

ಬೆಂಗಳೂರು: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಪಬ್ಲಿಕ್ ರಿಲೇಷನ್ಸ್ ಕೌನ್ಸಿಲ್ ಆಫ್ ಇಂಡಿಯಾ (ಪಿಆರ್ಸಿಐ) ಬೆಂಗಳೂರು ಚಾಪ್ಟರ್ ಮತ್ತು ಲೀಗಲ್ ಲೈಮ್ ಲೈಟ್ ವತಿಯಿಂದ ವಿಆರ್ಎಲ್ ಮೀಡಿಯಾ ಮತ್ತು ವಿಜಯಾನಂದ ಟ್ರಾವೆಲ್ಸ್ ಪ್ರೖೆ.ಲಿ. ನಿರ್ದೇಶಕಿ ಶ್ರೀಮತಿ ವಾಣಿ ಸಂಕೇಶ್ವರ ಸೇರಿ ವಿವಿಧ ಕ್ಷೇತ್ರದ 10 ಸಾಧಕಿಯರಿಗೆ 2025ನೇ ಸಾಲಿನ ಅತ್ಯುತ್ತಮ ಮಹಿಳಾ ಸಾಧಕಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ನಗರದ ಪುರಭವನದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಕೆ.ಆರ್.ವೇಣುಗೋಪಾಲ್, ಪಿಆರ್ಸಿಐನ ರಾಷ್ಟ್ರೀಯ ಅಧ್ಯಕ್ಷೆ ಗೀತಾಶಂಕರ್, ಅಧ್ಯಕ್ಷ ಎಂ.ಬಿ. ಜಯರಾಮ್ ಉಪಾಧ್ಯಕ್ಷ ಸಿದ್ದಲಿಂಗಸ್ವಾಮಿ, ಅಹಲ್ಯಾ ಫೌಂಡೇಷನ್ ಅಧ್ಯಕ್ಷೆ ಎನ್.ಎಸ್.ಮಹಾಲಕ್ಷ್ಮೀ ಪ್ರಶಸ್ತಿ ಪ್ರದಾನ ಮಾಡಿದರು. ಡಾ.ಕೆ.ಆರ್.ವೇಣುಗೋಪಾಲ್ ಮಾತನಾಡಿ, ಪ್ರತಿ ಹೆಣ್ಣು ಮಗುವಿಗೂ ಉತ್ತಮ ಶಿಕ್ಷಣ ಕೊಡಿಸಬೇಕು. ತಂತ್ರಜ್ಞಾನದ ಈ ಯುಗದಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಹೆಣ್ಣು ಮಕ್ಕಳು ಕೊಡುಗೆ ನೀಡುತ್ತಿದ್ದಾರೆ. ಪ್ರಮುಖವಾಗಿ ಕಂಪ್ಯೂಟರ್ ಸೈನ್ಸ್ ಕೌಶಲದಲ್ಲಿ ಮಹಿಳೆಯರ ಪ್ರಾಬಲ್ಯವೇ ಹೆಚ್ಚಿದೆ. ಹಾಗೆಯೇ ಶಿಕ್ಷಣ ಕ್ಷೇತ್ರದಲ್ಲೂ ಶೇ.80ಕ್ಕೂ ಅಧಿಕ ಮಹಿಳೆಯರಿದ್ದಾರೆ ಎಂದು ಪ್ರಶಂಸಿಸಿದರು.
ಭಾರತದಲ್ಲಿ ಮಹಿಳೆಯರಿಗೆ ನೀಡಿದಷ್ಟು ಸ್ವಾತಂತ್ರ್ಯ ಬೇರಾವುದೇ ದೇಶದಲ್ಲಿ ನೀಡಿಲ್ಲ. ಪುರಾಣ ಕಾಲದಲ್ಲೇ ಮಹಿಳೆಗೆ ಸ್ವಯಂವರದ ಮೂಲಕ ನೆಚ್ಚಿನ ಸಂಗಾತಿ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ನೀಡಲಾಗಿತ್ತು. ಆಧುನಿಕ ಯುಗದಲ್ಲಿ ಶಿಕ್ಷಣದ ಮೂಲಕ ಮಹಿಳೆ ಎಲ್ಲ ಕ್ಷೇತ್ರದಲ್ಲಿ ಮುನ್ನುಡಿ ಇಡುತ್ತಿದ್ದು, ಅದರ ಜತೆ ಜತೆಗೇ ಕುಟುಂಬ ನಿರ್ವಹಣೆಯಲ್ಲೂ ಪ್ರಮುಖ ಪಾತ್ರ ವಹಿಸಿದ್ದಾಳೆ. ಮಹಿಳೆಯರು ತಮಗಿರುವ ಸೌಲಭ್ಯ ಬಳಸಿಕೊಂಡು ಮುನ್ನುಗ್ಗುತ್ತಿರುವುದನ್ನು ನೋಡಿದರೆ 2040ರ ವೇಳೆಗೆ ಸಂಸತ್ತಿನಲ್ಲಿ 300ಕ್ಕೂ ಅಧಿಕ ಸ್ಥಾನದಲ್ಲಿ ಮಹಿಳೆಯರೇ ಇರುತ್ತಾರೆ ಎಂದು ವೇಣುಗೋಪಾಲ್ ಅಭಿಪ್ರಾಯಪಟ್ಟರು.
ಶಿಸ್ತು, ಸಂಸ್ಕಾರ ಸಾಧನೆಗೆ ಮೆಟ್ಟಿಲು: ನನಗೆ ತಾಯಿಯೇ ಮೊದಲ ಗುರು. ಅವರು ಕೊಟ್ಟ ಸಂಸ್ಕಾರದಿಂದ ನಾನು ಈ ಎತ್ತರಕ್ಕೆ ಬೆಳೆಯಲು ಸಾಧ್ಯವಾಯಿತು ಎಂದು ವಾಣಿ ಸಂಕೇಶ್ವರ ಹೇಳಿದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಹಾಸ್ಟೆಲ್ನಲ್ಲಿ ಕಲಿತ ನನಗೆ ಮನೆಗೆ ಬಂದಾಗ ಸಂಪ್ರದಾಯಕ್ಕೆ ಒಗ್ಗಿಕೊಳ್ಳುವುದು ಆರಂಭದಲ್ಲಿ ಕಷ್ಟವಾಯಿತು. ಆದರೆ, ತಾಯಿ ನನಗೆ ಉತ್ತಮ ಸಂಸ್ಕಾರ ಕಲಿಸಿಕೊಟ್ಟರು. ಚಿಕ್ಕ ವಯಸ್ಸಿಗೆ ವಿವಾಹವಾದ ನಾನು ಸೊಸೆಯಾಗಿ ಅತ್ತೆ-ಮಾವ, ಪತಿ, ಕುಟುಂಬಸ್ಥರಿಂದ ಶಿಸ್ತು, ಸಂಸ್ಕಾರ ಕಲಿತೆ. ನನ್ನ ಮೂವರು ಮಕ್ಕಳಿಗೂ ಅದನ್ನೇ ಕಲಿಸಿರುವೆ. ಹಾಗಾಗಿಯೇ ಅವರು ಚಿಕ್ಕ ವಯಸ್ಸಿಗೇ ತಮ್ಮದೇ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು. ದೇವರ ಬಗ್ಗೆ ಅಪಾರ ನಂಬಿಕೆ ಹೊಂದಿರುವ ನಾನು ಶಕ್ತಿಪೀಠವನ್ನು ಬಹಳ ನಂಬುತ್ತೇನೆ. ಜೀವನ ಸುಲಭದ ಹಾದಿಯಲ್ಲ. ಆದರೆ, ದೇವರ ಆಶೀರ್ವಾದ, ಕುಟುಂಬದ ಹಾರೈಕೆಯ ಜತೆಗೆ ಪ್ರಾಮಾಣಿಕ ಪ್ರಯತ್ನ ಮಾಡಿದಲ್ಲಿ ಯಶಸ್ಸು ಸಾಧ್ಯ. ಹಾಗಾಗಿ ನಾನು ಒಳ್ಳೆಯ ಮಗಳಾಗಿ, ಪತ್ನಿಯಾಗಿ, ಸೊಸೆಯಾಗಿ, ತಾಯಿಯಾಗಿ ಎಲ್ಲ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಜತೆಗೆ ಈ ಸಾಧನೆ ಮಾಡಲು ಸಾಧ್ಯವಾಗಿದೆ. ಇದರಲ್ಲಿ ನನ್ನ ಕುಟುಂಬದ ಸಹಕಾರ ಪ್ರಮುಖವಾಗಿದೆ ಎಂದ ಅವರು, ಸ್ತ್ರೀಯರು ಕುಟುಂಬ ನಿರ್ವಹಣೆ, ಕರ್ತವ್ಯದ ಜತೆಗೆ ಆರೋಗ್ಯದ ಬಗ್ಗೆಯೂ ಗಮನಹರಿಸಬೇಕಿದೆ ಎಂದು ಕಿವಿಮಾತು ಹೇಳಿದರು.
ಪ್ರಶಸ್ತಿ ಪುರಸ್ಕೃತರು: ವಿಆರ್ಎಲ್ ಮೀಡಿಯಾ ಮತ್ತು ವಿಜಯಾನಂದ ಟ್ರಾವೆಲ್ಸ್ ಪ್ರೖೆ.ಲಿ.ನ ನಿರ್ದೇಶಕಿ ವಾಣಿ ಸಂಕೇಶ್ವರ, ಕೃಪಾನಿಧಿ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ ಉಪಾಧ್ಯಕ್ಷೆ ಗೀತಾ ನಾಗ್ಪಾಲ್, ನಟಿ ಮೇಘನಾ ರಾಜ್ ಸರ್ಜಾ, ಎಸ್-ವ್ಯಾಸ ವಿಶ್ವವಿದ್ಯಾಲಯದ ಯೋಗ ಶಿಕ್ಷಕಿ ಗೀತಾ ಜಯರಾಮ್ ಬಿಲಿಯರ್ಡ್ಸ್ ಚಾಂಪಿಯನ್ ರೇವಣ್ಣ ಉಮಾದೇವಿ ನಾಗರಾಜ್, ಇಂದು ಸಂಜೆ ಪತ್ರಿಕೆ ಸಂಸ್ಥಾಪಕ ಅಧ್ಯಕ್ಷೆ ಡಾ.ಪದ್ಮಾ ನಾಗರಾಜ್, ಫ್ಯಾಷನ್ ಡಿಸೈನರ್ ರಂಜಿತಾ ಸುಂದರ್, ಉದ್ಯಮಿ ಮಾಲಿನಿ ವಿಜೇತ್ ನಾಯಕ್, ಮಾಸ್ಟರ್ ಆಫ್ ವಿಶ್ಯುಯಲ್ ಆರ್ಟ್್ಸ ಬಿ.ಆರ್. ರೂಪಾ ಮತ್ತು ಗಾಯಕಿ ರಮ್ಯಾ ವಸಿಷ್ಠ ಅವರ ಸಾಧನೆ ಪರಿಗಣಿಸಿ ಮಹಿಳಾ ಸಾಧಕಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮಹಿಳೆಯಾಗಿ ಹುಟ್ಟಿರುವುದೇ ಒಂದು ಸಂಭ್ರಮ. 2025ರ ಈ ಕಾಲಘಟ್ಟದಲ್ಲಿ ಮಹಿಳೆಯರ ಹಕ್ಕುಗಳ ಬಗ್ಗೆ ಮಾತನಾಡುತ್ತಿದ್ದೇವೆ. ಅದು ಸಾಕಾರಗೊಳ್ಳಬೇಕಾದರೆ ಮಹಿಳೆಯರಿಗೆ ಶಿಕ್ಷಣ ಸಿಗಬೇಕು. ಇದರಿಂದ ಆರ್ಥಿಕ ಸ್ವಾತಂತ್ರ್ಯ ಸಾಧ್ಯವಾಗಲಿದೆ. ನನ್ನ ತಾಯಿ ಸೇರಿ ನನ್ನ ಈ ಸಾಧನೆಗೆ ಕಾರಣವಾದ ಎಲ್ಲ ಮಹಿಳೆಯರ ಪರವಾಗಿ ಈ ಪ್ರಶಸ್ತಿ ಸ್ವೀಕರಿಸಿರುವೆ.
| ಮೇಘನಾ ರಾಜ್ ಸರ್ಜಾ ನಟಿ
ಕಳೆದ 125 ವರ್ಷಗಳಿಂದ ಮಹಿಳಾ ದಿನಾಚರಣೆ ಆಚರಿಸುತ್ತಾ, ಇಲ್ಲಿಯವರೆಗೂ ಬೆಳವಣಿಗೆ ಹೊಂದಲು ಸಾಧ್ಯವಾಗಿದೆ. ಮುಖ್ಯವಾಗಿ ಹೆಣ್ಣು ಕುಟುಂಬ ನಿರ್ವಹಣೆ ಮಾಡಿಕೊಂಡು ಎಲ್ಲವನ್ನೂ ಸಾಧಿಸಬಹುದು ಎನ್ನುವುದಕ್ಕೆ ವಾಣಿ ಸಂಕೇಶ್ವರ ಉತ್ತಮ ಉದಾಹರಣೆ.
| ರಮ್ಯಾ ವಸಿಷ್ಠ ಗಾಯಕಿ