ಮಂಗಳೂರು ಮಹಾನಗರ ಪಾಲಿಕೆಯಿಂದ ನೀರಿನ ರೇಷನಿಂಗ್‌ಗೆ ಸಿದ್ಧತೆ

TUMBEY DAM
Published on

ತುಂಬೆ ವೆಂಟೆಡ್ ಡ್ಯಾಂನಲ್ಲಿ ದಿನದಿಂದ ದಿನಕ್ಕೆ ನೀರಿನ ಮಟ್ಟ ಕುಸಿಯುತ್ತಿರುವ ಪರಿಣಾಮ ಮಂಗಳೂರು ಮಹಾನಗರ ಪಾಲಿಕೆಯಿಂದ ನೀರಿನ ರೇಷನಿಂಗ್ ವ್ಯವಸ್ಥೆಗೆ ಸಿದ್ಧತೆ ನಡೆಸಲಾಗಿದೆ. ಈ ಬಗ್ಗೆ ವಿಸ್ತೃತ ವರದಿ ಇಲ್ಲಿದೆ..

ಶ್ರವಣ್‌ಕುಮಾರ್ ನಾಳ ಮಂಗಳೂರು
ತುಂಬೆ ವೆಂಟೆಡ್ ಡ್ಯಾಂನಲ್ಲಿ ದಿನದಿಂದ ದಿನಕ್ಕೆ ನೀರಿನ ಮಟ್ಟ ಕುಸಿಯುತ್ತಿರುವ ಪರಿಣಾಮ ಮಂಗಳೂರು ಮಹಾನಗರ ಪಾಲಿಕೆಯಿಂದ ನೀರಿನ ರೇಷನಿಂಗ್ ವ್ಯವಸ್ಥೆಗೆ ಸಿದ್ಧತೆ ನಡೆಸಲಾಗಿದೆ.

ತುಂಬೆ ವೆಂಟೆಡ್ ಡ್ಯಾಂನಲ್ಲಿ ಏ.4ಕ್ಕೆ ನೀರಿನ ಮಟ್ಟ 4.06ಕ್ಕೆ ಇಳಿಕೆಯಾದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸೂಚನೆಯಂತೆ ಬಂಟ್ವಾಳದ ಶಂಭೂರಿನ ಎಎಂಆರ್ ಅಣೆಕಟ್ಟಿನಿಂದ ನೀರು ಹರಿಸಲಾಗಿತ್ತು. ಇದರಿಂದ ಏ.6ರಂದು ನೀರಿನ ಪ್ರಮಾಣ ವೆಂಟೆಡ್ ಡ್ಯಾಂನಲ್ಲಿ 5.98 ಮೀ.ಗೆ ಏರಿಕೆಯಾಗಿತ್ತು. ಏ.11ಕ್ಕೆ ನೀರಿನ ಮಟ್ಟ 5.80ಕ್ಕೆ ಬಂದು ನಿಂತಿದೆ. ಶಂಭೂರಿನ ಎಎಂಆರ್ ಅಣೆಕಟ್ಟಿನಲ್ಲೂ ನೀರಿನ ಪ್ರಮಾಣ 16ಮೀ.ಗೆ ಇಳಿಕೆಯಾಗಿರುವುದದರಿಂದ ಮುಂದಿನ ದಿನಗಳಲ್ಲಿ ತುಂಬೆ ವೆಂಟೆಡ್ ಡ್ಯಾಂಗೆ ನೀರು ಹರಿಸುವುದು ಅಸಾಧ್ಯ.

40 ದಿನ ಮಾತ್ರ ಪೂರೈಕೆ:

ತುಂಬೆ ವೆಂಟೆಡ್ ಡ್ಯಾಂನಿಂದ ಪ್ರತಿನಿತ್ಯ 155 ಎಂಎಲ್‌ಡಿ ನೀರು ಮಂಗಳೂರು ನಗರಕ್ಕೆ ಸರಬರಾಜಾಗುತ್ತಿದ್ದು, ಈಗ ದಾಸ್ತಾನು ಆಗಿರುವ ನೀರು ಮುಂದಿನ 45 ದಿನಗಳಿಗೆ ಸಾಕಾಗಬಹುದು ಎಂದು ನಗರ ಪಾಲಿಕೆ ಅಧಿಕಾರಿಗಳು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದಾರೆ. ಆದರೆ ಬಿಸಿಲ ಪ್ರಖರತೆಗೆ ಈ ನೀರು ಸ್ವಲ್ಪ ಆವಿಯಾಗಿ, ಇನ್ನು ಸ್ವಲ್ಪ ಸ್ಥಳೀಯರ ತೋಟಗಳಿಗೆ ಅನಧಿಕೃತವಾಗಿಯೂ ಬಳಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ತುಂಬೆಯಲ್ಲಿರುವ 5.80 ಮೀ. ನೀರು ಮುಂದಿನ 30-32 ದಿನಗಳ ವರೆಗೆ ಮಾತ್ರ ಲಭ್ಯವಾಗಲಿದೆ.

ಮಿತ ಬಳಕೆಗೆ ಸೂಚನೆ

ತುಂಬೆ ಡ್ಯಾಂನಲ್ಲಿ ನೀರಿನ ಪ್ರಮಾಣ ಗಣನೀಯ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರನ್ನು ಮಿತವಾಗಿ ಬಳಸಿಕೊಳ್ಳಲು ಪಾಲಿಕೆ ಸೂಚಿಸಿದೆ. ಮಾತ್ರವಲ್ಲದೆ ಮುಂದಿನ 25 ದಿನ ನಂತರ ರೇಷನಿಂಗ್ ಆಧಾರದಲ್ಲಿ ನೀರು ಪೂರೈಕೆಗೆ ಪೂರ್ವ ಸಿದ್ಧ್ದತೆ ನಡೆಸಿದೆ. ಆಯಾ ವಾರ್ಡ್‌ಗಳಲ್ಲಿ ಸಾರ್ವಜನಿಕವಾಗಿ ನೀರಿನ ಬಳಕೆ ಹಾಗೂ ಪೂರೈಕೆಯ ಸಮಗ್ರ ಮಾಹಿತಿ ನೀಡುವಂತೆ ಸೂಚಿಸಲಾಗಿದೆ. ನೀರು ತಲುಪಲು ಸಾಧ್ಯವಾಗದ ಪ್ರದೇಶಗಳಿಗೆ ನಗರದ 3 ವಾಟರ್ ಗೇಟ್‌ನಿಂದ ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಯೋಜನೆ ರೂಪಿಸಿದೆ. ಈಗಿನಿಂದಲೇ ನಗರದ ಬಹುತೇಕ ಹೋಟೆಲ್, ಉದ್ಯಮ, ಎತ್ತರ ಪ್ರದೇಶ, ಕೆಲವು ವಸತಿ ಸಮುಚ್ಚಯಗಳಿಗೆ ಖಾಸಗಿ ಹಾಗೂ ಪಾಲಿಕೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಮಹಾನಗರ ಪಾಲಿಕೆಯಿಂದ ಪ್ರತಿಯೊಂದು ವಾರ್ಡ್‌ಗೆ ಒಂದು ಟ್ಯಾಂಕರ್ ನಿಯೋಜಿಸಲಾಗಿದೆ. ಮಂಗಳೂರು ತಾಲೂಕಿನ ಕೆಲವೊಂದು ಗ್ರಾಪಂ ವ್ಯಾಪ್ತಿಯಲ್ಲೂ ನೀರಿನ ಸಮಸ್ಯೆಯಿದ್ದು, 2-3 ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ.

ಅಕ್ರಮ ಸಂಪರ್ಕಕ್ಕೆ ದಂಡ

ಅನಧಿಕೃತ ನೀರಿನ ಸಂಪರ್ಕ ಪತ್ತೆಗೆ ಕ್ರಮ: ಪ್ರತಿನಿತ್ಯ 155 ಎಂಎಲ್‌ಡಿ ನೀರು ಮಂಗಳೂರು ನಗರಕ್ಕೆ ಸರಬರಾಜಾದರೂ ಇದರಲ್ಲಿ 23 ಎಂಎಲ್‌ಡಿ ನೀರು ಲೀಕೆಜ್ ಮೂಲಕ ಪೋಲಾಗುತ್ತಿದೆ ಎಂಬುದು ಅಧಿಕಾರಿಗಳ ಸಬೂಬು. ವಾಸ್ತವದಲ್ಲಿ ನೋಡುವುದಾದರೆ ಪಾಲಿಕೆ ವ್ಯಾಪ್ತಿಯಲ್ಲಿ 500ಕ್ಕೂ ಅಧಿಕ ಅನಧಿಕೃತ ನೀರಿನ ಸಂಪರ್ಕ ಇದೆ. ಇದರ ಪತ್ತೆಗೆ ಈ ಹಿಂದೆ ವಿಶೇಷ ತಂಡ ರಚಿಸಲಾಗಿದ್ದರೂ ಪ್ರಸ್ತುತ ಕಾರ್ಯರೂಪಗೊಂಡಿಲ್ಲ. ಕಳೆದ ವಾರ ಕಣ್ಣೂರು ಬಳಿ 25ಕ್ಕೂ ಅಧಿಕ ಅನಧಿಕೃತ ನೀರಿನ ಸಂಪರ್ಕ ಪತ್ತೆಹಚ್ಚಿದ ಪಾಲಿಕೆ ಅಧಿಕಾರಿಗಳು ಅಕ್ರಮ ಸಂಪರ್ಕಕ್ಕೆ ದಂಡ ವಿಧಿಸಿ ಸಕ್ರಮಗೊಳಿಸಿ ನೀರು ಪೂರೈಕೆಗೆ ಕ್ರಮ ವಹಿಸಿದ್ದಾರೆ.

ಮಂಗಳೂರು ನಗರಕ್ಕೆ ನೀರು ಪೂರೈಕೆಯಲ್ಲಿ ಸಮಸ್ಯೆಯಾಗದಂತೆ ತಡೆಯಲು ಪಾಲಿಕೆ ಅನೇಕ ಕ್ರಮಗಳ್ನು ಕೈಗೊಳ್ಳುತ್ತಿದೆ. ತುಂಬೆ ಡ್ಯಾಂನಲ್ಲಿ ನೀರಿನ ಲಭ್ಯತೆಯ ಆಧಾರದಲ್ಲಿ ಪ್ರಸ್ತುತ 155 ಎಂಎಲ್‌ಡಿ ನೀರು ಮಂಗಳೂರು ನಗರಕ್ಕೆ ಸರಬರಾಜಾಗುತ್ತಿದೆ. ನೀರಿನ ಮಟ್ಟ ಇಳಿಕೆಯಾಗುತ್ತಿದ್ದಂತೆ ನಗರಕ್ಕೆ ರೇಷನಿಂಗ್ ಆಧಾರದಲ್ಲಿ ನೀರು ಪೂರೈಕೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.ಚನ್ನಬಸಪ್ಪ ಕಮಿಷನರ್, ಮನಪಾ ಮಂಗಳೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net