
ಟ್ರಸ್ಟ್ ಅಧ್ಯಕ್ಷ ಎಚ್.ಆರ್. ಶೆಣೈ ಆಶಯ
ಕಾಡಬೆಟ್ಟು ಸ್ಕೂಲ್ ಶತಮಾನೋತ್ಸವದ ಪೂರ್ವಭಾವಿ ಸಭೆ
ವಿಜಯವಾಣಿ ಸುದ್ದಿಜಾಲ ಉಡುಪಿ
ಶಾಲೆಗಳನ್ನು ಮುನ್ನಡೆಸುವುದು ಸುಲಭದ ಕಾರ್ಯವಲ್ಲ. ಹೀಗಾಗಿ ಸಮಾಜ, ದಾನಿಗಳು ಮತ್ತು ಹಳೆಯ ವಿದ್ಯಾರ್ಥಿಗಳು ತಾವು ಕಲಿತ ಶಾಲೆಯ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಟಿ.ಎ. ಪೈ ಮಾಡರ್ನ್ ಹಿರಿಯ ಪ್ರಾಥಮಿಕ ಶಾಲೆಯ ಟ್ರಸ್ಟ್ ಅಧ್ಯಕ್ಷ ಎಚ್.ಆರ್. ಶೆಣೈ ವಿನಂತಿಸಿದರು.
ಉಡುಪಿಯ ಕಾಡುಬೆಟ್ಟುವಿನಲ್ಲಿರುವ ಟಿ.ಎ. ಪೈ ಮಾಡರ್ನ್ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಆಚರಣೆ ಹಿನ್ನೆಲೆಯಲ್ಲಿ ಶಾಲಾ ಸಭಾಂಗಣದಲ್ಲಿ ಜೂನ್ 15ರಂದು ಬೆಳಗ್ಗೆ ಆಯೋಜಿಸಿದ್ದ ಆಡಳಿತ ಮಂಡಳಿ, ಶಾಲಾ ಶಿಕ್ಷಕ-ಸಿಬ್ಬಂದಿ ವರ್ಗ, ಹಳೆಯ ವಿದ್ಯಾರ್ಥಿಗಳ ಸಂಘ ಹಾಗೂ ಶಾಲಾ ಹಿತೈಷಿಗಳ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.
1927ರಲ್ಲಿ ಶಾಲೆ ಸ್ಥಾಪಿಸಲಾಗಿದ್ದು, 2027ರಲ್ಲಿ ಶತಕ ಪೂರೈಸಲಿದೆ. ಹೀಗಾಗಿ ಸಂಭ್ರಮದಿಂದ ಶತಮಾನೋತ್ಸವ ಆಚರಿಸಬೇಕಿದೆ. ತಮ್ಮೆಲ್ಲರ ಸಲಹೆ, ಸೂಚನೆ ಅಗತ್ಯ ಎಂದರು.
ಸಭೆಯಲ್ಲಿ ಸರ್ವ ಸದಸ್ಯರ ಒಮ್ಮತದೊಂದಿಗೆ ವಿವಿಧ ಸಮಿತಿ ರಚಿಸಲಾಯಿತು. 2026-27ರ ಶೈಕ್ಷಣಿಕ ವರ್ಷದಲ್ಲಿ ತಿಂಗಳವಾರು ವಿವಿಧ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಯಿತು. ಶಾಲೆಯ ಹಳೆಯ ವಿದ್ಯಾರ್ಥಿ ಅಲ್ತಫ್ ಎಂಬವರು ಶತಮಾನೋತ್ಸವಕ್ಕಾಗಿ 10 ಸಾವಿರ ರೂ. ಪ್ರಥಮ ದೇಣಿಗೆ ನೀಡಿದರು.
ಖಜಾಂಚಿ ರಮೇಶ ರಾವ್, ಮುಖ್ಯ ಶಿಕ್ಷಕಿ ಸುಲೋಚನಾ ಉಪಸ್ಥಿತರಿದ್ದರು. ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ನಾರಾಯಣ ಭಂಡಾರಿ ಸ್ವಾಗತಿಸಿದರು.