More

    ಬೆಳಗೆರೆ ಲಕ್ಷ್ಮೀರಂಗನಾಥ ಜಾತ್ರೋತ್ಸವ ಸಂಪನ್ನ

    ಚಳ್ಳಕೆರೆ: ತಾಲೂಕಿನ ಬೆಳಗೆರೆ ಗ್ರಾಮದಲ್ಲಿ ಐದು ದಿನಗಳ ಕಾಲ ನಡೆದ ಶ್ರೀಲಕ್ಷ್ಮೀರಂಗನಾಥಸ್ವಾಮಿ ಜಾತ್ರಾ ಮಹೋತ್ಸವ ಬುಧವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ನೆರವೇರಿದ ರಥೋತ್ಸವದೊಂದಿಗೆ ಸಂಪನ್ನಗೊಂಡಿತು.

    ಜಾತ್ರಾ ಮಹೋತ್ಸವದ ಪೂಜಾ ಕಾರ್ಯಕ್ರಮಗಳು ಏ.20ರಂದೇ ಆರಂಭವಾಗಿತ್ತು. ಮೊದಲ ದಿನ ದೇವರನ್ನು ನಾರಾಯಣಪುರ ಗ್ರಾಮದ ಗೊಂಚಿಗಾರ ಮನೆಗೆ ಕರೆದೊಯ್ದು ರಾತ್ರಿ ಅಲ್ಲಿ ಗದ್ದುಗೆ ಹಾಕಿ ಕೂರಿಸಿ, ವಿವಿಧ ಪೂಜಾ ಕಾರ್ಯಕ್ರಮಗಳು ನೆರವೇರಿಸಿ ದಾಸೋಹ ನಡೆಸಲಾಗಿತ್ತು.

    ಮರುದಿನ ಬೆಳಗ್ಗೆ ರಂಗನಾಥಪುರ ಮತ್ತು ಬೆಳಗೆರೆ ಗ್ರಾಮಗಳಿಗೆ ದೇವಿಯನ್ನು ಕರೆತಂದು ದಾಸೋಹ ನೆರವೇರಿಸಿ ನಂತರ ದೇವಸ್ಥಾನಕ್ಕೆ ಮರಳಿ ತಂದು ಕಂಕಣಧಾರಣೆ ಮಾಡಲಾಗಿತ್ತು.

    ಮೂರನೇ ದಿನ ವಿಶೇಷ ಪೂಜೆ ಮತ್ತು ಹೋಮ-ಹವನ ನಡೆಸಲಾಯಿತು. ನಾಲ್ಕನೇ ದಿನ ಕಲ್ಯಾಣೋತ್ಸವ ನೆರವೇರಿಸಿ ದೇವಸ್ಥಾನದಿಂದ ಪಾದಗಟ್ಟೆವರೆಗೆ ಉತ್ಸವ ನಡೆಸಿ ಮರಳಿ ದೇವಸ್ಥಾನಕ್ಕೆ ಕರೆ ತಂದು ದೇವರುಗಳನ್ನು ಎದುರು-ಬದುರು ಕೂರಿಸಿ ಮಾತುಗಾರಿಕೆ ನಡೆಸಲಾಯಿತು.

    ರಂಗನಾಥಸ್ವಾಮಿ ಮನೆಯಿಂದ ಹೊರಹೋದ ಬಳಿಕ ಲಕ್ಷ್ಮೀ ಬಾಗಿಲು ಹಾಕಿಕೊಳ್ಳುತ್ತಾಳೆ. ಮರಳಿ ಬಂದ ರಂಗನಾಥಸ್ವಾಮಿ ಹತ್ತು ಅವತಾರವೆತ್ತಿ ಬಾಗಿಲು ತೆಗೆಯುವಂತೆ ಲಕ್ಷ್ಮೀ ದೇವಿಯನ್ನು ಒತ್ತಾಯಪಡಿಸುತ್ತಾನೆ. ನನ್ನ ಒಡೆಯನಲ್ಲದವನಿಗೆ ಬಾಗಿಲೇಕೆ ತೆರೆಯಲಿ ಎಂದು ಎದುರುವಾದಿಸುವ ಮತ್ತು ಇಬ್ಬರ ನಡುವಿನ ನಂಬಿಕೆಯಾರ್ಹ ಸಂಬಂಧದ ಕುರುಹು ತಿಳಿಯುವ ವಾಗ್ವಾದವನ್ನು ಮಾತುಗಾರಿಕೆ ಪದ್ಧತಿಯಲ್ಲಿ ಅರ್ಚಕರು ಮತ್ತು ಹಾಸ್ಯಗಾರರ ನಡುವೆ ನಡೆಯುವ ಪದ್ಧತಿ ವಿಶೇಷವಾಗಿ ಗಮನಸೆಳೆಯಿತು.

    ಕಲ್ಯಾಣೋತ್ಸವ ನಡೆದ ಬಳಿಕ ಜಾತ್ರೆಯ ಕೊನೆಯ ದಿನ ರಥೋತ್ಸವ ನಡೆಯಿತು. ನಾರಾಯಣಪುರ, ಬೆಳಗೆರೆ, ರಂಗನಾಥಪುರ ಮೂಲ ಗ್ರಾಮಗಳು ಸೇರಿ ಮಧುಗಿರಿ, ಆಂಧ್ರಪ್ರದೇಶದಿಂದಲೂ ಭಕ್ತರು ಪಾಲ್ಗೊಂಡಿದ್ದರು. ಸ್ಥಳೀಯ ಮೂರು ಗ್ರಾಮಗಳ ಮಹಿಳೆಯರು ಹಿಟ್ಟಿನಾರತಿ ಹೊತ್ತು ದೇವಸ್ಥಾನ ಪ್ರದಕ್ಷಿಣೆ ಹಾಕಿ ಆರತಿ ಮಾಡಿ ಹರಕೆ ಸಲ್ಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts