More

    ಪ್ರವಾಸಿ ತಾಣವಾಗಿ ಪಾಲ್ಕುರಿಕೆ ಸೋಮನಾಥ ಬಸದಿ, ಕಲ್ಯಾ ಬೆಟ್ಟ: ಜಿಪಂ ಸಿಇಒ ಇಕ್ರಂ ಭರವಸೆ

    ಮಾಗಡಿ: ತಾಲೂಕಿನ ಕಲ್ಯಾ ಬೆಟ್ಟದ ಪಾಲ್ಕುರಿಕೆ ಸೋಮನಾಥ ಬಸದಿ, ಚನ್ನಮ್ಮ ಬಸದಿ, ಕಲ್ಲೇಶ್ವರ ದೇವಾಲಯಗಳನ್ನು ಅಭಿವೃದ್ಧಿಪಡಿಸಿ ಪ್ರವಾಸಿ ತಾಣವಾಗಿಸಲು ಚಿಂತಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಇಕ್ರಂ ತಿಳಿಸಿದರು.

    ಕಲ್ಯಾ ಗ್ರಾಪಂನಲ್ಲಿ ಬುಧವಾರ ಜಮಾಬಂದಿ ಕಾರ್ಯಕ್ರಮದ ನಂತರ ಕಲ್ಯಾ ಬೆಟ್ಟಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ನಂತರ ಮಾತನಾಡಿ, ಪಾಲ್ಕುರಿಕೆ ಸೋಮನಾಥ ಬಸದಿ, ಚನ್ನಮ್ಮ ಬಸದಿ, ಕಲ್ಲೇಶ್ವರ ದೇವಾಲಯ ಸಾಕಷ್ಟು ಇತಿಹಾಸ ಪ್ರಸಿದ್ಧಿ ಹೊಂದಿದ್ದು, ಇಲ್ಲಿನ ಪರಿಸರ ಕೂಡ ರಮಣೀಯವಾಗಿದೆ. ಇದರ ಅಭಿವೃದ್ಧಿ ಜತೆಗೆ ಬೆಟ್ಟದಲ್ಲಿ ಸಸಿ ನೆಡಲು ಸೂಕ್ತ ಕ್ರಮ ಕೈಗೊಂಡು ಪ್ರವಾಸಿ ತಾಣ ಮಾಡಲಾಗುವುದು ಎಂದು ಭರವಸೆ ನೀಡಿದರು.

    ನರೇಗಾದಲ್ಲಿ ಯೋಜನೆಯಲ್ಲಿ 275 ವೈಯಕ್ತಿಕ, ಸಮುದಾಯ ಕಾಮಗಾರಿಗಳನ್ನು ಅನುಷ್ಠಾನ ಮಾಡಬಹುದಾಗಿದ್ದು, ಪರಿಸರ ರಕ್ಷಣೆಗಾಗಿ ಸಸಿ ನೆಡುವುದು, ಮಕ್ಕಳಿಗೆ ಆಟದ ಮೈದಾನ ಅಭಿವೃದ್ಧಿ, ಹಾಗೂ ರೈತರಿಗೆ ಅನುಕೂಲಕರವಾದ ಕಾಮಗಾರಿಗಳನ್ನು ಕೈಗೊಳ್ಳಲು ನರೇಗಾ ಬಳಸಿಕೊಳ್ಳುವಂತೆ ಮನವಿ ಮಾಡಿದರು. ನರೇಗಾ ಯೋಜನೆ, ಹಣಕಾಸು ಯೋಜನೆ ಪ್ರಗತಿ ಬಗ್ಗೆ ಮತ್ತು ನೌಕರರು, ಸಾರ್ವಜನಿಕರ ಕುಂದು ಕೊರತೆಗಳ ಬಗ್ಗೆ ಮಾಹಿತಿ ಪಡೆದರು. ಕಲ್ಯಾ ಗ್ರಾಪಂ ಆಡಳಿತ ವೈಖರಿ ಬಗ್ಗೆ ಮೆಚ್ಚುಗೆ ಸೂಚಿಸಿದರು.

    ತಾಲೂಕು ಪಂಚಾಯಿತಿ ಅಧ್ಯಕ್ಷ ನಾರಾಯಣಪ್ಪ ಮಾತನಾಡಿ, ಜಮಾಬಂದಿ ಎಂದರೆ ತಾಲೂಕು ಮಟ್ಟದ ಅಧಿಕಾರಿಗಳು ನೋಡಲ್ ಅಧಿಕಾರಿಯಾಗಿರುತ್ತಾರೆ. ಆದರೆ ಕಲ್ಯಾ ಗ್ರಾಪಂ ಸಭೆಗೆ ವಿಶೇಷವಾಗಿ ಜಿಪಂ ಸಿಇಒ ನೋಡಲ್ ಅಧಿಕಾರಿಗಳಾಗಿ ಭಾಗವಹಿಸಿರುವುದು ಸ್ವಾಗತಾರ್ಹ. ಪಂಚಾಯಿತಿಗಳಲ್ಲಿನ ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸಿಕೊಂಡು ಜಾಬ್‌ಕಾರ್ಡ್‌ಗಳ ಮೂಲಕ ಕಾಮಗಾರಿ ಕೈಗೊಳ್ಳುವಂತೆ ತಿಳಿಸಿದರು.

    ನರೇಗಾದಲ್ಲಿ ರೈತರಿಗೆ ವಿವಿಧ ಇಲಾಖೆಗಳಿಂದ ಸಾಮಗ್ರಿ ವೆಚ್ಚ, ಎಲ್ಲ ಪಂಚಾಯಿತಿಗಳಿಗೆ 10 ಕೋಟಿ ರೂ. ಸಾಮಗ್ರಿ ವೆಚ್ಚ ಬಿಡುಗಡೆ ಮಾಡುವಂತೆ ಹಾಗೂ ತಾಲೂಕಿನಲ್ಲಿ ಸರ್ಕಾರದಿಂದ ಹಂಚಿಕೆಯಾದ ನಿವೇಶನಗಳನ್ನು ಗ್ರಾಮಠಾಣವನ್ನಾಗಿ ಪರಿವರ್ತಿಸಿ, ಎ-ಖಾತಾ ಮಾಡಿಕೊಡುವಂತೆ ಸಿಇಒಗೆ ಮನವಿ ಮಾಡಿದರು.
    ತಾಪಂ ಇಒ ಟಿ.ಪ್ರದೀಪ್, ಮಾಜಿ ಅಧ್ಯಕ್ಷರಾದ ಜಯಶಂಕರ್, ಬಿ.ಎನ್.ಸಿದ್ದಪ್ಪ, ಮಾಜಿ ಸದಸ್ಯ ನಾಗಣ್ಣ, ಪಂಚಾಯಿತಿ ಆಡಳಿತಾಧಿಕಾರಿ ವಿ. ಚರಣ್‌ರಾಜ್, ಪಿಡಿಒ ಬಿ.ಕೆ. ಗೋಮತಿ, ಕಾರ್ಯದರ್ಶಿ ಬಿ.ಕೆ. ರಾಮಕೃಷ್ಣಪ್ಪ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts