More

    ಕಡಲೂರಲ್ಲಿ ಬಿಜೆಪಿ ಸವಾಲಿಗೆ ಕೈ ಸಜ್ಜು

    ದಕ್ಷಿಣ ಕನ್ನಡ ಕ್ಷೇತ್ರದ ಬಿಜೆಪಿ ಸಂಭಾವ್ಯ ಅಭ್ಯರ್ಥಿಯಾಗಿ ಹಾಲಿ ಸಂಸದರ ಹೆಸರೇ ಮುಂಚೂಣಿಯಲ್ಲಿದ್ದರೂ ಅವರ ಬಗ್ಗೆ ಅಸಮಾಧಾನ ಜೋರಾಗಿದೆ. ಒಂದೊಮ್ಮೆ ಟಿಕೆಟ್ ಸಿಗದಿದ್ದರೆ ಕ್ಯಾ.ಬೃಜೇಶ್ ಚೌಟ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಕಾಂಗ್ರೆಸ್​ನಿಂದ ವಿನಯಕುಮಾರ್ ಸೊರಕೆ ಮತ್ತು ಕೆಪಿಸಿಸಿ ಕಾರ್ಯದರ್ಶಿ ಆರ್.ಪದ್ಮರಾಜ್ ಹೆಸರು ಕೆಪಿಸಿಸಿಗೆ ರವಾನೆಯಾಗಿದೆ.

    | ಪಿ .ಬಿ.ಹರೀಶ್​ರೈ, ಮಂಗಳೂರು

    ಬಿಜೆಪಿಯ ಶಕ್ತಿಕೇಂದ್ರ ಎಂದೇ ಬಿಂಬಿತವಾಗಿರುವ ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಮೂರು ದಶಕದಿಂದ ಕಮಲ ಪಡೆಯ ಪಾರಮ್ಯ ಮುರಿಯಲು ಕಾಂಗ್ರೆಸ್​ಗೆ ಸಾಧ್ಯವಾಗಿಲ್ಲ. ಸತತ 8 ಬಾರಿ ಜಯ ದಾಖಲಿಸಿರುವ ಬಿಜೆಪಿ, ಮತ್ತೆ ಪ್ರಧಾನಿ ಮೋದಿ ಅಲೆಯಿಂದ ನಿರಾಯಾಸ ಗೆಲುವಿನ ನಿರೀಕ್ಷೆಯಲ್ಲಿದೆ. ಬಿಜೆಪಿಯ ನಾಗಾಲೋಟ ತಡೆಯಲು ಕಾಂಗ್ರೆಸ್ ಸಜ್ಜಾಗುತ್ತಿದ್ದರೂ, ದಾರಿ ಇನ್ನೂ ದೂರವಿದೆ.

    ಪೂರ್ಣವಾಗಿ ದ.ಕ.ಜಿಲ್ಲೆಯ ವ್ಯಾಪ್ತಿ ಒಂದು ಲೋಕಸಭಾ ಕ್ಷೇತ್ರವಾಗಿರುವುದು ಕ್ಷೇತ್ರದ ವಿಶೇಷತೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಇತರ ಜಿಲ್ಲೆಗಳಲ್ಲಿ ಕಾಂಗ್ರೆಸ್​ನ ಗ್ಯಾರಂಟಿ ಪರಿಣಾಮ ಬೀರಿದರೆ, ಕರಾವಳಿಯಲ್ಲಿ ಮಾತ್ರ ಹಿಂದುತ್ವ ವಿಜೃಂಭಿಸಿತ್ತು. ಜಿಲ್ಲೆಯ 6 ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿದರೆ, 2 ಕ್ಷೇತ್ರ ಕಾಂಗ್ರೆಸ್ ಪಾಲಾಗಿತ್ತು.

    ಪೂಜಾರಿ, ಮೊಯ್ಲಿ ಸೋಲು: 1957ರ ಚುನಾವಣೆಯಲ್ಲಿ ಕೊಡಗು ಜಿಲ್ಲೆ ಒಳಗೊಂಡ ಮಂಗಳೂರು ಕ್ಷೇತ್ರ ರಚನೆಯಾಗಿತ್ತು. ಆ ಬಳಿಕ ನಡೆದ 8 ಚುನಾವಣೆಯಲ್ಲಿ ಕಾಂಗ್ರೆಸ್​ನದ್ದೇ ಪಾರಮ್ಯ. 90ರ ದಶಕದಲ್ಲಿ ಅಯೋಧ್ಯೆಯ ರಾಮಮಂದಿರ ಹೋರಾಟ ಆರಂಭವಾದ ಬಳಿಕ ಕರಾವಳಿಯ ರಾಜಕೀಯ ಚಿತ್ರಣ ಬದಲಾಯಿತು. 1991ರ ಚುನಾವಣೆಯಲ್ಲಿ ಮೊದಲ ಬಾರಿಗೆ ಬಿಜೆಪಿ ಕ್ಷೇತ್ರಕ್ಕೆ ಲಗ್ಗೆ ಇರಿಸಿತು. ಬಳಿಕ ಕಾಂಗ್ರೆಸ್​ನಿಂದ ಹಿರಿಯ ನಾಯಕ ಜನಾರ್ದನ ಪೂಜಾರಿ 5 ಬಾರಿ, ಮಾಜಿ ಸಿಎಂ ವೀರಪ್ಪ ಮೊಯ್ಲಿ 2 ಬಾರಿ ಸ್ಪರ್ಧಿಸಿದರೂ ಗೆಲುವು ಕಾಣಲಿಲ್ಲ. 2009ರಲ್ಲಿ ಕ್ಷೇತ್ರ ಮರು ವಿಂಗಡಣೆಯಾಗಿ ದ.ಕ.ಕ್ಷೇತ್ರ ರಚನೆಯಾದರೂ ಬಿಜೆಪಿಯ ಚೈತ್ರಯಾತ್ರೆ ಮುಂದುವರಿದಿದೆ.

    ಪ್ರಭಾವ ಬೀರುವ ಅಂಶಗಳು: ಕರಾವಳಿಯಲ್ಲಿ ಬಿಜೆಪಿಗೆ ಹಿಂದುತ್ವವೇ ಪ್ರಮುಖ ಅಜೆಂಡಾ. ನರೇಂದ್ರ ಮೋದಿ ಅಲೆ, ರಾಮಮಂದಿರ ನಿರ್ಮಾಣ ಪಕ್ಷಕ್ಕೆ ವರದಾನ. ಸಿದ್ದರಾಮಯ್ಯ ಸರ್ಕಾರದ ಗ್ಯಾರಂಟಿ ಯೋಜನೆ ಕಾಂಗ್ರೆಸ್​ನ ಪ್ರಮುಖ ಅಸ್ತ್ರ. ಕೋಮು ಸೌಹಾರ್ದ ವಿಚಾರ ಮುಂದಿಟ್ಟು, ಅಲ್ಪಸಂಖ್ಯಾತರ ಮತಗಳನ್ನು ಗರಿಷ್ಠ ಪ್ರಮಾಣದಲ್ಲಿ ಸೆಳೆಯಲು ಕಾಂಗ್ರೆಸ್ ತಂತ್ರ ನಡೆಸಲಿದೆ.

    ಕಟೀಲ್ ವರ್ಸಸ್ ಚೌಟ: ನಳಿನ್ ಕುಮಾರ್ ಕಟೀಲ್ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಜಯ ಸಾಧಿಸಿದವರು. ಬಿಜೆಪಿಯ ನಿಕಟಪೂರ್ವ ರಾಜ್ಯಾಧ್ಯಕ್ಷರಾದ ಕಾರಣ ಸಂಭಾವ್ಯ ಅಭ್ಯರ್ಥಿಯಾಗಿ ಹೆಸರು ಮುಂಚೂಣಿಯಲ್ಲಿದೆ. ಆದರೆ, ರಾಜ್ಯದ ಬಹುತೇಕ ಕ್ಷೇತ್ರಗಳಲ್ಲಿ ಸಂಸದರ ಬಗ್ಗೆ ಇರುವ ಅಸಮಾಧಾನ ದ.ಕ.ಕ್ಷೇತ್ರದಲ್ಲೂ ಜೋರಾಗಿದೆ. ಅಭ್ಯರ್ಥಿ ಬದಲಾಗಲೇಬೇಕೆಂಬುದು ಪಕ್ಷದ ಒಂದು ವಲಯದ ಪ್ರಬಲ ಬೇಡಿಕೆ. ಒಂದೊಮ್ಮೆ ಹಾಲಿ ಸಂಸದರಿಗೆ ಟಿಕೆಟ್ ಸಿಗದಿದ್ದರೆ ರಾಜ್ಯ ಬಿಜೆಪಿ ಕಾರ್ಯದರ್ಶಿ ಕ್ಯಾ.ಬೃಜೇಶ್ ಚೌಟ ಅವರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ.

    ಆಂತರಿಕ ಕಲಹ: ಕಾಂಗ್ರೆಸ್​ನಲ್ಲಿ 2 ದಶಕದಿಂದ ಬಣ ರಾಜಕೀಯವಿದೆ. ಶಿಸ್ತಿಗೆ ಹೆಸರಾಗಿದ್ದ ಬಿಜೆಪಿಯಲ್ಲೂ ಈಗ ಆಂತರಿಕ ಕಲಹ ಶುರುವಾಗಿದೆ. ಸುಳ್ಯ, ಬಂಟ್ವಾಳ ಸಹಿತ ಕೆಲವು ಕ್ಷೇತ್ರ ಸಮಿತಿಗಳಿಗೆ ಅಧ್ಯಕ್ಷರನ್ನು ಆಯ್ಕೆ ಮಾಡಿದ ವಿಚಾರದಲ್ಲಿ ಅಸಮಾಧಾನ ಸ್ಪೋಟಗೊಂಡಿದೆ. ಪಕ್ಷದ ಕಚೇರಿಗೆ ಬೀಗ ಜಡಿದ ಘಟನೆಯೂ ನಡೆದಿದೆ. ಪುತ್ತೂರಿನಲ್ಲಿ ಅರುಣ್ ಪುತ್ತಿಲ ಪಕ್ಷ ಸೇರ್ಪಡೆ ಬಗ್ಗೆ ಗೊಂದಲ ಮುಂದುವರಿದಿದೆ. ಸತ್ಯಜಿತ್ ಸುರತ್ಕಲ್ ಅಭಿಮಾನಿಗಳ ಸಭೆ ನಡೆಸಿ ಟಿಕೆಟ್​ಗಾಗಿ ಹಕ್ಕೊತ್ತಾಯ ಮಂಡಿಸಲು ಆರಂಭಿಸಿದ್ದಾರೆ.

    ಮತ ಲೆಕ್ಕಾಚಾರ: 2019ರ ಚುನಾವಣೆಯಲ್ಲಿ ನಳಿನ್ ಕುಮಾರ್ 2.74 ಲಕ್ಷ ಮತಗಳ ಅಂತರದ ಜಯ ಸಾಧಿಸಿದ್ದರು. ನಳಿನ್ 7,74,285 ಮತ ಗಳಿಸಿದರೆ, ಜೆಡಿಎಸ್ ಬೆಂಬಲವಿದ್ದರೂ ಕಾಂಗ್ರೆಸ್​ನ ಮಿಥುನ್ ರೈ 4,99,664 ಮತ ಗಳಿಸಿದ್ದರು.

    ಕೈಗೆ ಆಯ್ಕೆ ಸವಾಲು: ಕಾಂಗ್ರೆಸ್​ಗೆ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿದೆ. ಮಾಜಿ ಸಚಿವ ವಿನಯಕುಮಾರ್ ಸೊರಕೆ ಮತ್ತು ಕೆಪಿಸಿಸಿ ಕಾರ್ಯದರ್ಶಿ ಆರ್. ಪದ್ಮರಾಜ್ ಹೆಸರು ಕೆಪಿಸಿಸಿಗೆ ರವಾನೆ ಯಾಗಿದೆ. ಮಾಜಿ ಸಚಿವ ಬಿ.ರಮಾನಾಥ ರೈ ಅವರಿಗೆ ಟಿಕೆಟ್ ನೀಡಬೇಕು ಎನ್ನುವುದು ಕಾರ್ಯಕರ್ತರ ಬೇಡಿಕೆ. ಕಳೆದ ಚುನಾವಣೆಯ ಅಭ್ಯರ್ಥಿ ಮಿಥುನ್ ರೈ ಸ್ಪರ್ಧೆಗೆ ಆಸಕ್ತಿ ತೋರಿಲ್ಲ. ಸಾರ್ವಜನಿಕ ವಲಯದಲ್ಲಿ ಒಳ್ಳೆಯ ವರ್ಚಸ್ಸು ಇರುವ ಕಾರಣ ಸೊರಕೆ ಅವರನ್ನು ಕಣಕ್ಕಿಳಿಸಲು ವರಿಷ್ಠರು ಚಿಂತಿಸಿದ್ದಾರೆ ಎನ್ನುವ ಮಾಹಿತಿ ಇದೆ. ಹೊಸಮುಖಗಳಿಗೆ ಆದ್ಯತೆ ನೀಡಿದರೆ ಪದ್ಮರಾಜ್​ಗೆ ಟಿಕೆಟ್ ಒಲಿಯಬಹುದು.

    ಸದನದಲ್ಲಿ ಹಾಜರಾತಿ: ಸಂಸದ ನಳಿನ್ ಕುಮಾರ್ ಕಟೀಲ್ ಸಂಸತ್ ಕಲಾಪದಲ್ಲಿ ಶೇ.70 ಹಾಜರಾತಿ ಹೊಂದಿದ್ದಾರೆ. 353 ಪ್ರಶ್ನೆಗಳನ್ನು ಕೇಳಿದ್ದಾರೆ. 13 ಚರ್ಚೆಗಳಲ್ಲಿ ಪಾಲ್ಗೊಂಡಿದ್ದಾರೆ.

    ಕಾಮಗಾರಿ ಹಂತದಲ್ಲಿ ಹಲವು ಯೋಜನೆ: ಸಂಸದ ನಳಿನ್ ಕುಮಾರ್ ಕಟೀಲ್ ರಾ.ಹೆ.ಗಳ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ರಾ.ಹೆ.75ರಲ್ಲಿ ಅಡ್ಡಹೊಳೆಯಿಂದ ಬಂಟ್ವಾಳದವರೆಗೆ 2204.21 ಕೋಟಿ ರೂ.ವೆಚ್ಚದಲ್ಲಿ 63.61 ಕಿ.ಮೀ.ಚತುಷ್ಪಥ ರಸ್ತೆ ನಿರ್ಮಾಣ ಹಾಗೂ ಕಲ್ಲಡ್ಕದಲ್ಲಿ ಷಟ್ಪಥ ಫ್ಲೈ ಓವರ್ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಬಿಕರ್ನಕಟ್ಟೆಯಿಂದ ಕಾರ್ಕಳ ಸಾಣೂರುವರೆಗೆ ಚತುಷ್ಪಥ ರಸ್ತೆ ನಿರ್ಮಾಣ ಸಹಿತ ಒಟ್ಟು 4711.13 ಕೋಟಿ ರೂ. ವೆಚ್ಚದ ಕಾಮಗಾರಿ ವಿವಿಧ ಹಂತದಲ್ಲಿದೆ. ನವಮಂಗಳೂರು ಬಂದರು ಹಾಗೂ ಸಾಗರ್​ವಾಲಾ ಯೋಜನೆಯಡಿ 2107.24 ಕೋಟಿ ರೂ.ಮೊತ್ತದ ಕಾಮಗಾರಿ ಮಂಜೂರಾಗಿದೆ. 595.58 ಕೋಟಿ ರೂ. ವೆಚ್ಚದಲ್ಲಿ ರೈಲ್ವೆಯ ವಿವಿಧ ಕಾಮಗಾರಿ ಪೂರ್ಣಗೊಂಡಿದ್ದು, 437.65 ಕೋಟಿ ರೂ. ವೆಚ್ಚದ ಕಾಮಗಾರಿ ಪ್ರಗತಿಯಲ್ಲಿದೆ. ಗಂಜಿಮಠದಲ್ಲಿ ಪ್ಲಾಸ್ಟಿಕ್ ಪಾರ್ಕ್ ಹಾಗೂ ಕೆಂಜಾರಿನಲ್ಲಿ ಕೋಸ್ಟ್ ಗಾರ್ಡ್ ಅಕಾಡೆಮಿ ಮಂಜೂರಾದ ಮಹತ್ವದ ಯೋಜನೆಗಳು. ಸಂಸದರ ಆದರ್ಶ ಗ್ರಾಮ ಬಳ್ಪದ ಅಭಿವೃದ್ಧಿಗೆ 55 ಕೋಟಿ ರೂ. ವಿನಿಯೋಗವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts