ಬೈಂದೂರು: ಹತ್ತು ವರ್ಷಗಳಿಂದ ಸ್ಥಾಪಕಾಧ್ಯಕ್ಷರ ಆದಿಯಾಗಿ ಎಲ್ಲ ಪೂರ್ವಾಧ್ಯಕ್ಷರು ಸೇರಿದಂತೆ ಶಿಕ್ಷಣ, ಆರೋಗ್ಯ ಮತ್ತು ಸಾಮಾಜಿಕ ಸೇವೆಗಳ ಮೂಲಕ ಜನಮಾನಸದಲ್ಲಿ ಉಳಿಯುವಂತಹ ಕಾರ್ಯ ಮಾಡಿದ್ದಾರೆ ಎನ್ನುವ ಆತ್ಮತೃಪ್ತಿಯಿದೆ. ಹಿರಿಯ ಕಿರಿಯ ಸದಸ್ಯರು ಒಂದಾಗಿ ವರ್ಷವಿಡೀ ಸದಾ ಲವಲವಿಕೆಯಿಂದ ಸಾಮಾಜಿಕ ಸೇವೆ ಮಾಡುತ್ತಿರುವುದು ನಮ್ಮ ಸಂಸ್ಥೆಯ ಹೆಮ್ಮೆ ಎಂದು ಬೈಂದೂರು-ಉಪ್ಪುಂದ ಲಯನ್ಸ್ ಕ್ಲಬ್ ಅಧ್ಯಕ್ಷ ಸತೀಶ ಶೆಟ್ಟಿ ಹೇಳಿದರು.
ಯಡ್ತರೆ ಬಂಟರ ಭವನದಲ್ಲಿ ಬುಧವಾರ ಲಯನ್ಸ್ ಜಿಲ್ಲಾ ಗವರ್ನರ್ ಮಹಮ್ಮದ್ ಹನೀಫ್ ಅವರ ಅಧೀಕೃತ ಭೇಟಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆರೋಗ್ಯ, ಶಿಕ್ಷಣಕ್ಕಾಗಿ ಅರ್ಹರಿಗೆ ನಗದು ಸಹಕಾರ ನೀಡಲಾಯಿತು. ಕ್ಲಬ್ ಪೂರ್ವಾಧ್ಯಕ್ಷ ಪ್ರಭಾಕರ ಶೆಟ್ಟಿ, ದಾನಿ ಜಿ.ಗೋಕುಲ್ ಶೆಟ್ಟಿ ಅವರನ್ನು ಗೌರವಿಸಲಾಯಿತು. ಮೂರು ಹೊಸ ಸದಸ್ಯರು ಕ್ಲಬ್‌ಗೆ ಸೇರ್ಪಡೆಗೊಂಡರು. ಲಯನ್ಸ್ ಜಿಲ್ಲೆಯ ವಿವಿಧ ಸ್ತರದ ಪದಾಧಿಕಾರಿಗಳಾದ ಸ್ವಪ್ನಾ ಸುರೇಶ್, ರಾಜೀವ ಕೋಟ್ಯಾನ್, ಶ್ರೀನಿವಾಸ ಪಿ., ಈಶ್ವರ ಶೆಟ್ಟಿ, ಪ್ರಾಂತೀಯ ಕಾರ್ಯದರ್ಶಿ ನರಸಿಂಹ ದೇವಾಡಿಗ, ವಲಯಾಧ್ಯಕ್ಷ ಗಿರೀಶ ಶ್ಯಾನುಭಾಗ್ ಉಪಸ್ಥಿತರಿದ್ದರು. ಸ್ಥಳೀಯ ಕ್ಲಬ್ ಕಾರ್ಯದರ್ಶಿ ಸುನೀಲ್ ಪೂಜಾರಿ ವರದಿ ಮಂಡಿಸಿದರು. ಖಜಾಂಚಿ ಸುಂದರ್ ಕೊಠಾರಿ ವಂದಿಸಿದರು. ಪೂರ್ವಾಧ್ಯಕ್ಷ ವಿಶ್ವನಾಥ ಶೆಟ್ಟಿ ನಿರೂಪಿಸಿದರು.
ಸಮಾಜಮುಖಿ ಚಿಂತನೆ ಜತೆಗೆ ಕಷ್ಟದಲ್ಲಿರುವ ಬಡವರ, ಅಸಹಾಯಕರ, ರೋಗಿಗಳ, ಅಂಗವಿಕಲರ ಮುಖದಲ್ಲಿ ನಗು ಕಾಣಬೇಕಾದರೆ ನಾವು ಅಂತವರನ್ನು ಗುರುತಿಸಿ ತಕ್ಷಣ ಸ್ಪಂದಿಸಬೇಕು. ಇದಕ್ಕಿಂತ ದೊಡ್ಡ ಯಜ್ಞ ಮತ್ತೊಂದಿಲ್ಲ. ಸೇವೆಯೇ ನಮ್ಮೆಲ್ಲರ ಪ್ರಮುಖ ಅಜೆಂಡವಾಗಬೇಕು. ಸಹೋದರತೆಯ ಮನೋಭಾವನೆಯಿಂದ ಎಲ್ಲರೂ ಪರಸ್ಪರ ಸಂತೋಷ ಹಂಚಿಕೊಂಡು ಜೀವನ ಸಾಗಿಸುವಂತಾಗಬೇಕು.
-ಮಹಮ್ಮದ್ ಹನೀಫ್ ಲಯನ್ಸ್ ಜಿಲ್ಲಾ ಗವರ್ನರ್