ಶಾಸಕರ ಅಸಮಾಧಾನ ಕಾರಣ ರಾಜೀನಾಮೆ - ಪುಡಾ ಅಧ್ಯಕ್ಷ ಭಾಸ್ಕರ ಕೋಡಂಬಳ ಹೇಳಿಕೆ

PTR_13 JUL_7
Published on

ಪುತ್ತೂರು: ಪುಡಾ ಅಧ್ಯಕ್ಷನಾಗಿ ಅಽಕಾರ ವಹಿಸಿದ ಬಳಿಕ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಿಕೊಂಡು ಬರುತ್ತಿದ್ದು, ಜು.೧೧ರಂದು ಕರೆ ಮಾಡಿದ ಶಾಸಕ ಅಶೋಕ್‌ಕುಮಾರ್ ರೈ ಪುಡಾ ಈಗ ಕೆಲಸ ಮಾಡುತ್ತಿಲ್ಲ, ಸತ್ತು ಹೋಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಾಸಕರಿಗೆ ಅಸಮಾಧಾನ ಇರುವುದರಿಂದ ಈ ಹುದ್ದೆಯಲ್ಲಿ ನಾನು ಮುಂದುವರಿಯಲು ಇಚ್ಚಿಸುವುದಿಲ್ಲ. ಸ್ವಂತಿಕೆಯ ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದೇನೆ ಎಂದು ಪುತ್ತೂರು ನಗರ ಯೋಜನಾ ಪ್ರಾಽಕಾರದ (ಪುಡಾ) ಅಧ್ಯಕ್ಷ ವಕೀಲ ಭಾಸ್ಕರ ಕೋಡಂಬಳ ಹೇಳಿದರು.


ಮಾ.೧೬ರಂದು ಪುಡಾ ಅಧ್ಯಕ್ಷನಾಗಿ ಜವಾಬ್ದಾರಿ ವಹಿಸಿಕೊಂಡಿದ್ದು, ತಕ್ಷಣದಿಂದ ಲೋಕಸಭಾ ಚುನಾವಣಾ ನೀತಿ ಸಂಹಿತೆ ಜೂನ್ ೬ರವರೆಗೆ ಜಾರಿಯಲ್ಲಿತ್ತು. ಜೂನ್ ೧೯ರಂದು ಪುಡಾದಲ್ಲಿ ಪ್ರಥಮ ಸಭೆ ನಡೆಸಿ ಸಮಸ್ಯೆಗಳನ್ನು ಶಾಸಕರ ನೇತೃತ್ವದಲ್ಲಿ ಪರಿಹರಿಸುವ ನಿಟ್ಟಿನಲ್ಲಿ ಚರ್ಚೆ ನಡೆಸಲಾಗಿತ್ತು. ಪುತ್ತೂರು ಭಾಗದಲ್ಲಿ ಕಟ್ ಕನ್ವವರ್ಷನ್ ಸೇರಿ ಹಲವು ಸಮಸ್ಯೆಗಳಿದ್ದು, ಮಂಗಳೂರು ಮತ್ತು ಉಡುಪಿಯಲ್ಲಿ ಸಣ್ಣ ವಿನಾಯಿತಿಯಿದೆ. ಪುತ್ತೂರಿಗೂ ಈ ತಿದ್ದುಪಡಿ ಮಾಡಬೇಕೆಂದು ಬರೆದುಕೊಳ್ಳುವ ಕೆಲಸ ಮಾಡಲಾಗಿದೆ. ಅತ್ಯಲ್ಪ ಅವಽಯಲ್ಲಿ ಕೆಲವೊಂದು ಸಮಸ್ಯೆಗಳನ್ನು ಬಗೆಹರಿಸುವ ಪ್ರ್ರಾಮಾಣಿಕ ಕೆಲಸ ಮಾಡಿದ್ದೇನೆ ಎಂದು ಸುದ್ದಿಗೋಷ್ಠಿ ನಡೆಸಿ ತಿಳಿಸಿದರು.


ಕಡಬ ವಲಯ ಕಾಂಗ್ರೆಸ್ ಅಧ್ಯಕ್ಷನಾಗಿ ಕೆಲಸ ಮಾಡಿದ್ದು, ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಾಗುವ ಅವಕಾಶ ಬಿಟ್ಟು ಪುತ್ತೂರಿಗೆ ಬಂದಿದ್ದೇನೆ. ಪುತ್ತೂರು ಬ್ಲಾಕ್‌ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ, ಪುತ್ತೂರು ವಿಧಾನಸಭಾ ಚುನಾವಣೆಯಲ್ಲಿ ಶಕುಂತಳಾ ಶೆಟ್ಟಿ ಸ್ಪಽಸಿದ್ದ ವೇಳೆ ಪ್ರಚಾರ ಸಮಿತಿಯ ಅಧ್ಯಕ್ಷನಾಗಿ, ಕಳೆದ ವಿಧಾನಸಭಾ ಚುನಾವಣೆಯ ವೇಳೆ ಪ್ರಚಾರ ಸಮಿತಿಯ ಅಧ್ಯಕ್ಷನಾಗಿ ಹಾಗೂ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಅಶೋಕ್‌ಕುಮಾರ್ ರೈ ಅವರ ಚುನಾವಣಾ ಏಟೆಂಟ್ ಆಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಯಾರ ಶಿಫಾರಸ್ಸು ಕೂಡ ಇಲ್ಲದೆ ಶಾಸಕರೇ ನನ್ನನ್ನು ಪುಡಾದ ಅಧ್ಯಕ್ಷರಾಗಿ ಮಾಡಿದ್ದು, ನಾನು ಹುದ್ದೆ ಅಪೇಕ್ಷೆ ಮಾಡಿದವನೇ ಅಲ್ಲ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net