More

    ಕ್ಷಯ ಪತ್ತೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಿ, ಅಪರ ಜಿಲ್ಲಾಧಿಕಾರಿ ಡಾ. ಜಗದೀಶ್ ಕೆ.ನಾಯಕ್ ಸೂಚನೆ, ಜಿಲ್ಲಾಮಟ್ಟದ ಇಲಾಖೆ ಸಮನ್ವಯ ಸಮಿತಿ ಪೂರ್ವಭಾವಿ ಸಭೆ

    ಬೆಂಗಳೂರು ಗ್ರಾಮಾಂತರ: ಕ್ಷಯರೋಗ ಪತ್ತೆಗೆ ಅಗತ್ಯವಿರುವ ಎಲ್ಲ ಸಿದ್ಧತೆ ಮಾಡಿಕೊಳ್ಳುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಗ್ರಾಮಾಂತರ ಅಪರ ಜಿಲ್ಲಾಧಿಕಾರಿ ಡಾ.ಜಗದೀಶ್ ಕೆ.ನಾಯಕ್ ಸೂಚಿಸಿದರು.

    ದೇವನಹಳ್ಳಿ ತಾಲೂಕು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನದ ಜಿಲ್ಲಾಮಟ್ಟದ ಇಲಾಖೆಗಳ ಸಮನ್ವಯ ಸಮಿತಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

    ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದ ಅಂಗವಾಗಿ ಸಕ್ರಿಯ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನವನ್ನು 2020ರ ಡಿ.1 ರಿಂದ 31 ರವರೆಗೆ ಹಮ್ಮಿಕೊಂಡಿದ್ದು, 2025ರ ವೇಳೆಗೆ ಈ ಕಾರ್ಯಕ್ರಮದ ಮೂಲಕ ಕ್ಷಯರೋಗ ನಿರ್ಮೂಲನೆ ಮಾಡುವ ಗುರಿ ಇಟ್ಟುಕೊಳ್ಳಲಾಗಿದ್ದು, ಅಧಿಕಾರಿಗಳೂ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದರು ತಾಕೀತು ಮಾಡಿದರು.

    ಮಕ್ಕಳಿಗೆ ಪೌಷ್ಟಿಕತೆ ಕುರಿತು ಮಾಹಿತಿ ನೀಡುವಾಗ ಕ್ಷಯ ರೋಗದ ಕುರಿತೂ ಮಾಹಿತಿ ನೀಡಿ ಜತೆಗೆ ಆನ್‌ಲೈನ್ ತರಗತಿಗಳ ವೇಳೆ ವಿದ್ಯಾರ್ಥಿಗಳಿಗೆ ಕ್ಷಯರೋಗದ ಲಕ್ಷಣ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ರೂಪಿಸಬೇಕು ಎಂದು ತಿಳಿಸಿದರು.

    ಜಾಗೃತಿ ಮೂಡಿಸಿ: ಪ್ರತಿ ಗ್ರಾಮಗಳಲ್ಲೂ ಧ್ವನಿವರ್ಧಕ ಬಳಸಿ, ಕ್ಷಯರೋಗ ಮತ್ತು ಚಿಕಿತ್ಸಾ ಆಂದೋಲನದ ಕುರಿತು ಜಾಗೃತಿ ಮೂಡಿಸುವುದು ಹಾಗೂ ಸಭೆಗಳಲ್ಲಿ ಕ್ಷಯರೋಗದ ಆಂದೋಲನದ ಕುರಿತು ಪ್ರಸ್ತಾಪಿಸುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳಿಗೆ ಎಡಿಸಿ ಸೂಚಿಸಿದರು.

    ನಗರಸಭೆ ಹಾಗೂ ಪುರಸಭೆ ಪೌರ ಕಾರ್ಮಿಕರು ಹಾಗೂ ಅವರ ಕುಟುಂಬದ ಸದಸ್ಯರಿಗೆ ಕ್ಷಯರೋಗ ತಪಾಸಣೆ ಕಡ್ಡಾಯವಾಗಿ ಮಾಡಿಸಬೇಕು ಎಂದು ಹೇಳಿದರು.

    ಜಿಲ್ಲೆಯಲ್ಲಿನ ಕ್ವಾರಿಗಳಲ್ಲಿ ಧೂಳು ವಾತಾವರಣದಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರಲ್ಲಿ ಉಸಿರಾಟದ ಸಮಸ್ಯೆ ಹೆಚ್ಚು ಕಂಡು ಬರುತ್ತಿರುವುದು ಕಂಡುಬಂದಿದೆ. ಅಂತಹ ಪ್ರದೇಶಗಳನ್ನು ಗುರುತಿಸಿ ಅಲ್ಲಿನ ಕಾರ್ಮಿಕರನ್ನು ಸ್ಕ್ರೀನಿಂಗ್ ಮಾಡಿ, ಕ್ಷಯರೋಗದ ಲಕ್ಷಣಗಳಿದ್ದಲ್ಲಿ, ಚಿಕಿತ್ಸೆಗೆ ಕ್ರಮಕೈಗೊಳ್ಳಬೇಕು ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗೆ ತಿಳಿಸಿದರು.

    447 ಗುಂಪು ರಚನೆ: ಜಿಲ್ಲಾ ಕ್ಷಯರೋಗ ನಿಯಂತ್ರಣ ಘಟಕದ ಸಂಚಾಲಕಿ ಶಕೀಲಾ ಮಾತನಾಡಿ ತಿಂಗಳ ಅಂತ್ಯದವರೆಗೂ ನಡೆಯುವ ಕಾರ್ಯಕ್ರಮ ಇದಾಗಿದ್ದು, 9,82,072 ಜನಸಂಖ್ಯೆ ತಲುಪುವ ಗುರಿ ಹೊಂದಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು. ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ, ಸಂಘ-ಸಂಸ್ಥೆಗಳನ್ನೊಳಗೊಂಡ 447 ಗುಂಪು ರಚಿಸಲಾಗಿದೆ ಹಾಗೂ ಕ್ಷಯರೋಗದ ಆಂದೋಲನದಲ್ಲಿ ಎಂ.ವಿ.ಜೆ. ಮತ್ತು ಆಕಾಶ್ ಮೆಡಿಕಲ್ ಕಾಲೇಜಿನ ಸಿಬ್ಬಂದಿ ಹಾಗೂ ಖಾಸಗಿ ಔಷಧ ಅಂಗಡಿ ಮಾಲೀಕರು ಭಾಗವಹಿಸಲಿದ್ದಾರೆ. ಜಿಲ್ಲೆಯ ಖಾಸಗಿ ಆಸ್ಪತ್ರೆಗಳು ಕ್ಷಯರೋಗಿಗಳಿಗೆ ಕ್ಷ-ಕಿರಣ ಪರೀಕ್ಷೆಯನ್ನು ಉಚಿತವಾಗಿ ಮಾಡುವ ಮೂಲಕ ಸಹಕಾರ ನೀಡಿದ್ದಾರೆಂದು ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts