ಲೆ ಮಾಡಿದ್ದ ಮಮತಾ ಜಾಯ್, ತನ್ನ ವಾಟ್ಸ್‌ಆ್ಯಪ್ ನಂಬರ್ ಹಂಚಿಕೊಂಡು ಚಾಟಿಂಗ್ ಮಾಡಿದ್ದಳು.

ಬಳಿಕ ಲಂಡನ್‌ನಲ್ಲಿ ಲ್ಯಾಪ್‌ಟಾಪ್, ಐ-ಫೋನ್, ಶೂ, ಬಟ್ಟೆ, ಬಂಗಾರದ ಸರ ಸೇರಿ ಬೆಲೆ ಬಾಳುವ ಗಿಫ್ಟ್‌ಗಳನ್ನು ಖರೀದಿಸಿ ಕಳುಹಿಸುತ್ತಿರುವುದಾಗಿ ಅರ್ಚಕರಿಗೆ ತಿಳಿಸಿದ್ದಳು. ಅವುಗಳ ಫೋಟೊ ಸಹಿತ ವಾಟ್ಸ್‌ಆ್ಯಪ್‌ಗೆ ಸೆಂಡ್ ಮಾಡಿದ್ದಳು.

ಫೆ.24ರಂದು ದೆಹಲಿಯ ಕೊರಿಯರ್ ಕಚೇರಿ ಸಿಬ್ಬಂದಿ ಹೆಸರಲ್ಲಿ ವ್ಯಕ್ತಿಯೊಬ್ಬ ಅರ್ಚಕರಿಗೆ ಕರೆ ಮಾಡಿದ್ದ. ಲಕ್ಷಾಂತರ ರೂ. ಮೌಲ್ಯದ ಗಿಫ್ಟ್‌ಗಳನ್ನು ಜಪ್ತಿ ಮಾಡಲಾಗಿದೆ. ಅದಕ್ಕೆ ಕೊರಿಯರ್ ಚಾರ್ಜ್, ಕಸ್ಟಮ್ಸ್ ಚಾರ್ಜ್, ಇನ್‌ಕಮ್ ಟ್ಯಾಕ್ಸ್ ಸೇರಿ ನಾನಾ ಶುಲ್ಕ ಪಾವತಿಸಬೇಕೆಂದು ನಂಬಿಸಿ ವಿವಿಧ ಹಂತದಲ್ಲಿ ಲಕ್ಷಾಂತರ ರೂ. ಪಡೆದಿದ್ದಾರೆ. ಅಲ್ಲಿಂದು ಇದುವರೆಗೆ ಅರ್ಚಕ ಬರೋಬ್ಬರಿ 6.43 ಲಕ್ಷ ರೂ. ಪಾವತಿಸಿದ್ದು ಇದುವರೆಗೆ ಗಿಫ್ಟ್‌ಗಳು ಬಾರದೇ ಇರುವುದರಿಂದ ಅನುಮಾನಗೊಂಡ ಅರ್ಚಕ ಆಪ್ತರಲ್ಲಿ ವಿಚಾರಿಸಿದಾಗ ವಂಚನೆಗೆ ಒಳಗಾಗಿರುವುದು ಅರಿವಿಗೆ ಬಂದಿದ್ದು ಇದೀಗ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net