ಜಾಗದ ಮಾಲೀಕರನ್ನು ಹೆದರಿಸಿ ದಾಖಲೆಗಳಿಗೆ ಸಹಿ - ಯುಕೆಟಿಸಿಎಲ್ ವಿರುದ್ಧ ರೈತ ಸಂಘ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಆರೋಪ

WhatsApp Image 2025-06-28 at 11.10.30_f09ea476
Published on

ವಿಟ್ಲ: ಯುಕೆಟಿಸಿಎಲ್ ಕಂಪನಿ ಪ್ರತಿನಿಧಿಗಳು ಖಾಸಗಿ ಜಾಗದ ಮಾಲೀಕರನ್ನು ಹೆದರಿಸಿ ದಾಖಲೆಗಳಿಗೆ ಸಹಿ ಪಡೆಯುತ್ತಿದ್ದಾರೆ. ಹಲವು ಭಾಗದಲ್ಲಿ ಅಧಿಕಾರಿಗಳು ಹಾಗೂ ರೈತರು ಕಂಪನಿ ಜತೆ ಸೇರಿ ಹೋರಾಟದ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು ಆರೋಪಿಸಿದರು.

ಕಂಪನಿಗೆ ಕಳೆದ ಐದು ವರ್ಷದಲ್ಲಿ ಕೇವಲ ೩೦ ಟವರ್ ನಿರ್ಮಾಣ ಮಾಡಲು ಸಾಧ್ಯವಾಗಿದ್ದು, ಶೇ.೯೦ರಷ್ಟು ರೈತರು ಇನ್ನೂ ಜಾಗ ಬಿಟ್ಟಿಲ್ಲ. ಜನಪ್ರತಿನಿಧಿಗಳು ಕಂಪನಿಯ ಎಂಜಲು ಕಾಸಿಗೆ ಕೈಚಾಚಿ ಜನರಿಗೆ ಅನ್ಯಾಯ ಎಸಗುತ್ತಿದ್ದಾರೆ. ಜನರ ಸಮಸ್ಯೆ ಅರಿತು ಯೋಜನೆಯನ್ನು ಪರ್ಯಾಯ ಮಾರ್ಗದಲ್ಲಿ ತೆಗೆದುಕೊಂಡು ಹೋಗಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಯುಕೆಟಿಸಿಎಲ್ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ರಾಜೀವ ಗೌಡ ಮಾತನಾಡಿ ಯುಕೆಟಿಸಿಎಲ್ ೪೦೦ ಕೆವಿ ವಿದ್ಯುತ್ ಪ್ರಸರಣ ಮಾರ್ಗ ವಿರುದ್ಧ ಐದು ವರ್ಷಗಳಿಂದ ಉಡುಪಿಯಿಂದ ಕೇರಳ ಗಡಿಭಾಗದ ತನಕ ಹೋರಾಟ ನಡೆಯುತ್ತಿದೆ. ಜನರು ತಮ್ಮ ಖಾಸಗಿ ಜಾಗದಲ್ಲಿ ಕೆಲಸ ಮಾಡಲಾಗದ ಅರಾಜಕತೆಯನ್ನು ಕಂಪನಿ ಸೃಷ್ಟಿಸುತ್ತಿದೆ. ವಿದ್ಯುತ್ ಮಾರ್ಗ ಸಂಚರಿಸುವ ವ್ಯಾಪ್ತಿಯಲ್ಲಿ ೯೦೦ ಮನೆಗಳಿಗೆ ಹಾನಿಯಾಗುವ ಸಾಧ್ಯತೆಯಿದೆ. ಜನರ ಗೋರಿಯ ಮೇಲೆ ಅಭಿವೃದ್ಧಿ ಮಾಡುವ ಕಾರ್ಯ ಜನಪ್ರತಿನಿಽಗಳಿಂದ ನಡೆಯುತ್ತಿದೆ ಎಂದು ಆರೋಪಿಸಿದರು.

ಪ್ರಧಾನ ಕಾರ್ಯದರ್ಶಿ ಚಿತ್ತರಂಜನ್, ಸಂತ್ರಸ್ತ ರೈತ ರಾಬರ್ಟ್ ಮಂಗಿಲಪದವು ಉಪಸ್ಥಿತರಿದ್ದರು.

ರೈತರಿಗೆ ಅವರ ಜಾಗದಲ್ಲಿ ಕೆಲಸ ಮಾಡಿಕೊಂಡು ಬದುಕಲಾಗದ ಸ್ಥಿತಿ ನಿರ್ಮಾಣವಾಗಿದೆ. ಯೋಜನೆಯ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರೂ ಜನರು ಜಾಗೃತರಾಗುತ್ತಿಲ್ಲ. ಖಾಸಗಿ ಜಾಗಗಳಿಗೆ ಕಂಪನಿಯವರು ಬಂದರೆ ಹೋರಾಟ ತೀವ್ರಗೊಳಿಸುತ್ತೇವೆ. ವಿದ್ಯುತ್ ಮಾರ್ಗ ಮಾಡಿಯೇ ಸಿದ್ಧ ಎಂದರೆ, ಮುಂದಿನ ಎಲ್ಲ ಚುನಾವಣೆಗಳನ್ನು ಬಹಿಷ್ಕರಿಸರಿಸಲಾಗುವುದು. ಕಂಪನಿಯವರ ದಬ್ಬಾಳಿಕೆ ಹೆಚ್ಚಾದರೆ, ಕೊನೆಯ ಅಸ್ತ್ರವಾಗಿ ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ.

| ಚಿತ್ತರಂಜನ್, ಯುಕೆಟಿಸಿಎಲ್ ವಿರೋಧಿ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net