ಸಾಂಕ್ರಾಮಿಕ ರೋಗ ಹರಡದಂತೆ ಮುಂಜಾಗ್ರತಾ ಕ್ರಮ; ಸಾಯಿ ಲೇಔಟ್‌ನಲ್ಲಿ ಬಿಬಿಎಂಪಿ ಅಲರ್ಟ್

Sai Layout
Published on

ಬೆಂಗಳೂರು: ಇತ್ತೀಚೆಗೆ ಬೆಂಗಳೂರಿನಲ್ಲಿ ಸುರಿದ ಮುಂಗಾರು ಪೂರ್ವ ಮಳೆಯಿಂದ ಸಾಯಿ ಲೇಔಟ್‌ನಲ್ಲಿ ನೀರು ನುಗ್ಗಿ ಸಾರ್ವಜನಿಕರು ಹಲವು ತೊಂದರೆಗಳನ್ನು ಎದುರಿಸಿದ್ದರು. ಮಳೆ ನೀರು ಕಡಿಮೆಯಾಗಿದೆಯಾದರೂ ಚರಂಡಿ ಮತ್ತಿತರ ಕೊಳಕು ನೀರು ನುಗ್ಗಿದ ಪರಿಣಾಮ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ವ್ಯಾಪಕವಾಗಿದ್ದು, ಪಾಲಿಕೆ ವತಿಯಿಂದ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪಾಲಿಕೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ತಂಡವು ಖುದ್ದು ಸ್ಥಳದಲ್ಲಿದ್ದು ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಂಡಿದೆ. ಮಹದೇವಪುರ ವಲಯ ಆಯುಕ್ತರಾದ ಕೆ.ಎನ್ ರಮೇಶ್ ನೇತೃತ್ವದಲ್ಲಿ ವಲಯ ಆರೋಗ್ಯಾಧಿಕಾರಿ ಡಾ ಲೋಕೇಶ್, ಆರೋಗ್ಯ ವೈದ್ಯಾಧಿಕಾರಿ ಡಾ.ವಿಶ್ವೇಶ್ವರಯ್ಯ ಮತ್ತವರ ತಂಡದವರು ಸ್ಥಳೀಯ ಹಿತದೃಷ್ಟಿಯಿಂದ ಹಲವು ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದ್ದಾರೆ. ರ‌್ಯಾಪಿಡ್ ರೆಸ್ಪಾನ್ಸ್ ತಂಡ ನಿಯೋಜಿಸಲಾಗಿದ್ದು, ಆರೋಗ್ಯ ಶಿಬಿರವನ್ನು ಏರ್ಪಡಿಸಲಾಗಿದೆ. ಶಿಬಿರದಲ್ಲಿ ಅಗತ್ಯ ಔಷಧಗಳ ಜೊತೆಗೆ, ರಕ್ತದೊತ್ತಡ ಪರೀಕ್ಷೆ, ಆಂಬುಲೆನ್ಸ್ ಸೇವೆಯನ್ನು ನೀಡಲಾಗಿದೆ. ಹಿರಿಯ ಆರೋಗ್ಯಾಧಿಕಾರಿಗಳು ಮತ್ತು ಆಶಾ ಕಾರ್ಯಕರ್ತೆಯರನ್ನು ಒಳಗೊಂಡ ತಂಡವು ಮನೆ-ಮನೆಗೆ ಭೇಟಿ ನೀಡಿ, ಸಾಂಕ್ರಾಮಿಕ ರೋಗಗಳು, ನೀರಿನಿಂದ ಹರಡಬಹುದಾದ ಖಾಯಿಲೆಗಳು, ಡೆಂಗೀ ನಿಯಂತ್ರಣ, ಶುದ್ಧ ಕುಡಿಯುವ ನೀರನ್ನು ಬಳಸುವ ಸಲುವಾಗಿ ಜಾಗೃತಿ ಮೂಡಿಸಲಾಗುತ್ತಿದೆ.

ಸೋಂಕು ನಿಯಂತ್ರಣ ಸಿಂಪಡಣೆ

ಕೆ. ನಾರಾಯಣಪುರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ನಮ್ಮ ಕ್ಲಿನಿಕ್ ವತಿಯಿಂದ ಆರೋಗ್ಯ ಶಿಬಿರ ಏರ್ಪಡಿಸಿ, ಸ್ಥಳೀಯ ನಿವಾಸಿಗಳಿಗೆ ರಕ್ತದ ಒತ್ತಡ, ಮುಧುಮೇಹ, ಚರ್ಮ ರೋಗಗಳು ಸೇರಿದಂತೆ ಇತರೆ ರೋಗಗಳಿಗೆ ನೂರಕ್ಕು ಹೆಚ್ಚು ಜನರಿಗೆ ಚಿಕಿತ್ಸೆ ನೀಡಲಾಗಿದೆ, ಜೊತೆಗೆ ಕ್ಯಾಲಮಿನ್, ಬಿಟಮೇತಸೋನ್, ಕೀಟೋ ಕೋನಸೋಲ್, ಕ್ಯಾಲ ಡ್ರಿಲ್ ಆಯಿಂಟ್ಮೆಂಟ್ ವಿತರಿಸಲಾಗಿದೆ.ಸಾಯಿ ಲೇಔಟ್ ಪ್ರದೇಶದಲ್ಲಿ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟುವ ಸಲುವಾಗಿ ಸೋಂಕು ನಿವಾರಕ ಸಿಂಪಡಣೆ ಮಾಡಲಾಗುತ್ತಿದೆ. ಜೊತೆಗೆ ಸೊಳ್ಳೆಗಳ ನಿಯಂತ್ರಣಕ್ಕಾಗಿ ಫಾಗಿಂಗ್ ಮಾಡಲಾಗುತ್ತಿದೆ. ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರು ದೂ : 080-28512300 ಮತ್ತು ವಾಟ್ಸಾಪ್ ನಂ : 9480685706 ಸಂಪರ್ಕಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net