ಉಪ್ಪಿನಂಗಡಿ ಕ್ಷೇತ್ರದಲ್ಲಿ ಪೂರಕ ಸಿದ್ಧತೆ : ದೇಗುಲ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ನೈಾಕ್ ಮಾಹಿತಿ

Published on

ಉಪ್ಪಿನಂಗಡಿ: ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದಲ್ಲಿ 21ರಂದು ಮಹಾಲಯ ಅಮಾವಾಸ್ಯೆ ಹಿನ್ನೆಲೆ ಅಸಂಖ್ಯಾತ ಭಕ್ತರ ಆಗಮನದ ನಿರೀಕ್ಷೆ ಇದ್ದು, ಭಕ್ತರ ಅನುಕೂಲತೆಗೆ ಪೂರಕ ವ್ಯವಸ್ಥೆಯಲ್ಲಿ ಕಲ್ಪಿಸಲಾಗಿದೆ ಎಂದು ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ನೈಾಕ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಹಾಲಯ ಅಮಾವಾಸ್ಯೆಯಂದು ನಿರೀಕ್ಷೆಗೂ ಮೀರಿದ ಭಕ್ತರು ಆಗಮಿಸಿ ತಮ್ಮ ಗತಿಸಿದ ಪಿತೃಗಳಿಗೆ ಮೋಕ್ಷದಾಯಕ ವಿಧಿವಿಧಾನಗಳನ್ನು ನಡೆಸಲಿರುವುದರಿಂದ ದೇವಾಲಯದಲ್ಲಿ ಅಗತ್ಯಕ್ಕೆ ತಕ್ಕುದಾದ ಪುರೋಹಿತರನ್ನು ನಿಯುಕ್ತಿಗೊಳೀಸಲಾಗುವುದು. ವಿಸ್ತೃತ ಕ್ರಿಯಾವಿಭಾಗಗಳನ್ನು ತೆರೆದು ಏಕ ಕಾಲಕ್ಕೆ ಹೆಚ್ಚಿನ ಭಕ್ತರಿಗೆ ಸೇವೆ ಒದಗಿಸಲಾಗುವುದು. ಆಗಮಿಸುವ ಭಕ್ತರಿಗೆ ಮಧ್ಯಾಹ್ನ ಅನ್ನಸಂತರ್ಪಣೆ ನಡೆಸಲಾಗುವುದೆಂದು ತಿಳಿಸಿದರು.

ಸೆ.22ರಂದು ತೆನೆ ಹಬ್ಬ ನಡೆಯಲಿದ್ದು, ಬೆಳಗ್ಗೆ 7ರಿಂದಲೇ ಭಕ್ತರಿಗೆ ತೆನೆ ವಿತರಿಸಲಾಗುವುದು. ಹಾಗೂ ಅಂದಿನಿಂದ ವಿಜಯದಶಮಿ ವರೆಗಿನ ಎಲ್ಲಾ ದಿನಗಳಲ್ಲಿ ಮಹಾಕಾಳಿ ಅಮ್ಮನವರಿಗೆ ಸ್ಥಳೀಯ ಕಾಳೀಕಾಂಬಾ ಭಜನಾ ಮಂಡಳಿಯಿಂದ ಭಜನಾ ಸೇವೆ, ಭಕ್ತರಿಂದ ಅಲಂಕಾರ ಪೂಜೆ, ಸರ್ವಾಲಂಕಾರ ಪೂಜೆಯೊಂದಿಗೆ ನವರಾತ್ರಿ ವಿಶೇಷ ಪೂಜೆ ನಡೆಯಲಿದೆ. ಪ್ರತಿ ರಾತ್ರಿಯೂ ಅನ್ನಸಂತರ್ಪಣೆ ಜರುಗಲಿದೆ ಎಂದರು.

ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸೋಮನಾಥ, ವೆಂಕಪ್ಪ ಪೂಜಾರಿ, ಅರ್ತಿಲ ಕೃಷ್ಣ ರಾವ್, ಡಾ.ರಮ್ಯಾ ರಾಜಾರಾಮ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net