More

    ಕೊಂಡಾಣ ಭಂಡಾರದ ಮನೆ ದ್ವಂಸ, ಕ್ರಮಕ್ಕೆ ಆಗ್ರಹ: ಸ್ಪೀಕರ್ ಖಾದರ್ ವಿರುದ್ಧವೂ ಆರೋಪ

    ವಿಜಯವಾಣಿ ಸುದ್ದಿಜಾಲ ಉಳ್ಳಾಲ

    ಶ್ರೀ ಪಿಲಿಚಾಮುಂಡಿ, ಬಂಟ, ವೈದ್ಯನಾಥ ಪರಿವಾರ ದೈವಗಳ ಕ್ಷೇತ್ರಕ್ಕೆ ತಾಗಿಕೊಂಡು ನಿರ್ಮಾಣ ಹಂತದಲ್ಲಿದ್ದ ಭಂಡಾರದ ಮನೆಯನ್ನು ಕೆಡವಿದ ಪ್ರಕರಣ ಖಂಡಿಸಿ ಸೋಮವಾರ ಭಕ್ತರು, ಬಿಜೆಪಿ ಮುಖಂಡರು ಕೋಟೆಕಾರು ಪಟ್ಟಣ ಪಂಚಾಯಿತಿ ಮುಂಭಾಗ ಪ್ರತಿಭಟನಾ ಸಭೆ ನಡೆಸಿ, ಭಂಡಾರದ ಮನೆ ಮರು ನಿರ್ಮಾಣಕ್ಕೆ ಆಗ್ರಹಿಸಿದರು. ಕಟ್ಟಡ ಧ್ವಂಸ ಮಾಡಿದ ಗುರಿಕಾರ ಮುತ್ತಣ್ಣ ಶೆಟ್ಟಿ ಮತ್ತು ತಂಡದ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಕಟ್ಟಡ, ಚಿನ್ನಾಭರಣ, ಹಣಕಾಸಿನ ಸಂರಕ್ಷಣೆಗೆ ಜಿಲ್ಲಾಧಿಕಾರಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

    ಆರೋಪಿಗಳ ಮೇಲೆ ಬಲವಾದ ಪ್ರಕರಣ ದಾಖಲಿಸದ ಕಾರಣ ಅವರು ಅರ್ಧ ದಿನದಲ್ಲೇ ಜಾಮೀನು ಪಡೆದು ಹೊರಬಂದಿದ್ದಾರೆ, ಇದಕ್ಕೆ ಕ್ಷೇತ್ರದ ಶಾಸಕರ ಬೆಂಬಲವೂ ಕಾರಣ ಎಂದು ಪ್ರತಿಭಟನೆಯಲ್ಲಿ ಮುಖಂಡರು ನೇರವಾಗಿ ಆರೋಪಿಸಿದರು.

    ರಾಧಾಕೃಷ್ಣ ಅಡ್ಯಂತಾಯ ಮಾತನಾಡಿ, ಕೆ.ಜಿ.ಹಳ್ಳಿ, ಡಿ.ಜಿ.ಹಳ್ಳಿ ಗಲಭೆಕೋರರು ಅಮಾಯಕರು ಎಂದ ಶಾಸಕರ ಸಮುದಾಯದವರೇ ಇಲ್ಲಿ ಶಾಸಕರಾಗಿದ್ದಾರೆ. ಅವರ ಬಗ್ಗೆ ನಾವು ಹಿಂದಿನಿಂದಲೂ ಹೇಳಿಕೊಂಡು ಬಂದಿದ್ದು ಯಾರೂ ನಂಬಲಿಲ್ಲ. ಭಂಡಾರದ ಮನೆ ಒಡೆದವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವ ಸ್ವಾತಂತ್ರೃವೂ ಪೊಲೀಸರಿಗೆ ಇಲ್ಲ ಎಂದಾದರೆ ಇದರ ಹಿಂದೆ ಇಲ್ಲಿನ ಶಾಸಕರ ರಾಜಕೀಯ ಬೆಂಬಲ ಇದೆ ಎಂದು ಆರೋಪಿಸಿದರು.

    ವಕೀಲ ಜಗದೀಶ ಶೇಣವ ಮಾತನಾಡಿ, ಕೋಟೆಕಾರ್ ಪಟ್ಟಣ ಪಂಚಾಯಿತಿಯ ಸಭಾಭವನ ಒಡೆದು ಹಾಕಿದರೆ ಏನೆಲ್ಲ ಸೆಕ್ಷನ್ ಹಾಕಿ ಜೈಲಿನಲ್ಲಿರುವಂತೆ ಮಾಡುತ್ತಿದ್ದೀರಿ. ಸೆಗಣಿ ಹೊಡೆದಿದ್ದಕ್ಕೆ ಕೊಲೆ ಯತ್ನ ಕೇಸು ಹಾಕಿ ಜೈಲಿಗೆ ಅಟ್ಟುತ್ತಾರೆ. ಕೊಂಡಾಣ ಭಂಡಾರದ ಮನೆಯ ಕಟ್ಟಡ ಸರ್ಕಾರದ್ದೇ ಆಗಿದೆ. ಆದರೆ ಕಟ್ಟಡ ಒಡೆದವರ ಮೇಲೆ ಇನ್ನೂ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

    ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಕೃಷ್ಣ ಶೆಟ್ಟಿ ತಾಮಾರ್, ಬಿಜೆಪಿ ಮಂಗಳೂರು ಮಂಡಲ ಅಧ್ಯಕ್ಷ ಜಗದೀಶ್ ಆಳ್ವ ಕೂವೆತ್ತಬೈಲ್, ಮುಖಂಡರಾದ ಜಿತೇಂದ್ರ ಶೆಟ್ಟಿ ತಲಪಾಡಿಗುತ್ತು, ರಾಧಾಕೃಷ್ಣ ಅಡ್ಯಂತಾಯ, ಅಲೆಮಾರಿ-ಅರೆ ಅಲೆಮಾರಿ ನಿಗಮದ ಮಾಜಿ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಕೋಟೆಕಾರ್ ಪಟ್ಟಣ ಪಂಚಾಯಿತಿ ಸದಸ್ಯ ಹರೀಶ್ ರಾವ್, ಪ್ರಮುಖರಾದ ಸುರೇಶ್ ಆಳ್ವ ಸಾಂತ್ಯಗುತ್ತು ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಅರ್ಜುನ್ ಮಾಡೂರು ಸ್ವಾಗತಿಸಿದರು.

    ಹಿಂದಿನಿಂದಲೂ ಕ್ಷೇತ್ರದಲ್ಲಿ ಅವ್ಯವಹಾರ ನಡೆಯುತ್ತಿದ್ದು ಕ್ಷೇತ್ರದ ಹೆಸರಲ್ಲಿ ಎರಡು ಬ್ಯಾಂಕ್ ಖಾತೆಗಳಿದ್ದು ಧಾರ್ಮಿಕ ದತ್ತಿ ಇಲಾಖೆಗೆ ಒಂದು ಖಾತೆಯ ಲೆಕ್ಕ ತೋರಿಸಲಾಗುತ್ತಿದೆ. ನಮ್ಮ ಅವಧಿಯಲ್ಲಿ ಎರಡು ಕೋಟಿ ರೂ. ವೆಚ್ಚದಲ್ಲಿ 23 ಅಭಿವೃದ್ಧಿ ಕೆಲಸಗಳು ನಡೆದಿವೆ. ಆದರೆ ಭಂಡಾರ ಮನೆ ಕ್ಷೇತ್ರದ ಹೆಸರಲ್ಲಿಲ್ಲದ ಕಾರಣ ಹಲವು ಬಾರಿ ಸಂಬಂಧಪಟ್ಟವರಿಗೆ ಮಾಡಿದ ಮನವಿ, ನೀಡಿದ ಪತ್ರಗಳಿಂದ ಪ್ರಯೋಜನ ಆಗಿರಲಿಲ್ಲ. ಭಂಡಾರ ಮನೆಗೆ ವ್ಯವಸ್ಥಾಪನಾ ಸಮಿತಿ ಹಾಕಿದ ಬೀಗ ಒಡೆದವರೇ ಈಗ 30 ಲಕ್ಷ ರೂ. ಖರ್ಚಿನಲ್ಲಾದ ಕಟ್ಟಡ ಒಡೆದಿದ್ದಾರೆ.

    -ಕೃಷ್ಣ ಶೆಟ್ಟಿ ತಾಮಾರ್
    ಕೊಂಡಾಣ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts