More

    5ನೇ ಬಾರಿಗೆ ಹಾರಿಬಂದ ವಿದೇಶಿ ಹಕ್ಕಿ

    ಲಕ್ಷ್ಮೇಶ್ವರ: ಗದಗ ಜಿಲ್ಲೆ ಮಾಗಡಿ ಕೆರೆ ಪಕ್ಷಿಧಾಮಕ್ಕೆ 2 ಪರ್ವತ ಹೆಬ್ಬಾತುಗಳು ಮಂಗೋಲಿಯಾದಿಂದ ಸತತ 5ನೇ ಬಾರಿಗೆ ವಲಸೆ ಬಂದಿದ್ದು ಪಕ್ಷಿ ಪ್ರಿಯರಲ್ಲಿ ಸಂತಸ ಮೂಡಿಸಿದೆ.
    ಪಿ79 ನಂಬರಿನ ಹೆಬ್ಬಾತು 2015ರಿಂದ 2019ರವರೆಗೆ ಪ್ರತಿವರ್ಷ ವಲಸೆ ಬಂದಿತ್ತು.

    ಪಿ91 ನಂಬರಿನ ಹಸಿರು ಕೊರಳಪಟ್ಟಿಯ ಪರ್ವತ ಹೆಬ್ಬಾತು 2019ರಿಂದ 2023ರವರೆಗೆ ಸತತ 5ನೇ ಬಾರಿ ವಲಸೆ ಬಂದಿರುವುದು ಮಾಗಡಿ ಕೆರೆಯಲ್ಲಿ ದಾಖಲಾಗಿದೆ.

    ಚಳಿಗಾಲಕ್ಕೆ ವಿದೇಶದಿಂದ ಪರ್ವತ ಹೆಬ್ಬಾತುಗಳು ಕರ್ನಾಟಕದ ವಿವಿಧ ಜೌಗು ಪ್ರದೇಶಗಳಿಗೆ ವಲಸೆ ಬರುವುದು ವಿಶೇಷ.

    ಈ ವಲಸೆ ಹಕ್ಕಿಗಳ ಮಾರ್ಗ ತಿಳಿಯಲೆಂದು ಮಂಗೋಲಿಯಾದ ಪಕ್ಷಿತಜ್ಞ, ವಿಜ್ಞಾನಿ ಡಾ. ಗಿಲ್‌ಬರ್ಟ್ ತಂಡವು ಕೆಲವೊಂದು ಹೆಬ್ಬಾತುಗಳಿಗೆ ಸಂಖ್ಯೆಗಳನ್ನೊಳಗೊಂಡ ಕೊರಳ ಪಟ್ಟಿಗಳನ್ನು ಹಾಕಿದ್ದರು.

    ಇಂತಹ ಸಂಖ್ಯೆ ಹೊಂದಿರುವ ಹೆಬ್ಬಾತುಗಳ ದಾಖಲೀಕರಣವನ್ನು ಗದಗ ಜಿಲ್ಲೆಯ ಜೀವವೈಧ್ಯ ಸಂಶೋಧಕ ಮಂಜುನಾಥ ಎಸ್. ನಾಯಕ, ಸಂಗಮೇಶ ಕಡಗದ, ಶರಣು ಗೌಡ ಮತ್ತು ಹರೀಶ ಎನ್. ಅವರ ಮಾರ್ಗದರ್ಶನದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಸಹಕಾರದಿಂದ 2012ರಿಂದ ಮಾಡಲಾಗುತ್ತಿದೆ.

    ಸಾವಿರಾರು ಹಕ್ಕಿಗಳ ವಲಸೆ

    ಈ ವಲಸೆ ಹೆಬ್ಬಾತುಗಳು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ (15000ಕ್ಕೂ ಅಧಿಕ ಸಂಖ್ಯೆ) ಮಾಗಡಿ ಕೆರೆಗೆ ವಲಸೆ ಬರುವುದನ್ನು ಅರಣ್ಯ ಇಲಾಖೆ ಸಿಬ್ಬಂದಿ ದಾಖಲಿಸಿದ್ದಾರೆ.

    ಕರ್ನಾಟಕವಷ್ಟೆ ಅಲ್ಲದೆ ವಿವಿಧ ರಾಜ್ಯದಿಂದ ಬರುವ ಪಕ್ಷಿಪ್ರೇಮಿ/ಛಾಯಗ್ರಾಹಕರು ಸೆರೆ ಹಿಡಿಯುವ ಪೋಟೊಗಳನ್ನು ಸಂಗ್ರಹಿಸುವ ಕೆರೆಯ ವೀಕ್ಷಕ ಸೋಮಪ್ಪ ಪಶುಪತಿಹಾಳ ಇಲಾಖೆಯ ರಿಜಿಸ್ಟರ್‌ನಲ್ಲಿ ಪಕ್ಷಿಗಳ ಬಗ್ಗೆ ಮಾಹಿತಿ ದಾಖಲಿಸಿದ್ದಾರೆ.

    2012ರಿಂದ ಕೊರಳ ಪಟ್ಟಿ ಹೊಂದಿರುವ ಹೆಬ್ಬಾತುಗಳನ್ನು ದಾಖಲಿಸಿದ್ದಾರೆ.

    ಈ ವರದಿ ಪರಿಶೀಲಿಸಿದ ಮಂಜುನಾಥ ನಾಯಕ ಮತ್ತು ಕನಕಪುರದ ಪಕ್ಷಿ ವೀಕ್ಷಕ ಹರೀಶ ಎನ್. ಮಂಗೋಲಿಯಾದ ವಿಜ್ಞಾನಿ ಡಾ.ಗಿಲ್‌ಬರ್ಟ್ ಅವರನ್ನು ಸಂಪರ್ಕಿಸಿ ಹೆಬ್ಬಾತುಗಳ ವಿವರ ಪಡೆದಿದ್ದಾರೆ.

    ಪರ್ವತ ಹೆಬ್ಬಾತುಗಳ ಆಗಮನ

    ಕರ್ನಾಟಕದ ಇತರ ಜೌಗು ಪ್ರದೇಶಗಳಿಗಿಂತ ಮಾಗಡಿಗೆ ಇಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪರ್ವತ ಹೆಬ್ಬಾತುಗಳು ವಲಸೆ ಬಂದಿವೆ.

    2012 ರಿಂದ 2023 ರವರೆಗೆ 170ಕ್ಕೂ ಹೆಚ್ಚು ಹೆಬ್ಬಾತುಗಳು ದಾಖಲಾಗಿರುವುದು ಕರ್ನಾಟಕದಲ್ಲಿಯೇ ಅತಿ ಹೆಚ್ಚು.

    ಈ ಪೈಕಿ ಕೆಲವು ಪಕ್ಷಿಗಳು 3 ಬಾರಿ, 4 ಬಾರಿ ವಲಸೆ ಬಂದಿವೆ.

    ಪಿ 91 ನಂಬರಿನ ಹಸಿರು ಕೊರಳಪಟ್ಟಿ ಹೊಂದಿರುವ ಪರ್ವತ ಹೆಬ್ಬಾತು, ರೇಡಿಯೋ ಕಾಲರ್ ತೊಡಿಸಿರುವ ಹೆಬ್ಬಾತು ಪದೇಪದೆ ವಲಸೆ ಬಂದಿವೆ.

    ಮಂಗೋಲಿಯಾದಲ್ಲಿ 2019ರಲ್ಲಿ ಎಫ್ 71 ನಂಬರಿನ ಎ ಟ್ಯಾಗ್ ಕಟ್ಟಿದ್ದ ಹೆಬ್ಬಾತು ಪ್ರಸಕ್ತ ಸಾಲಿನವರೆಗೂ ಮಾಗಡಿ ಕೆರೆಗೆ ವಲಸೆ ಬಂದಿದೆ.

    ಕೊರಳಪಟ್ಟಿ ಧರಿಸಿದ ಹೆಬ್ಬಾತುಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾಗಡಿ ಕೆರೆಗೆ ಬರುವುದು ಈ ಕೆರೆಯ ಆರೋಗ್ಯ ಮಟ್ಟವನ್ನು ತೋರಿಸುತ್ತದೆ. ಮಾಗಡಿ ಕೆರೆಯ ಪರಿಸರ ಅತ್ಯುತ್ತಮ ಮತ್ತು ವಲಸೆಗೆ ಅತಿ ಸುರಕ್ಷಿತವಾಗಿದೆ. ಹೀಗಾಗಿ ಹೆಬ್ಬಾತುಗಳು ಪ್ರತಿವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತವೆ.
    ಮಂಜುನಾಥ ಎಸ್. ನಾಯಕ, ಜೀವವೈವಿಧ್ಯ ವಿಜ್ಞಾನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts