

ಆರ್.ತುಳಸಿಕುಮಾರ್
ಬೆಂಗಳೂರು: ದೇಶದ ಪ್ರಮುಖ ಉತ್ಪಾದನಾ ತಾಣವಾಗಿರುವ ಪೀಣ್ಯ ಕೈಗಾರಿಕೆ ಪ್ರದೇಶದಲ್ಲಿ ಪಿನ್‌ನಿಂದ ಹಿಡಿದು ಪ್ಲೇನ್‌ವರೆಗೆ ವಿವಿಧ ಬಗೆಯ ಬಿಡಿ ಭಾಗಗಳನ್ನು ತಯಾರಿಸಲಾಗುತ್ತದೆ. ಸಣ್ಣ ಘಟಕಗಳಲ್ಲಿ ಮೈದಳೆಯುವ ಸೂಕ್ಷ್ಮ ಗಾತ್ರದ ಉಪಕರಣವು ವಿದೇಶಿ ಕಂಪನಿಗಳ ಉತ್ಪನ್ನಕ್ಕೆ ಆಧಾರಸ್ತಂಭವಾಗಿದೆ. ಇಲ್ಲಿ ಸಿದ್ಧಗೊಳ್ಳುವ ಗುಣಮಟ್ಟದ ಸಾಧನಗಳು ಕಾರ್ಮಿಕರ ಕೌಶಲಕ್ಕೆ ಸಾಕ್ಷಿಯಾಗಿದೆ. ಇಂತಹ ಹೈಟೆಕ್ ಉತ್ಪದನಾ ಹಬ್ ವ್ಯಾಪ್ತಿಯಲ್ಲಿ ಸಮರ್ಪಕವಾದ ಮೂಲಸೌಕರ್ಯ ಇಲ್ಲದೆ ಕಳಾಹೀನ ಸ್ಥಿತಿ ತಲುಪಿದೆ.
ಸರಿಸುಮಾರು 40 ಚದರ ಕಿ.ಮೀ. ವ್ಯಾಪ್ತಿಯಲ್ಲಿ ವ್ಯಾಪಿಸಿರುವ ಪೀಣ್ಯ ಇಂಡಸ್ಟ್ರೀಯಲ್ ಎಸ್ಟೇಟ್ ನಾಲ್ಕು ಹಂತಗಳಲ್ಲಿ ವಿಸ್ತರಣೆಗೊಂಡಿದೆ. ವರ್ಷದ 365 ದಿನವೂ ಉತ್ಪಾದನೆಯಲ್ಲಿ ಲಕ್ಷಾಂತರ ಸಂಖ್ಯೆಯ ಶ್ರಮಿಕ ವರ್ಗ ತೊಡಗಿಸಿಕೊಂಡಿದ್ದಾರೆ. ಬರೋಬರಿ 10 ಸಾವಿರ ಘಟಕಗಳು ಕಾರ್ಯನಿರ್ವಹಿಸುವ ಸ್ಥಳಕ್ಕೆ ತೆರಳಲು ಸರಿಯಾದ ರಸ್ತೆಗಳೇ ಇಲ್ಲ. ಕೆಲವೊಂದನ್ನು ಹೊರತುಪಡಿಸಿದರೆ ಉಳಿದೆಡೆ ಗುಂಡಿ ಬಿದ್ದ, ಅರ್ಧ ಡಾಂಬರು ಹಾಕಿರುವ, ಸ್ಥಗಿತಗೊಂಡ ಕಾಮಗಾರಿಗಳು ಕೈಗಾರಿಕೆ ಪ್ರದೇಶಕ್ಕೆ ದೃಷ್ಟಿ ಬೊಟ್ಟು ಇಟ್ಟಂತಿದೆ. ಮಳೆಬಂದಲ್ಲಿ ಕೆಸರು ಗದ್ದೆಯಂತಾಗುವ ಪ್ರದೇಶಗಳು ಹಲವು ಇವೆ. ಚರಂಡಿ, ಒಳಚರಂಡಿ, ಮಳೆನೀರುಗಾಲುವೆ ಸೌಲಭ್ಯ ಅಷ್ಟಕಷ್ಟೆ. ಕಸ ಸಂಗ್ರಹ ಸಮರ್ಪಕವಾಗಿ ನಡೆಯದೆ ರಸ್ತೆಬದಿ ತ್ಯಾಜ್ಯ ರಾಶಿ ಕಣ್ಣಿಗೆ ರಾಚುತ್ತದೆ. ಈ ರೀತಿ ಹತ್ತಾರು ಸಮಸ್ಯೆಗಳನ್ನು ತನ್ನಲ್ಲಿ ತುಂಬಿಕೊಂಡಿರುವ ಕೈಗಾರಿಕೆ ಹಬ್‌ಗೆ ಮೂಲಸೌಕರ್ಯ ಕಲ್ಪಿಸಬೇಕಾದ ಕೆಐಎಡಿಬಿ ತನ್ನ ಹೊಣೆಯಿಂದ ನುಣೂಚಿಕೊಂಡಿದೆ ಎಂಬುದಾಗಿ ಇಲ್ಲಿನ ಉದ್ಯಮಿಗಳು ದೂರಿದ್ದಾರೆ.
ಕಚ್ಛಾವಸ್ತು ಸಾಗಿಸಲು ಹರಸಾಹಸ:
ಪೀಣ್ಯ ಭಾಗದ ವಿವಿಧೆಡೆ ಕಾರ್ಯನಿರ್ವಹಿಸುವ ಕೈಗಾರಿಕೆ ಘಟಕಗಳಿಗೆ ನಿತ್ಯವೂ ಸಾವಿರಾರು ಟ್ರಕ್/ಲಾರಿ, ಟೆಂಪೋಗಳ ಮೂಲಕ ಕಚ್ಛಾವಸ್ತುಗಳನ್ನು ತರಲಾಗುತ್ತದೆ. ಇಷ್ಟೇ ಸಂಖ್ಯೆಯ ವಾಹನಗಳಲ್ಲಿ ತಯಾರಿಕೆ ಉತ್ಪನ್ನಗಳನ್ನು ಬೇರೆಡೆಗೆ ಸಾಗಣೆ ಮಾಡಲಾಗುತ್ತದೆ. ಆದರೆ, ಇಷ್ಟು ಸಂಖ್ಯೆಯ ವಾಹನಗಳು ಸರಾಗವಾಗಿ ಸಾಗಲು ಸಮರ್ಪಕವಾದ ರಸ್ತೆ ವ್ಯವಸ್ಥೆ ಇಲ್ಲ. ಕೆಐಎಡಿಬಿ ಇಲ್ಲಿ ಕೈಗಾರಿಕೆ ಪ್ಲಾಟ್‌ಗಳನ್ನು ರಚಿಸಿ ಹಂಚಿದ ಬಳಿಕ ಪೂರ್ಣ ಪ್ರಮಾಣದಲ್ಲಿ ಸೌಕರ್ಯ ಒದಗಿಸಿಲ್ಲ. ನಂತರದ ದಿನಗಳಲ್ಲೂ ಸ್ಥಳೀಯ ಸಂಸ್ಥೆಯಾದ ಪಾಲಿಕೆಯೂ ಮೂಲಸೌಲಭ್ಯ ಕಲ್ಪಿಸಲು ವಿಫಲವಾಗಿದೆ. ಸಣ್ಣ ಕೈಗಾರಿಕೆಗಳ ಬೆಳವಣಿಗೆ ಆಸರೆಯಾಗಬೇಕಿದ್ದ ಕೆಎಸ್‌ಎಸ್‌ಐಡಿಸಿ ಕೂಡ ಮೂಲಸೌಕರ್ಯ ಒದಗಿಸಲು ಸಫಲತೆ ಕಂಡಿಲ್ಲ. ಇದರ ಪರಿಣಾಮ ಇಲ್ಲಿನ ಉದ್ದಿಮೆಗಳಿಗೆ ಕಚ್ಛಾವಸ್ತು ಪೂರೈಕೆಯಲ್ಲಿ ವಿಳಂಬವಾಗುತ್ತಿದೆ ಎಂಬ ಆಕ್ಷೇಪ ವ್ಯಕ್ತವಾಗಿದೆ.
ಹಳಿ ತಪ್ಪಿದ ಕಸ ವಿಲೇವಾರಿ:
ಪೀಣ್ಯ ಕೈಗಾರಿಕೆ ಪ್ರದೇಶದಲ್ಲಿ ಸಹಜವಾಗಿಯೇ ತ್ಯಾಜ್ಯ ಉತ್ಪತ್ತಿ ಹೆಚ್ಚಿರುತ್ತದೆ. ಕಾಗದ, ಕಬಿಣ್ಣ, ಪ್ಲಾಸ್ಟಿಕ್, ರಾಸಾಯನಿಕ ಸೇರಿ ವಿವಿಧ ರೀತಿಯ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಬೇಕಾಗುತ್ತದೆ. ಆದರೆ, ಇವು ಯಾವುದೂ ನಿಯಮದಂತೆ ನಡೆಯುತ್ತಿಲ್ಲ. 6 ವಾರ್ಡ್‌ಗಳಲ್ಲಿ ಹಂಚಿಹೋಗಿರುವ ಇಂಡಸ್ಟ್ರೀಯಲ್ ಎಸ್ಟೇಟ್ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಹಳಿತಪ್ಪಿದೆ. ಇತ್ತೀಚಿಗೆ ಘನತ್ಯಾಜ್ಯ ವಿಲೇವಾರಿಗೆ ಪಾಲಿಕೆಯು ಪ್ರತ್ಯೇಕ ನಿಗಮ ಸ್ಥಾಪಿಸಿ ಬಳಿಕ ಕಸ ಸಾಗಣೆ ಸ್ಥಗಿತಗೊಂಡಿದೆ. ರಸ್ತೆಬದಿ ಸುರಿಯಲಾಗುವ ಕಸವನ್ನು ಟಿಪ್ಪರ್ ಗಾಡಿಗಳಲ್ಲಿ ಸಾಗಿಸುತ್ತಿದ್ದರೂ, ಇನ್ನುಳಿದ ಭಾಗ ರಸ್ತೆಬದಿಯೇ ರಾಶಿ ಬಿದ್ದಿರುತ್ತದೆ. ಆಸ್ತಿತೆರಿಗೆಯಲ್ಲಿ ತ್ಯಾಜ್ಯ ವಿಲೇವಾರಿಗೆ ಶುಲ್ಕ ಪಾವತಿಸುತ್ತಿದ್ದರೂ ಕಸ ಸಾಗಣೆಗೆ ಪಾಲಿಕೆ ಬೆನ್ನು ತಿರುಗಿಸಿದೆ ಎಂದು ಹಲವು ಘಟಕಗಳ ಮಾಲೀಕರು ದೂರಿದ್ದಾರೆ.
ಎಸ್‌ಟಿಪಿ ಸ್ಥಾಪನೆಗೆ ಒತ್ತಾಯ:
ಬೃಹತ್ ಕೈಗಾರಿಕೆ ಘಟಕಗಳಿಗೆ ತ್ಯಾಜ್ಯ ಸಂಸ್ಕರಣಾ ಘಟಕ (ಎಸ್‌ಟಿಪಿ) ಕಡ್ಡಾಯಗೊಳಿಸಲಾಗಿದೆ. ಅದರಂತೆ ಈ ಉದ್ದಿಮೆಗಳು ಎಸ್‌ಟಿಪಿಅನ್ನು ಹೊಂದಿವೆ. ಸಣ್ಣ ಘಟಕಗಲ್ಲಿ ಎಸ್‌ಟಿಪಿ ಘಟಕ ಸ್ಥಾಪಿಸಲು ಜಾಗ ಹಾಗೂ ಹಣದ ಸಮಸ್ಯೆ ಎದುರಿಸಬೇಕಾಗುತ್ತದೆ. ಹಾಗಾಗಿ ಅಲ್ಲಿನ ಘಟಕಗಳು ಸ್ವಯಂ ವಿಲೇ ಪದ್ಧತಿಯನ್ನು ಹೊಂದಿವೆ. ಖಾಸಗಿ ಟ್ಯಾಂಕರ್‌ಗಳಲ್ಲಿ ನಗರದಾಚೆ ಸಾಗಿಸುತ್ತಿದ್ದರೂ, ಅದನ್ನು ವಿಲೇವಾರಿ ಮಾಡುವ ವೇಳೆ ರಸ್ತೆಬದಿ, ಕಾಲುವೆ ಹಾಗೂ ಚರಂಡಿಗೆ ಸುರಿಯುವ ಪ್ರಕರಣಗಳು ವರದಿಯಾಗಿವೆ. ಪೀಣ್ಯದಲ್ಲಿರುವ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿಯು 5 ಎಕರೆ ವಿಸ್ತೀರ್ಣ ಹೊಂದಿದ್ದು, ಅದರಲ್ಲಿ ಖಾಲಿಯಿರುವ 2 ಎಕರೆ ಜಾಗದಲ್ಲಿ ಎಸ್‌ಟಿಪಿ ಆರಂಭಿಸಬಹುದಾಗಿದೆ. ಈ ಕೆಲಸವನ್ನು ಕೆಎಸ್‌ಪಿಸಿಬಿ/ಕೆಐಎಡಿಬಿ ಜರೂರಾಗಿ ಕೈಗೆತ್ತಿಕೊಳ್ಳಬೇಕು ಎಂದು ಪೀಣ್ಯ ಕೈಗಾರಿಕೆ ಸಂಘದ (ಪಿಐಎ) ಪದಾಧಿಕಾರಿಗಳು ಸಲಹೆ ನೀಡಿದ್ದಾರೆ.
100 ಕೋಟಿ ರೂ. ಅನುದಾನಕ್ಕೆ ಒತ್ತಾಯ:
ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಮೂಲಸೌಕರ್ಯ ಅನುಷ್ಠಾನಕ್ಕೆ ಹಿಂದಿನಿಂದಲೂ ಕೆಐಎಡಿಬಿ ನಿರ್ಲಕ್ಷ್ಯ ವಹಿಸುತ್ತಾ ಬಂದಿದೆ. ಸಣ್ಣ ಕೈಗಾರಿಕೆಗಳನ್ನು ಪ್ರೋತ್ಸಾಹಿಸಬೇಕಿದ್ದ ಕೆಎಸ್‌ಎಸ್‌ಐಡಿಸಿ ಕೂಡ ಮೂಲಸೌಕರ್ಯ ಕಾಮಗಾರಿಗೆ ಬೆನ್ನು ತೋರಿಸಿದೆ. ಕೆಲ ವರ್ಷಗಳ ಹಿಂದೆ ಸರ್ಕಾರ ಬಿಡುಗಡೆ ಮಾಡಿದ್ದ ಹಣದಲ್ಲಿ ಇನ್ನೂ 4.5 ಕೋಟಿ ರೂ. ಬಾಕಿ ಉಳಿಸಿಕೊಳ್ಳಲಾಗಿದೆ. ಇದರಲ್ಲಿ ಕೆಲ ಭಾಗಕ್ಕೆ ಸೌಕರ್ಯ ಕಲ್ಪಿಸಬಹುದಿದ್ದರೂ, ಕಾಮಗಾರಿಗೆ ಆಸಕ್ತಿ ವಹಿಸಿಲ್ಲ. ಸದ್ಯ ಇಲ್ಲಿನ ಸಮಸ್ಯೆಯನ್ನು ನಿವಾರಿಸಲು ಸರ್ಕಾರ 100 ಕೋಟಿ ರೂ. ಅನುದಾನ ಬಿಡುಗಡೆ ಮಾಡಿ ಮೂಲಸೌಕರ್ಯ ಕಲ್ಪಿಸಬೇಕು ಎಂದು ಪಿಐಎ ನಿಕಟಪೂರ್ವ ಅಧ್ಯಕ್ಷ ಆರ್.ಶಿವಕುಮಾರ್ ಒತ್ತಾಯಿಸಿದ್ದಾರೆ.
ಪೀಣ್ಯ ಕೈಗಾರಿಕೆ ಪ್ರದೇಶದ ಮುಖ್ಯಾಂಶ:
* ವ್ಯಾಪ್ತಿ - 40 ಚದರ ಕಿ.ಮೀ.
* ಘಟಕಗಳು - 10,000
* ಕಾರ್ಮಿಕರು - 10 ಲಕ್ಷ
* ವಹಿವಾಟು - 35 ಸಾವಿರ ಕೋಟಿ ರೂ. (ವಾರ್ಷಿಕ)
* ರಫ್ತು ಪ್ರಮಾಣ - 8 ಸಾವಿರ ಕೋಟಿ ರೂ.
* ಎಲ್ಲ ವಿಧಧ ತೆರಿಗೆ ಪಾವತಿ - 8 ಸಾವಿರ ಕೋಟಿ ರೂ.
ಜರೂರಾಗಿ ಆಗಬೇಕಿರುವ ಕಾರ್ಯ ಏನು?:
* ಪೀಣ್ಯದ ವಿವಿಧೆಡೆ ತಕ್ಷಣವೇ ರಸ್ತೆಗುಂಡಿಗಳನ್ನು ಮುಚ್ಚಬೇಕು
* ಫುಟ್‌ಪಾತ್, ಚರಂಡಿ, ಬಾಕಿಯಿರುವ ಒಳಚರಂಡಿ ಕೆಲಸಕ್ಕೆ ಒತ್ತು
* ಮಾಲಿನ್ಯ ತಡೆಗಟ್ಟಲು ಸಸಿ ನೆಡುವಿಕೆ, ಎಸ್‌ಟಿಪಿ ಘಟಕ ಸ್ಥಾಪನೆ
* ಕೈಗಾರಿಕೆ ಪ್ರಾಂಗಣದೆಲ್ಲೆಡೆ ಪೊಲೀಸ್ ಪಹರೆ, ರಾತ್ರಿ ಗಸ್ತು ಹೆಚ್ಚಳ
* ಕಾರ್ಮಿಕರ ಸುರಕ್ಷಿತ ಪ್ರಯಾಣಕ್ಕೆ ಸಾರಿಗೆ ವ್ಯವಸ್ಥೆ, ಮಹಿಳೆಯರಿಗೆ ಬಸ್ ಸೌಲಭ್ಯ
* ಪ್ರತಿ ತಿಂಗಳೂ ಕೈಗಾರಿಕೆ ಸಂಘದೊಂದಿಗೆ ಪಾಲುದಾರ ಸಂಸ್ಥೆಗಳ ಜತೆ ಸಭೆ