

ಸಂದೀಪ್ ಸಾಲ್ಯಾನ್ ಬಂಟ್ವಾಳ
ಈ ಬಾರಿ ಏಪ್ರಿಲ್ ತಿಂಗಳಿನಲ್ಲಿಯೇ ಮುಂಗಾರು ಪೂರ್ವ ಮಳೆ ಆರಂಭವಾಗಿದ್ದು, ತಾಲೂಕಾಡಳಿತ ಹಾಗೂ ಸ್ಥಳೀಯಾಡಳಿತ ಮುಂದಿನ ಮಳೆಗಾಲಕ್ಕೆ ಸಿದ್ಧಗೊಳ್ಳುವಂತೆ ಎಚ್ಚರಿಕೆ ನೀಡುತ್ತಿದೆ.
ಪ್ರತಿ ಬಾರಿಯೂ ಮಳೆಗಾಲ ಆರಂಭವಾದ ಬಳಿಕ ಎಚ್ಚೆತ್ತುಕೊಳ್ಳುವ ಇಲಾಖೆಗಳಿಗೆ ಈ ಬಾರಿಯ ಮುಂಗಾರು ಪೂರ್ವ ಮಳೆ ಸಿದ್ಧತೆ ಮಾಡಿಕೊಳ್ಳುವ ಸೂಚನೆ ನೀಡಿದೆ. ಬಂಟ್ವಾಳದಲ್ಲಿ ತಹಸೀಲ್ದಾರ್ ಅರ್ಚನಾ ಭಟ್ ಅಧ್ಯಕ್ಷತೆಯಲ್ಲಿ ಈಗಾಗಲೇ ಅಧಿಕಾರಿಗಳ ಸಭೆ ನಡೆದಿದ್ದು, ಮುಂದಿನ ಮಳೆಗಾಲ ಎದುರಿಸಲು ಸಿದ್ಧತೆ ಆರಂಭಗೊಂಡಿದೆ.
ಮಳೆಗಾಲ ಬಂದಾಗ ಬಂಟ್ವಾಳ ಭಾಗದ ಜನರಿಗೆ ದೊಡ್ಡ ತಲೆನೋವು ಬಿ.ಸಿ.ರೋಡು ಅಡ್ಡಹೊಳೆ ಚತುಷ್ಪಥ ಹೆದ್ದಾರಿ ಕಾಮಗಾರಿ. ಕಳೆದ ಹಲವು ವರ್ಷಗಳಿಂದ ಈ ಚತುಷ್ಪಥ ಹೆದ್ದಾರಿ ನಿರ್ಮಾಣ ಕೆಲಸ ನಡೆಯುತ್ತಿದ್ದು, ಮಳೆಗಾಲದಲ್ಲಿ ವಾಹನಗಳ ಚಾಲಕರು, ಪ್ರಯಾಣಿಕರು, ಪಾದಚಾರಿಗಳು, ಅಂಗಡಿ ವ್ಯಾಪಾರಿಗಳು, ರಸ್ತೆಯ ಇಕ್ಕೆಲಗಳಲ್ಲಿರುವ ಮನೆಗಳ ನಿವಾಸಿಗಳು ರಸ್ತೆಯ ಕೆಸರಿನಿಂದ ಬಹಳಷ್ಟು ತೊಂದರೆ ಅನುಭವಿಸಿದ್ದಾರೆ. ಈ ಬಾರಿ ಮಳೆಗಾಲಕ್ಕಾದರೂ ಕಾಮಗಾರಿ ಪೂರ್ಣಗೊಂಡು ಸಮಸ್ಯೆಗೆ ಪರಿಹಾರ ಸಿಕ್ಕೀತೇ ಎಂದು ಕಾಯುವವರ ಸಂಖ್ಯೆ ಹೆಚ್ಚಾಗಿದೆ.
ರಸ್ತೆ ಇಕ್ಕೆಲಗಳಲ್ಲಿ ಚರಂಡಿ ನಿರ್ಮಾಣ, ಕಾಂಕ್ರೀಟ್ ಕಾಮಗಾರಿಗಳು ಇನ್ನೂ ಬಾಕಿ ಉಳಿದಿರುವುದರಿಂದ ಈ ಬಾರಿಯೂ ಹೆದ್ದಾರಿಯಲ್ಲಿ ಸಮಸ್ಯೆಗಳು ಕಾಡಲಿವೆ. ಮಾಣಿ ಸೂರಿಕುಮೇರು ಬಳಿ ತೋಡಿಗೆ ಕಿರು ಸೇತುವೆ ನಿರ್ಮಾಣಗೊಳ್ಳದ ಕಾರಣ ಈ ಭಾಗದ ಕಾಂಕ್ರೀಟ್ ರಸ್ತೆಯೂ ನಿರ್ಮಾಣಗೊಂಡಿಲ್ಲ. ಇದರಿಂದಾಗಿ ಮೊನ್ನೆ ಸುರಿದ ಮಳೆಗೆ ರಸ್ತೆಯಲ್ಲಿಯೇ ನೀರು ನಿಂತು ಕೆರೆಯಂತಾಗಿತ್ತು. ಪಾಣೆಮಂಗಳೂರು, ಮೆಲ್ಕಾರ್ ಬಳಿಯೂ ಸರ್ವೀಸ್ ರಸ್ತೆಗಳ ಕೆಲಸ ನಡೆಯದಿರುವುದರಿಂದ ಮಳೆಗಾಲದಲ್ಲಿ ಸಮಸ್ಯೆ ಎದುರಾಗುವ ಸಾಧ್ಯತೆ ಹೆಚ್ಚು.
ಚರಂಡಿ ನಿರ್ಮಾಣ
ಬಂಟ್ವಾಳ ಪುರಸಭೆ ವ್ಯಾಪ್ತಿಯ ಕೆಳಗಿನ ಪೇಟೆಯಲ್ಲಿ ನೀರು ಹರಿದು ಹೋಗಲು ಕಾಂಕ್ರೀಟ್ ಚರಂಡಿ ನಿರ್ಮಿಸಿ ಸ್ಲಾೃಬ್ ಅಳವಡಿಸಲಾಗಿದೆ. ಮಳೆಗಾಲ ಆರಂಭವಾಗುವ ಮೊದಲೇ ಪುರಸಭೆ ಈ ಕಾರ್ಯ ಪೂರ್ಣಗೊಳಿಸಿರುವುದರಿಂದ ಮಳೆಗಾಲದ ವೇಳೆಗೆ ನೀರು ಹರಿದು ಹೋಗಲು ಸೂಕ್ತ ಚರಂಡಿ ನಿರ್ಮಾಣವಾಗಿದೆ. ಬಂಟ್ವಾಳ ಬಸ್ತಿಪಡ್ಪು ಬಳಿ ಚರಂಡಿ ಸುತ್ತ ಬೆಳೆದಿದ್ದ ಹುಲ್ಲುಗಳನ್ನು ಪುರಸಭೆಯ ಪೌರಕಾರ್ಮಿಕರು ತೆರವುಗೊಳಿಸಿದ್ದು, ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಕಲ್ಪಿಸಿದ್ದಾರೆ.
ಚರಂಡಿಯಲ್ಲಿ ಹೂಳು
ಬಂಟ್ವಾಳ ತಾಲೂಕಿನ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆ ಬದಿಯ ಚರಂಡಿಗಳಲ್ಲಿ ಹೂಳು, ಪ್ಲಾಸ್ಟಿಕ್ ತ್ಯಾಜ್ಯಗಳು ತುಂಬಿಕೊಂಡು ನೀರು ಹರಿದು ಹೋಗಲು ಸಮಸ್ಯೆಯಾಗುತ್ತಿದೆ. ಕೆಲವೊಂದು ಪಂಚಾಯಿತಿಗಳು ಚರಂಡಿಯ ಹೂಳು ತೆರವುಗೊಳಿಸಿದ್ದರೆ ಹೆಚ್ಚಿನ ಪಂಚಾಯಿತಿಗಳು ಮಳೆ ಬಂದು ಸಮಸ್ಯೆ ಎದುರಾದ ಬಳಿಕವೇ ಎಚ್ಚೆತ್ತುಕೊಳ್ಳುತ್ತವೆ.
ನಗರದಲ್ಲಿ ಫ್ಲೆಕ್ಸ್ ತೆರವು
ಅನಧಿಕೃತ ಫ್ಲೆಕ್ಸ್‌ಗಳನ್ನು ರಸ್ತೆ ಬದಿ ಹಾಕದಂತೆ ಬಂಟ್ವಾಳ ಪುರಸಭೆ ನಿಯಮ ರೂಪಿಸಿದರೂ ನಗರದಲ್ಲಿ ರಾರಾಜಿಸುತ್ತಿದ್ದ ಅನಧಿಕೃತ ಫ್ಲೆಕ್ಸ್‌ಗಳಿಗೆ ಕಡಿವಾಣ ಹಾಕುವುದು ಹರಸಾಹಸವಾಗಿತ್ತು. ಇತ್ತೀಚೆಗೆ ತಹಸೀಲ್ದಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹೆದ್ದಾರಿ ಬದಿ, ರಸ್ತೆಯಂಚಿನಲ್ಲಿ ಹಾಕಿರುವ ಫ್ಲೆಕ್ಸ್‌ಗಳು ಗಾಳಿ ಮಳೆಗೆ ವಾಲಿ ನಿಂತು ಜನರು, ವಾಹನಗಳಿಗೆ ಅಪಾಯ ತಂದೊಡ್ಡುವುದರಿಂದ ಅವುಗಳನ್ನು ತೆರವುಗೊಳಿಸಬೇಕು ಎಂದು ತಹಸೀಲ್ದಾರ್ ಅರ್ಚನಾ ಭಟ್ ಸೂಚನೆ ನೀಡಿದ ಮರುದಿನವೇ ನಗರದಲ್ಲಿ ರಾರಾಜಿಸುತ್ತಿದ್ದ ಎಲ್ಲ ಫ್ಲೆಕ್ಸ್‌ಗಳಿಗೂ ಮುಕ್ತಿ ಸಿಕ್ಕಿದೆ.
ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ಮುಂದಿನ ಸೋಮವಾರದಿಂದ ಚರಂಡಿ ಸ್ವಚ್ಛಗೊಳಿಸುವ ಕಾರ್ಯ ನಡೆಸಲಾಗುವುದು. ಹೂಳು ತುಂಬಿ ಬ್ಲಾಕ್ ಆಗಿರುವ ಚರಂಡಿಗಳನ್ನು ಜೆಸಿಬಿ ಬಳಸಿ ಹೂಳು ತೆಗೆಯಲಾಗುವುದು. 15ನೇ ಹಣಕಾಸಿನಲ್ಲಿ ಅಗತ್ಯವಿರುವ ವಾರ್ಡ್‌ಗಳಲ್ಲಿ ಕಾಂಕ್ರೀಟ್ ಚರಂಡಿ ನಿರ್ಮಿಸಲಾಗಿದೆ. ವಾಸು ಪೂಜಾರಿ ಅಧ್ಯಕ್ಷರು, ಪುರಸಭೆ ಬಂಟ್ವಾಳ https://www.vijayavani.net/youth-dies-in-mob-attack-15-arrested-beaten-up-by-over-30-people https://www.vijayavani.net/police-fir