ಕೋಟಿ ಲೆಕ್ಕದ ಯೋಜನೆ ಕಾರ್ಯರೂಪಕ್ಕೆ ಬಂದಿಲ್ಲ - ಶಾಸಕರದ್ದು ಅಭಿವೃದ್ಧಿಯ ಬಗ್ಗೆ ಪೊಳ್ಳು ಭರವಸೆ - ರಾಜೇಶ್ ಬನ್ನೂರು ಆರೋಪ

Published on

ಪುತ್ತೂರು: ಶಾಸಕರು ತೋಚಿದ್ದನ್ನು ಹೇಳುತ್ತಿರುವುದು ಬಿಟ್ಟರೆ ಕಾರ್ಯರೂಪಕ್ಕೆ ಯಾವುದೇ ಕೆಲಸಗಳು ಬಂದಿಲ್ಲ. ಕೋಟಿಗಳ ಲೆಕ್ಕವನ್ನು ನೀಡುತ್ತಿದ್ದು, ಅಭಿವೃದ್ಧಿಯಲ್ಲಿ ಇದು ಕಾಣುತ್ತಿಲ್ಲ. ಮಹಿಳಾ ಠಾಣೆ ಸ್ಥಳಾಂತರಿಸುವ ನಿಟ್ಟಿನಲ್ಲಿ ಬಂದ ೧ ಕೋಟಿ ರೂ. ಅನುದಾನ ಎಲ್ಲಿಗೆ ಹೋಯಿತು? ಪೊಲೀಸ್ ಠಾಣೆ ತೆರವುಗೊಳಿಸುವುದಾಗಿ ಶಾಸಕರು ನೀಡುತ್ತಿರುವ ಹೇಳಿಕೆ ಸಂಪೂರ್ಣ ದಾರಿ ತಪ್ಪಿಸುವಂಥದ್ದು ಎಂದು ಪುರಸಭೆ ಮಾಜಿ ಅಧ್ಯಕ್ಷ ರಾಜೇಶ್ ಬನ್ನೂರು ಆರೋಪಿಸಿದರು.

ಮಹಿಳಾ ಪೊಲೀಸ್ ಠಾಣೆ ಅನಧಿಕೃತ ಕಟ್ಟಡವೆಂದು ಶಾಸಕರು ಹೇಳುತ್ತಿದ್ದು, ಸರ್ವೇ ನಂಬರ್ ೭೮/೮ರಲ್ಲಿ ೦.೦೮ ಎಕರೆ ಜಮೀನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಹೆಸರಿನಲ್ಲೇ ಪಹಣಿ ಇದೆ. ಬ್ರಿಟಿಷರ ಕಾಲದ ಪಾರಂಪರಿಕ ಕಟ್ಟಡಕ್ಕೆ ಧಾರ್ಮಿಕ ಹಿನ್ನೆಲೆಯಿದ್ದು, ಜಾತ್ರೆ ಸಂದರ್ಭ ದೇವಸ್ಥಾನದಿಂದ ಇಲ್ಲಿಗೆ ವಿಶೇಷ ಗೌರವ ಸಲ್ಲಿಸುವ ಸಂಪ್ರದಾಯವಿದೆ. ಹೀಗಿರುವಾಗ ಇದರ ತೆರವು ಅಷ್ಟು ಸುಲಭವಲ್ಲ. ಒಂದು ವೇಳೆ ಕಾನೂನುಬದ್ಧವಾಗಿ ಸ್ಥಳಾಂತರಿಸಿದರೂ ಅಲ್ಲಿ ಒಂದು ಪೊಲೀಸ್ ಹೊರಠಾಣೆ ಇರಲೇಬೇಕು. ಶ್ರೀ ಮಹಾಲಿಂಗೇಶ್ವರ ದೇವಸ್ಥಾನವು ಪ್ರವಾಸಿ ತಾಣವಾಗುವುದಕ್ಕಿಂತ ಹೆಚ್ಚಾಗಿ ಶ್ರದ್ಧಾಕೇಂದ್ರ ಮತ್ತು ಧರ್ಮಕ್ಷೇತ್ರವಾಗಿಯೇ ಉಳಿಯಬೇಕು. ಹಿಂದುತ್ವ ಮನಸ್ಸಿನಲ್ಲಿ ಬರಬೇಕು ಹೊರತು ತೋರ್ಪಡೆಗೆ ಅಲ್ಲ. ಅಭಿವೃದ್ಧಿ ಕಾರ್ಯಗಳಿಗೆ ಯಾವುದೇ ಅಡ್ಡಿಪಡಿಸುವುದಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಶಾಸಕರ ಅವಧಿಯಲ್ಲಿ ಒಂದೇ ಒಂದು ಹೊಸ ಯೋಜನೆ ಕಾರ್ಯರೂಪಕ್ಕೆ ಬಂದಿಲ್ಲ. ಪ್ರಸ್ತಾವನೆಯಲ್ಲಿದ್ದ ರಿಂಗ್ ರೋಡ್ ಯೋಜನೆ ತಿರಸ್ಕೃತಗೊಂಡಿದೆ. ಬೊಳುವಾರು- ಪಡಿಲ್ ಡಬಲ್ ರಸ್ತೆ ಕಾಮಗಾರಿ ಸ್ಥಿತಿ ಏನಾಗಿದೆ ಎಂಬುದು ಯಾರಿಗೂ ತಿಳಿದಿಲ್ಲ. ಇಷ್ಟೆಲ್ಲಾ ವೈ-ಲ್ಯಗಳ ನಡುವೆ ಒಬ್ಬ ಜನಪ್ರತಿನಿಧಿಯಾಗಿ ಟೀಕೆ, ಸಲಹೆಗಳನ್ನು ಸ್ವೀಕರಿಸುವ ಸಹನೆ ಅವರಿಗಿಲ್ಲ. ಬದಲಾಗಿ ಪ್ರಶ್ನೆ ಮಾಡಿದವರನ್ನು ಸಾರ್ವಜನಿಕವಾಗಿ ನಿಂದಿಸುವುದು ಮತ್ತು ವೈಯಕ್ತಿಕ ವಿಚಾರಗಳನ್ನು ಎತ್ತಿ ಹಂಗಿಸುವುದು ಸ್ವಚ್ಛ ರಾಜಕಾರಣದ ಲಕ್ಷಣವಲ್ಲ.

| ರಾಜೇಶ್ ಬನ್ನೂರು

ಮಾಜಿ ಅಧ್ಯಕ್ಷರು, ಪುತ್ತೂರು ಪುರಸಭೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net