More

    ವೆಟ್‌ವೆಲ್ ಸ್ಥಾವರಕ್ಕೆ ಅಪಾಯ: ಕೆತ್ತಿಕಲ್‌ನಲ್ಲಿ ಗುಡ್ಡ ಕೊರೆದು ಹೆದ್ದಾರಿಗೆ ಮಣ್ಣು ಪೂರೈಕೆ

    ಧನಂಜಯ ಗುರುಪುರ

    ಮಂಗಳೂರು-ಸೋಲಾಪುರ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಚತುಷ್ಪಥ ಕಾಮಗಾರಿ ಮುಂದುವರಿದಿರುವ ಕೆತ್ತಿಕಲ್ ಬಳಿ ಗುಡ್ಡದ ಮೇಲ್ಗಡೆ ಭಾರಿ ಪ್ರಮಾಣದಲ್ಲಿ ಮಣ್ಣು ಕೊರೆಯಲಾಗಿದ್ದು, ಗುಡ್ಡದ ಮೇಲ್ಭಾಗದಲ್ಲಿ ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಕುಡ್ಸೆಂಪ್‌ನ ವೆಟ್‌ವೆಲ್ ಸ್ಥಾವರಕ್ಕೆ ತೀವ್ರ ಅಪಾಯ ಎದುರಾಗಿದೆ.

    ಕೆತ್ತಿಕಲ್ ಬಳಿ ಹೆದ್ದಾರಿ ಎತ್ತರೀಕರಿಸಲು ಪಕ್ಕದ ಗುಡ್ಡ ಕೊರೆದು ಮಣ್ಣು ತುಂಬಿಸಲಾಗುತ್ತಿದೆ. ಮಣ್ಣು ತೆಗೆಯಲಾದ ಗುಡ್ಡದ ಇಳಿಜಾರು ಪ್ರದೇಶದ ಮೇಲ್ಗಡೆ ತಿರುವೈಲು ವಾರ್ಡ್ ವ್ಯಾಪ್ತಿಯ ಅಮೃತನಗರ ವಸತಿ ಬಡಾವಣೆ ಇದೆ. ಪ್ರಸಕ್ತ ಇಲ್ಲಿ ಸುಮಾರು 250 ಮನೆಗಳಿದ್ದು, ಬಡಾವಣೆಗೆ ಅನುಕೂಲವಾಗುವಂತೆ ಕರ್ನಾಟಕ ನಗರಾಭಿವೃದ್ಧಿ ಮತ್ತು ಕರಾವಳಿ ಪರಿಸರ ನಿರ್ವಹಣಾ ಯೋಜನೆ(ಕುಡ್ಸೆಂಪ್) ಕೋಟ್ಯಂತರ ರೂ. ವೆಚ್ಚದಲ್ಲಿ ವೆಟ್‌ವೆಲ್ ಸ್ಥಾವರ ನಿರ್ಮಿಸುತ್ತಿದೆ. ಅಮೃತನಗರದಲ್ಲಿ ಕೊಳವೆ ಅಳವಡಿಸುವ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಇಲ್ಲೇ ಕೆಳಭಾಗದಲ್ಲಿ ಹೆದ್ದಾರಿಗೆ ತುಂಬಿಸಲು ಗುಡ್ಡದ ಮಣ್ಣು ಕೊರೆಯಲಾಗಿದೆ. ಇದರಿಂದ ಮಳೆಗಾಲದಲ್ಲಿ ವೆಟ್‌ವೆಲ್‌ಗೆ ಅಪಾಯ ಸಾಧ್ಯತೆ ಇದೆ.

    ವೆಟ್‌ವೆಲ್‌ಗಿಂತ 50 ಮೀಟರ್ ಅಂತರದಲ್ಲಿ ಗುಡ್ಡದ ಮಣ್ಣು ತೆಗೆಯುವಂತಿಲ್ಲ ಎಂದು ಕುಡ್ಸೆಂಪ್ ಅಧಿಕಾರಿಗಳು ಖಾಸಗಿ ಜಾಗದ ಮಾಲೀಕರು ಮತ್ತು ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ಗುತ್ತಿಗೆ ಕಂಪನಿ ಡಿಬಿಎಲ್‌ಗೆ ಸೂಚಿಸಿದೆ. ಆದರೂ ಗುತ್ತಿಗೆ ತೆಗೆದುಕೊಮಡ ಕಂಪನಿ ವೆಟ್‌ವೆಲ್ ಪಕ್ಕದವರೆಗೆ ಸಾಕಷ್ಟು ಪ್ರಮಾಣದಲ್ಲಿ ಮಣ್ಣು ತೆಗೆದಿದೆ. ಇದರಿಂದ ಮೇಲ್ನೋಟಕ್ಕೆ ಕುಡ್ಸೆಂಪ್ ನಿಯಮ ಉಲ್ಲಂಘನೆಯಾದಂತೆ ಕಂಡುಬಂದಿದೆ ಎಂಬುದು ಸ್ಥಳೀಯರ ಆರೋಪ.

    ಭವಿಷ್ಯದಲ್ಲಿ 750 ಮನೆಗಳಿಗೆ ಪ್ರಯೋಜನ

    ಕರ್ನಾಟಕ ನಗರಾಭಿವೃದ್ಧಿ ಮತ್ತು ಕರಾವಳಿ ಪರಿಸರ ನಿರ್ವಹಣಾ ಯೋಜನೆ(ಕುಡ್ಸೆಂಪ್) ಮನಪಾ ತಿರುವೈಲ್ ವಾರ್ಡ್ ವ್ಯಾಪ್ತಿಯ ಅಮೃತನಗರ ವಸತಿ ಬಡಾವಣೆಗೆ ಮುಂದಿನ 30 ವರ್ಷಗಳ ಅವಧಿಗಾಗಿ ರೂಪಿಸಿರುವ ಯೋಜನೆ ಇದಾಗಿದೆ. ಈ ಬಡಾವಣೆಯಲ್ಲಿ 250 ಮನೆಗಳಿದ್ದು, ಭವಿಷ್ಯದಲ್ಲಿ ಹೆಚ್ಚುವರಿ 500 ಮನೆಗಳ ಸಹಿತ ಒಟ್ಟು 750 ಮನೆಗಳಿಗೆ ಈ ಯೋಜನೆಯಿಂದ ಪ್ರಯೋಜನವಾಗಲಿದೆ. ಇದು 10 ಕೋಟಿ ರೂ. ವೆಚ್ಚದ ಯೋಜನೆ. ಯೋಜನೆಗಾಗಿ ಕೆತ್ತಿಕಲ್ ಗುಡ್ಡದ ಮೇಲ್ಗಡೆ ವೆಟ್‌ವೆಲ್ ನಿರ್ಮಿಸಲಾಗುತ್ತಿದೆ. ಸದ್ಯ ಇಲ್ಲಿರುವ ಮನೆಗಳಿಂದ ದಿನಕ್ಕೆ 2 ಲಕ್ಷ ಲೀಟರ್ ಕೊಳಚೆ ನೀರು ಸಂಗ್ರಹದ ಗುರಿ ಹೊಂದಲಾಗಿದ್ದು, ಇಲ್ಲಿಂದ ಪಚ್ಚನಾಡಿ ಎಸ್‌ಟಿಪಿಗೆ ನೀರು ಪಂಪಿಂಗ್ ಆಗಲಿದೆ. ಅಲ್ಲಿಂದ ಶುದ್ಧೀಕರಣಗೊಂಡು ಪಿಲಿಕುಳ ನಿಸರ್ಗಧಾಮ ಪ್ರಾಧಿಕಾರಕ್ಕೆ ಪೂರೈಕೆಯಾಗಲಿದೆ.

    ಹಿಂದೆ ವಿಶಾಲವಾದ ಜಾಗದಲ್ಲಿ ವೆಟ್‌ವೆಲ್ ಕಾಮಗಾರಿ ಆರಂಭಗೊಂಡಿತ್ತು. ಹೆದ್ದಾರಿ ಪಕ್ಕದ ಗುಡ್ಡದಿಂದ ಭಾರಿ ಪ್ರಮಾಣದ ಮಣ್ಣು ತೆಗೆದಿರುವುದರಿಂದ ಸದ್ಯ ವೆಟ್‌ವೆಲ್ ಗುಡ್ಡದ ಅಂಚಿಗೆ ಬಂದಿದೆ. ಸ್ಥಳೀಯ ವ್ಯಕ್ತಿಗೆ ಸೇರಿರುವ ಈ ಗುಡ್ಡದಿಂದ ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ಗುತ್ತಿಗೆ ಕಂಪನಿ ಮಣ್ಣು ಪಡೆದುಕೊಂಡಿದೆ ಎನ್ನಲಾಗುತ್ತಿದೆ. ಕೆಂಪು ಮತ್ತು ಜೇಡಿ ಮಣ್ಣಿನಿಂದ ಕೂಡಿರುವ ಈ ಗುಡ್ಡ ಪ್ರದೇಶದಲ್ಲಿ ಮಳೆಗಾಲದಲ್ಲಿ ನಿರಂತರ ನೀರಿನ ಒರತೆ ಇದೆ. ವೆಟ್‌ವೆಲ್ ನಿರ್ಮಾಣಗೊಳ್ಳುತ್ತಿರುವ ಪ್ರದೇಶ ಇಳಿಜಾರಾಗಿದ್ದು, ಅಮೃತನಗರದ ನೀರು ವೆಟ್‌ವೆಲ್ ಪಕ್ಕದಲ್ಲಿ ಹೆದ್ದಾರಿಗೆ ಇಳಿಯುವ ಸಾಧ್ಯತೆ ಹೆಚ್ಚಿದೆ. ವೆಟ್‌ವೆಲ್‌ಗೆ ತಡೆಗೋಡೆ ನಿರ್ಮಿಸುವ ಅಗತ್ಯವಿದೆ. ಇಲ್ಲವಾದಲ್ಲಿ ಕೋಟ್ಯಂತರ ರೂ. ವೆಚ್ಚದ ಈ ಯೋಜನೆ ಸಂಪೂರ್ಣ ವ್ಯರ್ಥವಾಗಲಿದೆ.

    -ಲಕ್ಷ್ಮಣ್ ಶೆಟ್ಟಿಗಾರ
    ಅಮೃತನಗರ ಪೌರ ಸಮಿತಿ ಅಧ್ಯಕ್ಷ

    ವೆಟ್‌ವೆಲ್ ಕಾಮಗಾರಿ ಬಹುತೇಕ ಮುಗಿದಿದ್ದು, ಮೂರ‌್ನಾಲ್ಕು ತಿಂಗಳೊಳಗೆ ಕಾರ್ಯನಿರ್ವಹಿಸಲಿದೆ. ಇಲ್ಲೇ ಪಕ್ಕದಲ್ಲಿ ಗುಡ್ಡದ ಮಣ್ಣು ಕೊರೆಯಲಾಗಿದೆ. ಇದರಿಂದ ಮಳೆಗಾಲದಲ್ಲಿ ವೆಟ್‌ವೆಲ್ ಕುಸಿಯುವ ಭೀತಿ ಇದೆ. ಈ ಬಗ್ಗೆ ಕುಡ್ಸೆಂಪ್ ಇಲಾಖೆಯಿಂದ ಕಂಪನಿ ಅಧಿಕಾರಿಗಳು ಮತ್ತು ಮಣ್ಣು ನೀಡಿರುವ ಗುಡ್ಡದ ಮಾಲೀಕರೊಂದಿಗೆ ಮಾತುಕತೆ ನಡೆಸಲಾಗಿದೆ. 50 ಮೀಟರ್ ಅಂತರದಲ್ಲಿ ಮಣ್ಣು ತೆಗೆಯುವಂತಿಲ್ಲ. ನಿಯಮ ಉಲ್ಲಂಘನೆಯಾದಲ್ಲಿ ಖಾಸಗಿ ವ್ಯಕ್ತಿಯೇ ವೆಟ್‌ವೆಲ್ ಭಾಗದಲ್ಲಿ ಗುಡ್ಡಕ್ಕೆ ಹೊಂದಿಕೊಂಡಂತೆ ರಕ್ಷಣಾ ಗೋಡೆ ನಿರ್ಮಿಸಬೇಕು. ಈ ಬಗ್ಗೆ ಮನಪಾ ಆಯುಕ್ತರಿಗೆ ಪತ್ರ ಬರೆಯಲಾಗುವುದು.

    -ಜಯಪ್ರಕಾಶ್
    ಕುಡ್ಸೆಂಪ್ ಡಿಸೈನ್ ಇಂಜಿನಿಯರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts