More

    ನಿಲ್ಲದ ಕಾಡಾನೆ ಹಾವಳಿ

    -ಸ್ವಾತಿ ಬಾಳ್ತಿಲ್ಲಾಯ ಕೊಕ್ಕಡ

    ಕಳೆದ ಕೆಲ ತಿಂಗಳಿನಿಂದ ಬೆಳ್ತಂಗಡಿ ಹಾಗೂ ಕಡಬ ತಾಲೂಕಿನ ಹಲವೆಡೆ ಆನೆಯದ್ದೇ ಸುದ್ದಿ. ಕೃಷಿಯನ್ನೇ ಜೀವನಾಧಾರವಾಗಿ ನಂಬಿಕೊಂಡಿರುವ ಕಾಡಿನಂಚಿನಲ್ಲಿರುವ ಜನರ ಕೃಷಿ ಅನಿಯಮಿತ ವಿದ್ಯುತ್ ಪೂರೈಕೆಯಿಂದ ತತ್ತರಿಸಿದರೆ, ಇನ್ನೊಂದೆಡೆ ನಿರಂತರವಾಗಿ ಕೃಷಿ ತೋಟಕ್ಕೆ ಲಗ್ಗೆ ಇಡುತ್ತಿರುವ ಆನೆಗಳಿಂದ ತತ್ತರಿಸಿದೆ.

    ಅಪರೂಪಕ್ಕೆ ಕಾಣಿಸಿಕೊಳ್ಳುತ್ತಿದ್ದ ಆನೆಗಳಿಂದು ದಿನನಿತ್ಯ ಕಾಣಿಸಿಕೊಳ್ಳಲಾರಂಭಿಸಿವೆ. ಬೆಳ್ತಂಗಡಿ ತಾಲೂಕಿನ ಪುದುವೆಟ್ಟು, ಕಳೆಂಜ, ಶಿಶಿಲ, ಶಿಬಾಜೆ, ನಿಡ್ಲೆ, ಕೊಕ್ಕಡ, ಪಟ್ರಮೆ, ಆರಿಸಿನಮಕ್ಕಿ ಹಾಗೂ ಕಡಬ ತಾಲೂಕಿನ ಕೌಕ್ರಾಡಿ, ಶಿರಾಡಿ, ಗುಂಡ್ಯ, ನೆಲ್ಯಾಡಿ, ಇಚ್ಲಂಪ್ಪಾಡಿ, ಗೋಳಿತ್ತೊಟ್ಟು, ಅಡ್ಡ ಹೊಳೆ, ಉದನೆ ಪ್ರದೇಶದ ಜನ ಆನೆಸಂಚಾರದ ಪ್ರದೇಶಗಳೆಂದೆನಿಸಿವೆ. ಈ ಹಿಂದೆ ಶಿಶಿಲದ ಪೇರಿಕೆ, ನಾಯಿಹಳ್ಳ, ಕುಮಾರಗುಡ್ಡೆ, ಸಕಲೇಶಪುರ ಅರಣ್ಯ ವ್ಯಾಪ್ತಿಯ ಕಬ್ಬಿನಾಲೆ ರಕ್ಷಿತಾರಣ್ಯ ಪ್ರದೇಶದಲ್ಲಿ ಆನೆಗಳು ಸಾಮಾನ್ಯವಾಗಿತ್ತು. ಆಗುಂಬೆಯಿಂದ ಚಾರ್ಮಾಡಿ, ನೆರಿಯದ ಮೂಲಕ ಪಂಪ್‌ಹೌಸ್ ದಾಟಿ ಮೀಯಾರು ರಕ್ಷಿತಾರಣ್ಯ ಸೇರಿ ಅಲ್ಲಿಂದ ಕಳೆಂಜ ಮಾರ್ಗವಾಗಿ ಶಿರಾಡಿ ಸೇರಿಕೊಳ್ಳುವುದು. ನಂತರ ಇದೇ ಮಾರ್ಗವಾಗಿ ಆಗುಂಬೆಗೆ ಪ್ರಯಾಣಿಸುವ ಪ್ರಕ್ರಿಯೆ ಇತ್ತು. ಆದರೀಗ ಬರುವ ಪ್ರಕ್ರಿಯೆ ಇದೆಯೇ ವಿನಾಃ ಮರಳಿ ಹೋಗುವ ಪ್ರಕ್ರಿಯೆ ಆಗುತ್ತಿಲ್ಲ.

    ಆನೆ ಪಥ ಬದಲಾಯಿತೇ?

    ವರ್ಷಗಳಿಗೊಮ್ಮೆ ಅಲ್ಲಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಒಂದೆರಡು ಆನೆಗಳು ಕಳೆದೊಂದು ವರ್ಷಗಳಿಂದ ತಿಂಗಳುಗಟ್ಟಲೆ ಗ್ರಾಮಗಳಲ್ಲಿ ಬೀಡು ಬಿಡುವಂತಾಗಿದೆ. ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಡೆಯುತ್ತಿರುವ ಚತುಷ್ಪಥ ಕಾಮಗಾರಿಯಿಂದ ಆನೆಗಳು ತಮ್ಮ ಪಥವನ್ನು ಬದಲಿಸಿಕೊಂಡಂತಾಗಿದೆ. ತಾವು ಅರಸಿಕೊಂಡು ಬರುತ್ತಿದ್ದಂತಹ ಕಾಡುಗಳು ನಶಿಸಿ ರಸ್ತೆಗಳಾಗಿವೆ. ರಾ.ಹೆ.75ರ ಗುಂಡ್ಯ, ಅಡ್ಡಹೊಳೆ, ಶಿರಾಡಿ ಭಾಗದಲ್ಲಿ ಚತುಷ್ಪಥ ಕಾಮಗಾರಿ 2 ವರ್ಷ ಹಿಂದೆ ಆರಂಭಗೊಂಡಿದ್ದು, ಕಾಮಗಾರಿ ಆಮೆಗತಿಯಲ್ಲಿದೆ. ಬೃಹತ್ ಯಂತ್ರಗಳ ಸದ್ದು ಆನೆಗಳು ದಿಕ್ಕೆಡುವಂತೆ ಮಾಡುತ್ತಿವೆ. ಹೆದ್ದಾರಿ ಇಕ್ಕೆಲಗಳಲ್ಲಿ ಮಣ್ಣು ಕುಸಿಯದಂತೆ ನಿರ್ಮಿಸಿರುವ ತಡೆಗೋಡೆಗಳು ಆನೆಗಳು ಈ ಹಿಂದೆ ಸಂಚರಿಸುತ್ತಿದ್ದ ಪಥವನ್ನೇ ಬದಲಿಸಿವೆ. ಕೆಲವು ಕಡೆ ಮೋರಿ ಸಹಿತ ಕಿರು ಸೇತುವೆಗಳ ನಿರ್ಮಾಣದಿಂದಾಗಿ ಆನೆಗಳು ಹೊಳೆಯ ಮೂಲಕ ಹಾದು ಹೋಗುತ್ತಿದ್ದ ಪಥ ಕಾಂಕ್ರೀಟ್‌ಮಯವಾಗಿ ಆನೆಗಳು ಭಯಗೊಂಡು ಕಕ್ಕಾಬಿಕ್ಕಿಯಾಗಿ ಓಡಲಾರಂಭಿಸಿವೆ.

    ಕೇರಳ ಮಾದರಿ ಸೋಲಾರ್ ಫೆನ್ಸಿಂಗ್

    ಪುದುವೆಟ್ಟು ಗ್ರಾಮದ ಉರೆಲ್ ಕೋಡಿಯಿಂದ ಕರಂಬಾರುವರೆಗಿನ 1 ಕಿ.ಮೀ. ಕಾಡಂಚಿನ ಜಾಗಕ್ಕೆ ಕೇರಳ ಮಾದರಿಯ ಸೋಲಾರ್ ಹ್ಯಾಂಗಿಂಗ್ ಫೆನ್ಸಿಂಗ್ ಅಳವಡಿಸುವ ಕಾರ್ಯ ನಡೆದಿದ್ದು, ಉತ್ತಮ ಫಲಿತಾಂಶ ದೊರೆತಿದೆ. ಆನೆ ಕಂದಕ ನಿರ್ಮಿಸಲು ಆಗದ ಜಾಗದಲ್ಲಿ ಈ ಫೆನ್ಸಿಂಗ್ ಪರಿಣಾಮಕಾರಿಯಾಗಿದೆ. ಆನೆಗಳ ಸಂಚಾರ ತಡೆಗಟ್ಟುವ ಆನೆ ಕಂದಕ ನಿಷ್ಟ್ರಯೋಜಕವಾಗುತ್ತಿವೆ. ಮುಚ್ಚಿ ಹೋಗಿರುವ ಹಳೆಯ ಕಂದಕಗಳ ಮೂಲಕ ಅವು ಸರಾಗವಾಗಿ ಬರುತ್ತಿವೆ. ಕಂದಕಗಳನ್ನು ಸಂಪೂರ್ಣ ನಿರ್ವಹಣೆ ಮಾಡಿ ಬಳಿಕ ಅಗತ್ಯವಿರುವ ಜಾಗಗಳಿಗೆ ಆನೆ ಕಂದಕ ರಚಿಸಬೇಕು.

    ಇನ್ನೆಷ್ಟು ಬಲಿ ಬೇಕು?

    2022ರ ಡಿಸೆಂಬರ್‌ನಲ್ಲಿ ಶಿರಾಡಿ ಗ್ರಾಮದ ಕುನ್ನತ್ ನಿವಾಸಿ ರಾಜೇಶ್ ಎಂಬುವರ ತೋಟದಲ್ಲಿರುವ ಪಂಪ್ ಸ್ವಿಚ್ ಹಾಕಲು ಹೋದ ಕೆಲಸದಾಳು ತಿಮ್ಮ ಮತ್ತು ಅವನ ಮಗನ ಮೇಲೆ ಆನೆ ದಾಳಿ ನಡೆಸಿದಾಗ ತಿಮ್ಮ ಸ್ಥಳದಲ್ಲೇ ಮೃತಪಟ್ಟರೆ ತಿಮ್ಮನ ಮಗ ಪ್ರಾಣಪಾಯದಿಂದ ಪಾರಾಗಿದ್ದರು. 2023ರ ಫೆಬ್ರವರಿಯಲ್ಲಿ ಡೇರಿಯಲ್ಲಿ ಕೆಲಸಕ್ಕಿದ್ದ ರಂಜಿತಾ ಬೆಳಗಿನ ಸಮಯ ಕರ್ತವ್ಯ ನಿರ್ವಹಿಸಲು ತೆರಳಿದಾಗ ದಾರಿ ಮಧ್ಯೆ ಆನೆ ದಾಳಿ ನಡೆಸಿ ಆಕೆಯನ್ನು ಬಲಿ ಪಡೆದಿತ್ತು. ಸಹಾಯಕ್ಕೆ ತೆರಳಿದ ರಮೇಶ್ ರೈ ಕೂಡ ಆನೆಗೆ ಆಹುತಿಯಾದರು. 2023ರ ಆಗಸ್ಟ್‌ನಲ್ಲಿ ಐತ್ತೂರು ಗ್ರಾಮದ ಚೋಮ ಎಂಬುವರು ಕೆಲಸಕ್ಕೆ ತೆರಳಿದಾಗ ಆನೆ ದಾಳಿ ನಡೆಸಿ ಗಂಭೀರ ಗಾಯಗೊಂಡು ವಾರದ ಬಳಿಕ ಪ್ರಾಣತೆತ್ತಿದ್ದರು. ಶಿರಾಡಿ ಗ್ರಾಮದ ಶಿರ್ವತಡ್ಕ ಮತ್ತು ಪುತ್ತಂಬರ ಪ್ರದೇಶದಲ್ಲಿ ಕಳೆದ ಹತ್ತು ದಿನಗಳಿಂದ ನಿರಂತರವಾಗಿ ಆರಕ್ಕಿಂತಲೂ ಹೆಚ್ಚು ಆನೆ ದಾಳಿ ನಡೆಸುತ್ತಿದ್ದು, ಈ ಭಾಗದ ಜನರ ಕೃಷಿ ಸಂಪೂರ್ಣ ನಾಶಗೊಂಡಿದ್ದು ಜೀವ ಭಯದಲ್ಲಿ ಜನರು ಬದುಕುತ್ತಿದ್ದಾರೆ.

    ಕಾಡಿನ ಮಧ್ಯೆ ಅರಣ್ಯ ಇಲಾಖೆಯು ಬೆತ್ತ, ಅಕೇಶಿಯ, ತೇಗದ ಮರಗಳನ್ನು ನೆಡುವ ಬದಲು ಆಲದ ಮರ, ಈಚಲು ಮರದಂತಹ ಪ್ರಾಣಿಗಳಿಗೆ ಸಿಗುವ ಆಹಾರದ ಗಿಡಗಳನ್ನು ನೆಟ್ಟಾಗ ಪ್ರಾಣಿಗಳು ಕಾಡಂಚಿಗೆ ಬರುವುದು ತಪ್ಪಬಹುದು. ಕೃಷಿಯನ್ನು ಕಳೆದುಕೊಂಡು ಜೀವಭಯದಲ್ಲಿರುವ ನಮಗೆ ಸೂಕ್ತ ಪರಿಹಾರ ಕಾರ್ಯಗಳೂ ಸಿಗುತ್ತಿಲ್ಲ.
    -ಮನೋಜ್ ಕುನ್ನತ್, ಕೃಷಿಕ ಶಿರಾಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts