ಪುತ್ತೂರು: ಇತಿಹಾಸ ಪ್ರಸಿದ್ಧ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲೇ ಆರಂಭಗೊಂಡು ಪುತ್ತೂರು ದಸರಾ ನವದುರ್ಗಾರಾಧನಾ ಸಮಿತಿಯ ನೇತೃತ್ವದಲ್ಲಿ ಸಂಪ್ಯ ವಿಷ್ಣುಮೂರ್ತಿ ಅನ್ನಪೂಣೇಶ್ವರಿ ಕ್ಷೇತ್ರದಲ್ಲಿ ಗಣಪತಿ, ಶಾರದೆ, ನವದುರ್ಗೆಯರ ಸಹಿತ ಪುತ್ತೂರು ದಸರಾ ಮಹೋತ್ಸವ ಅ.೩ರಿಂದ ೧೪ರ ತನಕ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ನಡೆಯಲಿದೆ ಎಂದು ಪುತ್ತೂರು ದಸರಾ ಮಹೋತ್ಸವ ಸಮಿತಿ ಸಂಚಾಲಕ ಕುಕ್ಕಾಡಿ ತಂತ್ರಿ ಪ್ರೀತಂ ಪುತ್ತೂರಾಯ ಹೇಳಿದರು.
೩ಕ್ಕೆ ಗಣಪತಿ ಮತ್ತು ನವದುರ್ಗೆಯರ ಪ್ರತಿಷ್ಠೆ ನಡೆಯಲಿದೆ. ಬಳಿಕ ನಗರಸಭೆ ಉಪಾಧ್ಯಕ್ಷ ಬಾಲಚಂದ್ರ ಪುತ್ತೂರು ದಸರಾ ಉದ್ಘಾಟಿಸಲಿದ್ದಾರೆ. ಆರ್ಯಾಪು ಗ್ರಾ.ಪಂ ಉಪಾಧ್ಯಕ್ಷ ಅಶೋಕ್ ನಾಯ್ಕ್, ಉದ್ಯಮಿ ರಮೇಶ್ ಪ್ರಭು ಉಪಸ್ಥಿತರಿರುತ್ತಾರೆ. ಸಾಯಂಕಾಲ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅಕ್ಷಯ ಕಾಲೇಜು ಸಂಚಾಲಕ ಜಯಂತ ನಡುಬೈಲು ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಲಿದ್ದಾರೆ. ೫ಕ್ಕೆ ಸಾಮೂಹಿಕ ಆಯುಧ ಪೂಜೆ, ೯ಕ್ಕೆ ಶಾರದಾ ಪ್ರತಿಷ್ಠೆ, ೧೪ರಂದು ಸಾಮೂಹಿಕ ಚಂಡಿಕಾ ಹವನ ನಡೆಯಲಿದೆ. ಸಾಯಂಕಾಲ ಪುತ್ತೂರು ದಸರಾ ಮೆರವಣಿಗೆ ನಡೆಯಲಿದೆ. ಶೋಭಾಯಾತ್ರೆ ದರ್ಬೆ ಬೈಪಾಸ್ ರಸ್ತೆಯಿಂದ ಪೇಟೆಯಾಗಿ ಬೊಳುವಾರು ತನಕ ನಡೆಯಲಿದೆ. ಪ್ರತಿದಿನ ಬೆಳಗ್ಗೆ ವಿವಿಧ ಭಜನಾ ಮಂಡಳಿಯಿಂದ ಭಜನೆ ಕಾರ್ಯಕ್ರಮ, ಸಾಯಂಕಾಲ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸಮಿತಿ ಕಾಯಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಕುಕ್ಕಾಡಿ, ಪ್ರಧಾನ ಕಾರ್ಯದರ್ಶಿ ನೇಮಾಕ್ಷ ಸುವರ್ಣ, ಉಪಾಧ್ಯಕ್ಷ ಜಯಂತ ಶೆಟ್ಟಿ ಕಂಬಳತ್ತಡ್ಡ ಉಪಸ್ಥಿತರಿದ್ದರು.