ಜಿಲ್ಲೆಯ ಜನರಿಗೆ ಶುಚಿತ್ವದ ಅರಿವು ಮೂಡಿಸಿ

UDP-6-10-Vidyakumari
ಉಡುಪಿಯ ಜಿಪಂ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ವಿದ್ಯಾಕುಮಾರಿ ಮಾತನಾಡಿದರು. ಪ್ರತೀಕ್​ ಬಾಯಲ್​, ಡಾ. ಅರುಣಕುಮಾರ್​ ಕೆ., ಸಿದ್ಧಲಿಂಗಪ್ಪ ಇದ್ದರು.
Published on

ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚನೆ | ಸ್ವಚ್ಛತಾ ಹೀ ಸೇವಾ ಪಾಕ್ಷಿಕ ಸಭೆ

ವಿಜಯವಾಣಿ ಸುದ್ದಿಜಾಲ ಉಡುಪಿ:
ಸ್ವಚ್ಛತಾ ಹೀ ಸೇವಾ ಪಾಕ್ಷಿಕ ವಿಶೇಷ ಆಂದೋಲನವು ಜಿಲ್ಲಾದ್ಯಂತ ಸೆ.14ರಿಂದ ಅ.2ರ ವರೆಗೆ ನಡೆಯಲಿದ್ದು, ಜನರಿಗೆ ಶುಚಿತ್ವದ ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಸೂಚನೆ ನೀಡಿದರು.

ಉಡುಪಿ ರಜತಾದ್ರಿಯ ಜಿಪಂನ ಡಾ. ವಿ.ಎಸ್​. ಆಚಾರ್ಯ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸ್ವಚ್ಛತಾ ಹೀ ಸೇವಾ ಪಾಕ್ಷಿಕ ವಿಶೇಷ ಆಂದೋಲನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಈ ಕಾರ್ಯಕ್ರಮ ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳಲು ಅಧಿಕಾರಿಗಳು ಮುತುವರ್ಜಿ ವಹಿಸಬೇಕು ಎಂದರು.

ಸ್ವಭಾವ, ಸಂಸ್ಕಾರ ಸ್ವಚ್ಛತಾ

ಗ್ರಾಮೀಣ ಹಾಗೂ ನಗರ ಪ್ರದೇಶಗಳ ಜನರಿಗೆ ನೈರ್ಮಲ್ಯದ ಕುರಿತು ಅರಿವು ಮೂಡಿಸಲು ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಲಶಕ್ತಿ ಮಂತ್ರಾಲಯ ಹಾಗೂ ಕೇಂದ್ರ ನಗರ ವಸತಿ ವ್ಯವಹಾರಗಳ ಸಚಿವಾಲಯ ಈ ಕಾರ್ಯಕ್ರಮ ಹಮ್ಮಿಕೊಂಡಿದೆ. ಸ್ವಭಾವ ಸ್ವಚ್ಛತಾ, ಸಂಸ್ಕಾರ ಸ್ವಚ್ಛತಾ ಎಂಬ ಧ್ಯೇಯ ವಾಕ್ಯದೊಂದಿಗೆ ಆಂದೋಲನ ನಡೆಯಲಿದೆ. ಸಾರ್ವಜನಿಕರಿಗೆ ತಮ್ಮಸುತ್ತ-ಮುತ್ತಲಿನ ಪ್ರದೇಶಗಳ ಸ್ವಚ್ಛತೆಯ ಮಹತ್ವದ ಕುರಿತು ಜಾಗೃತಿ ಮೂಡಿಸಬೇಕು ಎಂದರು.

ಸಹಭಾಗಿತ್ವ ಅಗತ್ಯ

ಕಾರ್ಯಕ್ರಮದ ಅಂಗವಾಗಿ ಪ್ರತಿಜ್ಞಾ ವಿಧಿ, ಮಾನವ ಸರಪಳಿ, ಗಿಡ ನೆಡುವುದು, ಅರಿವು ಕಾರ್ಯಾಗಾರ, ಜಾಥಾ ಆಯೋಜನೆ ಸೇರಿದಂತೆ ವಿವಿಧ ಸ್ವಚ್ಛತಾ ಕಾರ್ಯಕ್ರಮ ಆಯೋಜಿಸಬೇಕು. ಕಾರ್ಯಕ್ರಮದಲ್ಲಿ ಸಾರ್ವಜನಿಕರೊಂದಿಗೆ ಸಂಘ-ಸಂಸ್ಥೆಗಳು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಸಮುದಾಯದ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ವಿದ್ಯಾಕುಮಾರಿ ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್​ ವರಿಷ್ಠ ಡಾ. ಅರುಣಕುಮಾರ್​ ಕೆ., ಹೆಚ್ಚುವರಿ ಪೊಲೀಸ್​ ವರಿಷ್ಠ ಸಿದ್ಧಲಿಂಗಪ್ಪ, ಜಿಲ್ಲಾ ಮಟ್ಟದ ವಿವಿಧ ಅನುಷ್ಠಾನಾಧಿಕಾರಿಗಳು, ತಹಸೀಲ್ದಾರರು, ತಾಪಂ ಇಒ ಹಾಗೂ ಪಿಡಿಒಗಳು ಉಪಸ್ಥಿತರಿದ್ದರು.

ಬೀಚ್​ ಡ್ರೈವ್​ ಆಯೋಜಿಸಿ

ಜಿಲ್ಲೆಯ ಜನನಿಬಿಡ ಪ್ರದೇಶಗಳಾದ ಬಸ್​ ನಿಲ್ದಾಣ, ರೈಲು ನಿಲ್ದಾಣ, ಪ್ರವಾಸಿ ತಾಣ, ರಾಷ್ಟ್ರೀಯ ಹೆದ್ದಾರಿಗಳ ಬದಿಗಳಲ್ಲಿ, ನೀರಿನ ಮೂಲಗಳು, ಮಾರುಕಟ್ಟೆ ಪ್ರದೇಶ, ಧಾರ್ಮಿಕ ಕೇಂದ್ರ, ಘನ ತ್ಯಾಜ್ಯ ನಿರ್ವಹಣಾ ಘಟಕ ಹಾಗೂ ಇನ್ನಿತರ ಕಡೆಗಳಲ್ಲಿ ಶ್ರಮದಾನ ಚಟುವಟಿಕೆ ಆಯೋಜಿಸಬೇಕು. ಎಲ್ಲ ತಾಲೂಕಿನ ಗ್ರಾಪಂಗಳು ಗ್ರಾಮಗಳ ಸ್ವಚ್ಛತೆಗಾಗಿ ಸ್ವಯಂ ಪ್ರೇರಿತವಾಗಿ ಶ್ರಮದಾನ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಜನಪ್ರತಿನಿಧಿಗಳನ್ನು ಸೇರಿಸಿ ಬೀಚ್​ ಡ್ರೈವ್ ಕಾರ್ಯಕ್ರಮ ಆಯೋಜಿಸಬೇಕು ಎಂದು ಡಿಸಿ ವಿದ್ಯಾಕುಮಾರಿ ತಿಳಿಸಿದರು.

ಸಫಾಯಿ ಮಿತ್ರ ಸುರಕ್ಷಾ ಶಿಬಿರದ ಮೂಲಕ ಜಿಲ್ಲೆಯ ನೈರ್ಮಲ್ಯ ಕಾರ್ಯಕರ್ತರುಗಳಿಗೆ ಉಚಿತ ಆರೋಗ್ಯ ತಪಾಸಣೆ, ಅಗತ್ಯ ವ್ಯಾಕ್ಸಿನೇಷನ್​, ಔದ್ಯೋಗಿಕ ಅಪಾಯಗಳಿಂದ ರಕ್ಷಿಸಲು ಆಯ್ದ ಕಾರ್ಮಿಕರಿಗೆ ಪಿಪಿಇ ಕಿಟ್​, ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯ ಮತ್ತು ಮಂಜೂರಾತಿ ಪತ್ರಗಳನ್ನು ವಿತರಿಸಲಾಗುವುದು. | ಪ್ರತೀಕ್​ ಬಾಯಲ್​. ಜಿಪಂ ಸಿಇಒ, ಉಡುಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net