More

    ಧರ್ಮಸ್ಥಳ ಪಾದಯಾತ್ರೆಗೆ ಸಿದ್ಧತೆ

    ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

    ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಶಿವರಾತ್ರಿ ಪ್ರಯುಕ್ತ ರಾಜ್ಯದ ನಾನಾ ಭಾಗಗಳಿಂದ ಆಗಮಿಸುವ ಪಾದಯಾತ್ರಿಗಳಿಗೆ ಚಾರ್ಮಾಡಿಯಿಂದ ಸರ್ವಸಿದ್ಧತೆ ಮಾಡಲಾಗಿದೆ.

    ನೂರಾರು ತಂಡಗಳ ಸಹಸ್ರಾರು ಸದಸ್ಯರು ಪಾದಯಾತ್ರೆಯಲ್ಲಿ ಚಾರ್ಮಾಡಿ ಮೂಲಕ ಧರ್ಮಸ್ಥಳಕ್ಕೆ ಬರುತ್ತಾರೆ. ಅವರಿಗೆ ಅನುಕೂಲ ಕಲ್ಪಿಸಲು ಸ್ಥಳೀಯ ಸಂಘ-ಸಂಸ್ಥೆಗಳು, ಸಾರ್ವಜನಿಕರು, ಪಾನೀಯ, ನೀರು ಇತ್ಯಾದಿ ವ್ಯವಸ್ಥೆಗಳನ್ನು ಉಚಿತವಾಗಿ ನೀಡಲು ಬೇಕಾದ ಸಿದ್ಧತೆಯಲ್ಲಿ ತೊಡಗಿದ್ದಾರೆ.

    ದಾರಿಯುದ್ದಕ್ಕೂ ಕಸದ ಬುಟ್ಟಿ, ಗೋಣಿಚೀಲಗಳನ್ನು ಇರಿಸಿ ಕಸ ಹಾಕಲು ವ್ಯವಸ್ಥೆ ಮಾಡಲಾಗಿದೆ. ಚಾರ್ಮಾಡಿ ಮತ್ತೂರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ಮುಂಡಾಜೆಯ ಶ್ರೀ ಸನ್ಯಾಸಿಕಟ್ಟೆ ಪರಶುರಾಮ ದೇವಸ್ಥಾನ ಸೇರಿದಂತೆ ಅಲ್ಲಲ್ಲಿ ಪಾದಯಾತ್ರಿಗಳ ತಂಡಗಳಿಗೆ ಅಡುಗೆ ತಯಾರಿ, ವಿಶ್ರಾಂತಿಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

    Dharmasthala padayathre 2
    ಚಾರ್ಮಾಡಿ ಮತ್ತೂರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಬಳಿ ತಂಡಗಳಿಂದ ಪೂರ್ವಭಾವಿ ವ್ಯವಸ್ಥೆ.

    ಅರಣ್ಯ ಇಲಾಖೆ ಘಾಟಿ ಪರಿಸರದ ರಸ್ತೆ ಬದಿ ಗಿಡಗಂಟಿ, ತ್ಯಾಜ್ಯ ತೆರವುಗೊಳಿಸಿ ಸುಗಮವಾಗಿ ಸಾಗಲು ವ್ಯವಸ್ಥೆ ಕಲ್ಪಿಸಿದೆ. ಬೆಂಕಿ ಅನಾಹುತ ಉಂಟಾಗದಂತೆ ಬೆಂಕಿ ರೇಖೆ ರಚಿಸಲಾಗಿದೆ. ಅಲ್ಲಲ್ಲಿ ಸಿಬ್ಬಂದಿಯನ್ನು ನಿಯೋಜಿಸಿ ಪಾದಯಾತ್ರಿಕರ ಸೇವೆಗೆ ತಂಡ ಸಿದ್ಧವಾಗುತ್ತಿವೆ. ಪಾದಯಾತ್ರಿಕರು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ.

    ಕಳೆದ ಹತ್ತಾರು ದಿನಗಳಿಂದ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಪಾದಯಾತ್ರೆ ಮೂಲಕ ತಂಡಗಳು ಹೊರಟಿವೆ. ಹೆಚ್ಚಿನ ಸಂಖ್ಯೆಯ ಪಾದಯಾತ್ರಿಕರು ಮಂಗಳವಾರ, ಬುಧವಾರ, ಗುರುವಾರದಂದು ಬರಲಿದ್ದಾರೆ. ಪಾದಯಾತ್ರೆ ತಂಡಗಳ ವ್ಯವಸ್ಥಾಪಕರು ಅಡುಗೆ, ಇನ್ನಿತರ ವ್ಯವಸ್ಥೆಗಳ ಬಗ್ಗೆ ಕ್ರಮ ಕೈಗೊಂಡಿದ್ದಾರೆ. ಈಗಾಗಲೇ ಕೆಲವು ತಂಡಗಳ ಪಾದಯಾತ್ರಿಕರು ಚಾರ್ಮಾಡಿ, ಮುಂಡಾಜೆ ತಲುಪಿದ್ದು, ಕೆಲ ತಂಡಗಳು ಧರ್ಮಸ್ಥಳ ತಲುಪಿವೆ. ಶುಕ್ರವಾರ ಶಿವರಾತ್ರಿ ಆಚರಣೆ ಇರುವುದರಿಂದ ಅಂದು ಶ್ರೀ ಕ್ಷೇತ್ರದಲ್ಲಿ ಹೆಚ್ಚಿನ ಭಕ್ತರು ಪಾಲ್ಗೊಳ್ಳಲಿದ್ದಾರೆ.

    ಪಾದಯಾತ್ರೆ ಮೂಲಕ ಆಗಮಿಸುವ ಭಕ್ತರಿಗೆ ಪಂಜ, ಸುಬ್ರಹ್ಮಣ್ಯ, ಬೆಳ್ತಂಗಡಿ, ಉಪ್ಪಿನಂಗಡಿ ಅರಣ್ಯ ಇಲಾಖೆ ವಲಯಗಳ ಮೂಲಕ ಕುಡಿಯುವ ನೀರು, ತಂಗಲು ತಾತ್ಕಾಲಿಕ ಶೆಡ್ ವ್ಯವಸ್ಥೆ, ಕಸ ವಿಲೇವಾರಿಗೆ ಕಸದ ಬುಟ್ಟಿಗಳನ್ನು ಹಾಕಲಾಗುವುದು ಎಂದು ಜಿಲ್ಲಾ ಡಿಸಿಎಫ್ ಅಂತೋಣಿ ಎಸ್.ಮರಿಯಪ್ಪ ತಿಳಿಸಿದ್ದಾರೆ.

    ಆರೋಗ್ಯ ಸೇವಾ ಕೌಂಟರ್

    ಉಜಿರೆ ಎಸ್‌ಡಿಎಂ ಆಸ್ಪತ್ರೆ ವತಿಯಿಂದ ಚಾರ್ಮಾಡಿ, ಮುಂಡಾಜೆ, ಉಜಿರೆ, ಉಜಿರೆ ಎಸ್‌ಡಿಎಂ ಕಾಲೇಜು ಬಳಿ, ಧರ್ಮಸ್ಥಳ ಹಾಗೂ ಬೂಡುಜಾಲು ಪ್ರದೇಶಗಳಲ್ಲಿ ಪಾದಯಾತ್ರಿಗಳ ಅನುಕೂಲಕ್ಕಾಗಿ ಉಚಿತ ಆರೋಗ್ಯ ಸೇವೆಯ ಕೌಂಟರ್ ತೆರೆಯಲಾಗಿದ್ದು, ಸಿಬ್ಬಂದಿ ನೇಮಿಸಲಾಗಿದೆ. ತುರ್ತು ಸಂದರ್ಭಕ್ಕೆ ಮೂರು ಆಂಬುಲೆನ್ಸ್‌ಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts