ವಿಜಯಪುರ: ಕುರಿಗಾಯಿಗಳ ಮೇಲಾಗುತ್ತಿರುವ ದೌರ್ಜನ್ಯ ತಡೆಗಟ್ಟಲು ಮತ್ತು ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲರು ಮುಖ್ಯಮಂತ್ರಿ ಎಸ್. ಸಿದ್ಧರಾಮಯ್ಯಗೆ ಮನವಿ ಮಾಡಿದ್ದಾರೆ.
ರಾಜ್ಯದಲ್ಲಿ ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಕುರಿಗಾಯಿಗಳ ಸಂಖ್ಯೆ ಹೆಚ್ಚಾಗಿದೆ. ಈ ಕುರಿಗಾಯಿಗಳು ತಮ್ಮ ಕುರಿಗಳನ್ನು ಮೇಯಿಸಲು ಕುರಿ ಹಿಂಡಿನೊಂದಿಗೆ ಊರಿಂದೂರಿಗೆ ಸಂಸಾರ ಸಮೇತ ಅಲೆಯುತ್ತಾರೆ. ಇತ್ತೀಚಿನ ದಿನಗಳಲ್ಲಿ ಕುರಿಗಳ ಬೆಲೆ ಹೆಚ್ಚಾಗಿದ್ದು ಕಳ್ಳರಿಗೆ ವರದಾನವಾಗಿದೆ. ಇಂಥ ಸಮಯದಲ್ಲಿ ಗ್ರಾಮೀಣ ಭಾಗದಲ್ಲಿ ವಾಸ್ತವ್ಯ ಹೂಡಿರುವ ಸಂದರ್ಭದಲ್ಲಿ ಕುರಿಗಳ್ಳರ ಹಾವಳಿ ಹೆಚ್ಚಾಗಿದೆ ಎಂದು ಅವರು ತಿಳಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಉಗಲವಾಟ ಗ್ರಾಮದ ಕುರಿಗಾಯಿ ಯುವಕ ಶರಣಪ್ಪ ಬಸಪ್ಪ ಜಮ್ಮನಗಟ್ಟಿ ಇತ್ತೀಚೆಗೆ ಕುರಿಗಳ ಹಿಂಡಿನೊಂದಿಗೆ ವಾಸ್ತವ್ಯ ಮಾಡಿದ್ದಾಗ ಕಳ್ಳತನಕ್ಕೆ ಬಂದಿದ್ದ ಮೂವರು ಕುರಿಗಳ್ಳರನ್ನು ತಡೆಯಲು ಹೋದಾಗ ಅವನನ್ನು ಕೊಲೆ ಮಾಡಿ ಕುರಿಗಳನ್ನು ಕದ್ದುಕೊಂಡು ಹೋಗಿದ್ದಾರೆ. ಇಂಥ ಪ್ರಕರಣಗಳು ಮೇಲಿಂದ ಮೇಲೆ ನಡೆಯುತ್ತಿದ್ದು, ಈ ರೀತಿಯ ಘಟನೆಗಳನ್ನು ತಡೆಯಲು ಕೂಡಲೇ ಕ್ರಮ ಕೈಗೊಳ್ಳುವಂತೆ ಕಾನೂನಿನಡಿ ಕಠಿಣ ಕ್ರಮ ಕೈಗೊಳ್ಳಲು ಗೃಹ ಇಲಾಖೆಗೆ ಸೂಕ್ತ ನಿರ್ದೇಶನ ನೀಡಬೇಕು. ಅಷ್ಟೇ ಅಲ್ಪ, ಕುರಿಗಾಯಿಗಳಿಗೆ ಸೂಕ್ತ ರಕ್ಷಣೆ ಒದಗಿಸಲು ಸಂಬಂಧಿಸಿದ ಇಲಾಖೆಗೆ ನಿರ್ದೇಶನ ನೀಡಬೇಕು ಎಂದು ಶಾಸಕರು ವಿನಂತಿಸಿದ್ದಾರೆ.
ಅಲ್ಲದೇ, ಇಂಥ ಘಟನೆಗಳು ನಡೆದ ಸಂದರ್ಭದಲ್ಲಿ ಅಂಥವರ ಕುಟುಂಬಕ್ಕೆ ಸರ್ಕಾರ ಧೈರ್ಯ ತುಂಬಬೇಕು ಮತ್ತು ಸೂಕ್ತ ಪರಿಹಾರ ನೀಡಲು ಅನುದಾನ ಘೊಷಣೆ ಮಾಡಬೇಕು ಎಂದು ಸುನೀಲಗೌಡ ಪಾಟೀಲ ಪತ್ರದ ಮೂಲಕ ಮನವಿ ಮಾಡಿದ್ದಾರೆ.