More

    ಎಚ್.ಡಿ.ಕೋಟೆ ತಾಲೂಕಿನಲ್ಲಿ 2825 ಸ್ವಸಹಾಯ ಸಂಘ ರಚನೆ

      ಎಚ್.ಡಿ.ಕೋಟೆ: ತಾಲೂಕಿನಲ್ಲಿ ಇದುವರೆಗೂ 2825 ಸ್ವ ಸಹಾಯ ಸಂಘಗಳನ್ನು ರಚಿಸಲಾಗಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿಸಿ ಟ್ರಸ್ಟ್ ಪ್ರಾದೇಶಿಕ ನಿರ್ದೇಶಕ ಜಯರಾಮ ನೆಲ್ಲಿತ್ತಾಯ ಮಾಹಿತಿ ನೀಡಿದರು.

      ಪಟ್ಟಣದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಚೇರಿಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ತಾಲೂಕಿನಲ್ಲಿ 2825 ಸಹಾಯ ಸಂಘಗಳಿಂದ ಸುಮಾರು 24,532 ಸದಸ್ಯರಿದ್ದಾರೆ. ಕಳೆದ 12 ವರ್ಷಗಳಲ್ಲಿ ಈ ಸದಸ್ಯರಿಂದ 17. 10 ಕೋಟಿ ಹಣವನ್ನು ಉಳಿತಾಯ ಮಾಡಲಾಗಿದ್ದು, ಎಸ್‌ಬಿಐ ಬ್ಯಾಂಕ್‌ಗಳಲ್ಲಿ ಜಮೆ ಮಾಡಲಾಗಿದೆ ಎಂದು ತಿಳಿಸಿದರು.

      ಸ್ವಸಹಾಯ ಸಂಘದ ಸದಸ್ಯರ ಕೃಷಿ ಅಭಿವೃದ್ಧಿ ಹೈನುಗಾರಿಕೆ ಸ್ವ ಉದ್ಯೋಗ ಹಾಗೂ ಮೂಲಸೌಕರ್ಯಕ್ಕೆ ಬೇಕಾದ ಆರ್ಥಿಕ ಅವಶ್ಯಕತೆಗಳನ್ನು ಪೂರೈಸಲು ಬ್ಯಾಂಕ್‌ಗಳಿಂದ ನೇರ ಸಾಲವನ್ನು ಕಡಿಮೆ ಬಡ್ಡಿ ದರದಲ್ಲಿ ಮನೆ ಬಾಗಿಲಿಗೆ ಸುಲಭ ರೀತಿಯಲ್ಲಿ ಒದಗಿಸುವ ವ್ಯವಸ್ಥೆ ಮಾಡಲಾಗಿದೆ. ಪ್ರಸ್ತುತ ವರ್ಷದಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ನಿಂದ ಸುಮಾರು 121.83 ಕೋಟಿ ರೂ. ಪ್ರಗತಿ ನಿಧಿಯಾಗಿ ಆರ್ಥಿಕ ನೆರವು ಒದಗಿಸಲಾಗಿದೆ. ಶೇ.100ರಷ್ಟು ಮರುಪಾವತಿಯನ್ನು ಸ್ವಸಹಾಯ ಸಂಘದ ಸದಸ್ಯರು ಮಾಡಿದ್ದಾರೆ ಎಂದು ತಿಳಿಸಿದರು.

      ಪ್ರಕೃತಿ ವಿಕೋಪದಿಂದ ಮಳೆಯ ಕೊರತೆ ಉಂಟಾಗಿದ್ದು, ವರ್ಷಗಳು ಕಳೆದಂತೆ ಅಂತರ್ಜಲ ಮಟ್ಟದ ಕುಸಿಯುತ್ತಿದ್ದು, ಪರಿಸರದ ಅಸಮತೋಲನ ಸೃಷ್ಟಿಯಾಗಿದೆ. ಇದರಿಂದ ಪ್ರಾಣಿ, ಪಕ್ಷಿಗಳಿಗೆ ಹಾಗೂ ಮಾನವನ ಬದುಕಿಗೆ ಆತಂಕ ಪರಿಸ್ಥಿತಿ ಎದುರಾಗುವ ಆತಂಕವಿದೆ. ಇದನ್ನು ಮನಗಂಡು ಗ್ರಾಮೀಣ ಜನರು ಗ್ರಾಮ ಪಂಚಾಯಿತಿ ಸಹಭಾಗಿತ್ವದೊಂದಿಗೆ ಕೆರೆಗಳ ಹೂಳೆತ್ತುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದಡಿ ಇದುವರೆಗೂ ತಾಲೂಕಿನಲ್ಲಿ ಮೂರು ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಈ ವರ್ಷದಲ್ಲಿ ಎರಡು ಕೆರೆಗಳನ್ನ ಅಭಿವೃದ್ಧಿ ಪಡಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ವಿವರಿಸಿದರು.

      ಸ್ವಸಹಾಯ ಸಂಘಗಳ ಸದಸ್ಯರಿಗೆ ಪ್ರಗತಿ ರಕ್ಷಾ ಕವಚ ಕಾರ್ಯಕ್ರಮದ ರೂಪದಲ್ಲಿ ಸಾಲ ಪಡೆದು ಮರುಪಾವತಿ ಸಮಸ್ಯೆ ಇರುವಾಗ ಜೀವ ಭದ್ರತೆ ಒದಗಿಸುವ ಯೋಜನೆಯನ್ನು ರೂಪಿಸಲಾಗಿದೆ. ಜತೆಗೆ ಜಲಮಂಗಲ ಕಾರ್ಯಕ್ರಮದ ಮೂಲಕ ವಿಕಲಚೇತನರಿಗೆ ವ್ಹೀಲ್ ಚೇರ್ ಊರುಗೋಲು, ವಾಟರ್ ಬೆಡ್‌ಗಳನ್ನು ಒದಗಿಸಿಕೊಡಲಾಗಿದೆ. ಇದುವರೆಗೂ ತಾಲೂಕಿನಲ್ಲಿ ಒಟ್ಟು 235 ಜನ ವಿಕಲಚೇತನರಿಗೆ ಈ ಸೌಲಭ್ಯಗಳನ್ನು ಒದಗಿಸಿಕೊಡಲಾಗಿದೆ ಎಂದು ತಿಳಿಸಿದರು.

      ಸ್ವಸಹಾಯ ಸಂಘಗಳ ಬಲವರ್ಧನೆ ಒತ್ತು: ಮುಂದಿನ ದಿನಗಳಲ್ಲಿ ಸ್ವಸಹಾಯ ಸಂಘಗಳ ಬಲವರ್ಧನೆಗೆ ಹೆಚ್ಚಿನ ಒತ್ತು ನೀಡಲಾಗುವುದು. ಅನಕ್ಷರಸ್ಥರಿರುವ ಪ್ರದೇಶಗಳಲ್ಲಿ ಮಹಿಳಾ ಸಾಕ್ಷರತೆಯನ್ನು ಹೆಚ್ಚಿಸುವುದು, ಪರಿಸರ ಕಾರ್ಯಕ್ರಮ ಗ್ರಾಮ ಸುಭಿಕ್ಷೆ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗಿದೆ. ಅಲ್ಲದೆ ಹಾಡಿಗಳಲ್ಲಿನ ಜೇನು ಕುರುಬರು ಹಾಗೂ ಇನ್ನಿತರ ಬುಡಕಟ್ಟು ಜನಾಂಗಗಳಿರುವ ಪ್ರದೇಶಗಳಲ್ಲಿ ಸ್ವಸಹಾಯ ಸಂಘಗಳನ್ನು ಮತ್ತು ಜ್ಞಾನ ವಿಕಾಸ ಕೇಂದ್ರ ರಚನೆ ಮಾಡಿ ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣಕ್ಕೆ ಆದ್ಯತೆ ನೀಡಲಾಗುವುದು ಎಂದು ಜಯರಾಮ ನೆಲ್ಲಿತ್ತಾಯ ತಿಳಿಸಿದರು.

      ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ವಿಜಯಕುಮಾರ್ ನಾಗನಾಳ, ತಾಲೂಕು ಯೋಜನಾಧಿಕಾರಿ ವಿ.ಭಾಸ್ಕರ್ ಹಾಜರಿದ್ದರು.

      ಸಿನಿಮಾ

      ಲೈಫ್‌ಸ್ಟೈಲ್

      ಟೆಕ್ನಾಲಜಿ

      Latest Posts