ಮಂಡ್ಯ: ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿಯಿಂದ ಕನ್ನಡ ಭಾಷೆಯ ನಿರ್ಲಕ್ಷ್ಯ, ಪರಿಷತ್‌ನಲ್ಲಿ ಆರ್ಥಿಕ ಅಶಿಸ್ತು, ಬೈಲಾ ತಿದ್ದುಪಡಿ, ಸರ್ವಾಧಿಕಾರಿ ಧೋರಣೆ ಸೇರಿದಂತೆ ಪರಿಷತ್‌ನ ಘನತೆಗೆ ಧಕ್ಕೆ ತರುವ ಕೆಲಸದಲ್ಲಿ ತೊಡಗಿರುವ ಹಿನ್ನೆಲೆಯಲ್ಲಿ ಚರ್ಚೆ ನಡೆಸಲು ಮೇ 17ರಂದು ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ವಿಭಾಗ ಮಟ್ಟದ ಜಾಗೃತಿ ಸಮಾವೇಶ ಆಯೋಜಿಸಲಾಗಿದೆ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಹೇಳಿದರು.
ಮಹೇಶ ಜೋಶಿ ವಿಚಾರವಾಗಿ ವೈಯಕ್ತಿಕವಾಗಿ ಯಾವುದೇ ತಕರಾರಿಲ್ಲ. ಈತ ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲಕ ಆಯ್ಕೆಯಾಗಿದ್ದಾರೆ. ಆದರೆ ಪ್ರಜಾಪ್ರಭುತ್ವ ವಿರೋಧಿ ನೆಲೆಯಲ್ಲಿ ಅಧಿಕಾರ ನಡೆಸುತ್ತಿರುವುದು ಸರಿಯಲ್ಲ ಎಂಬುದಾಗಿ ನಮ್ಮ ಹೋರಾಟ. ಅಂದು ಆಯೋಜಿಸಿರುವ ಜಾಗೃತಿ ಸಮಾವೇಶಕ್ಕೆ ಹಲವು ಹಿರಿಯ ಸಾಹಿತಿಗಳು ಭಾಗವಹಿಸಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸರ್ಕಾರದಿಂದ ಹಣ ನೀಡಲು ಪ್ರಾರಂಭವಾದಾಗಿನಿಂದ ಅಧ್ಯಕ್ಷರಾದವರ ಆಟಾಟೋಪ ಹೆಚ್ಚಾಗಿವೆ. ಈ ಸಂಬಂಧ ಆರೋಗ್ಯಕರ ಚರ್ಚೆ ಮಾಡುವವರ ವಿರುದ್ದ ನೋಟೀಸ್ ನೀಡುವ ಕೆಲಸಕ್ಕೆ ಮುಂದಾದ ಜೋಶಿ, ಇದಕ್ಕೂ ಪರಿಷತ್‌ನ ಹಣ ಬಳಕೆ ಮಾಡಿ ಮತ್ತು ಆರ್ಥಿಕ ಅಶಿಸ್ತಿನ ಮಟ್ಟವನ್ನು ಹೆಚ್ಚಿಕೊಂಡಿದ್ದಾರೆ. ಸಮ್ಮೇಳನ ಸ್ಮರಣ ಸಂಚಿಕೆ ಬಿಡುಗಡೆ ಮಾಡಲು ಜಿಲ್ಲಾಧಿಕಾರಿ ತಡ ಏಕೆ ಮಾಡುತ್ತಿದ್ದಾರೆ. ಸ್ಮರಣ ಸಂಚಿಕೆ ಸಮಿತಿ ಇದ್ದರೂ ಜೋಶಿಗೆ ಕಾಯುವ ಕೆಲಸವೇನಿದೆ. ಈ ಮೀನಾಮೇಷ ನಡವಳಿಕೆ ಬಿಡಬೇಕು. ಈ ಸಂಬಂಧ ಅಧ್ಯಕ್ಷನೊಂದಿಗೆ ಸಭೆ ನಡೆಸಲು ಬೆಂಗಳೂರಿಗೆ ಹೋಗುವ ಸಂಬಂಧ ಬಹಿರಂಗ ಹೇಳಿಕೆ ನೀಡುವಂತೆ ಒತ್ತಾಯಿಸಿದರು.
ಕಸಾಪದ ಆಡಿಟ್ ವರದಿಯ ಬಗ್ಗೆ ಕಾನೂನಾತ್ಮಕವಾದ ಪ್ರಶ್ನೆಯನ್ನು ಮಾಡುತ್ತೇವೆ. ತಪ್ಪಾಗಿದೆ ಎಂದು ಒಪ್ಪಿಕೊಂಡು ಸರಿಪಡಿಸಿಕೊಳ್ಳುತ್ತೇವೆ ಎಂದು ಅಧ್ಯಕ್ಷ ಹೇಳಬಹುದು. ಆದರೂ ಅದಕ್ಕೆ ಸಕಾರಣಗಳನ್ನು ತಿಳಿಸಬೇಕು. ಮಹೇಶ ಜೋಶಿ ವಿರುದ್ಧ ಹೋರಾಟ ಮಾಡಲು ಸಿದ್ದರಿದ್ದೆವು. ಆದರೆ ಅವರನ್ನು ಜಗ್ಗಾಡಿ ಹೋರಾಟ ಮಾಡುವ ಅವಿವೇಕತನ ನಮ್ಮಲ್ಲಿಲ್ಲ. ಕಪ್ಪುಪಟ್ಟಿ ಪ್ರದರ್ಶಿಸುವ ಹಕ್ಕು ಹೋರಾಟ ಮಾಡುವವರಿಗಿಲ್ಲವೇ ಎಂದು ಪ್ರಶ್ನಿಸಿದರು.
ಕಸಾಪ ಕನ್ನಡಕ್ಕಾಗಿ ದೊಡ್ಡ ಹೋರಾಟ ಮಾಡಿಲ್ಲ, ದಿಟ್ಟ ನಿರ್ಧಾರಗಳನ್ನು ಕೈಗೊಂಡಿಲ್ಲ. ಸರ್ಕಾರದ ಮರ್ಜಿಗೊಳಪಟ್ಟು ಕೆಲಸ ಮಾಡುತ್ತಿದೆ. ಎಲ್ಲ ಜಿಲ್ಲೆಗಳ ಅಧ್ಯಕ್ಷ ಹಾಗೂ ಕೇಂದ್ರ ಸಮಿತಿ ಸ್ಥಾನಕ್ಕೆ ತನಗೆ ಬೇಕಾದವರನ್ನು ಮಹೇಶ ಜೋಶಿ ನಾಮನಿರ್ದೇಶನ ಮಾಡಿಕೊಂಡು ಸಾರ್ವಭೌಮನಂತೆ ವರ್ತಿಸುತ್ತಿರುವುದು ಸರಿಯಿಲ್ಲ. ಮಂಡ್ಯ ಸಮ್ಮೇಳನದ ಖರ್ಚುವೆಚ್ಚವನ್ನು ನೀಡದ ಅಧ್ಯಕ್ಷ ಜೋಶಿ, ಮುಂದಿನ ವರ್ಷ ಬಳ್ಳಾರಿಯಲ್ಲಿ ಜರುಗಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಖರ್ಚಿಗೆ ಸರ್ಕಾರದಿಂದ 40 ಕೋಟಿ ರೂ ಕೇಳುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಕಸಾಪ ಮಾಜಿ ಅಧ್ಯಕ್ಷರಾದ ಡಾ.ಮೀರಾ ಶಿವಲಿಂಗಯ್ಯ, ಪ್ರೊ.ಜಿ.ಟಿ.ವೀರಪ್ಪ, ಸುನಂದಾ ಜಯರಾಂ, ಎಂ.ವಿ.ಧರಣೀಂದ್ರಯ್ಯ, ಡಿ.ಪಿ.ಸ್ವಾಮಿ, ಎಚ್.ಕೆ.ಜಯರಾಂ, ಎಚ್.ವಿ.ಜಯರಾಂ ಇದ್ದರು.
