

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿಗಳು ಇದೀಗ ಅಂತಿಮ ಘಟಕ್ಕೆ ಬಂದಿದ್ದು, ಆರು ಸರ್ಧಿಗಳು ಫಿನಾಲೆ ಹಂತವನ್ನು ಯಶಸ್ವಿಯಾಗಿ ತಲುಪಿದ್ದಾರೆ. ಪ್ರತಾಪ್, ಸಂಗೀತಾ, ಕಾರ್ತಿಕ್, ವಿನಯ್, ತುಕಾಲಿ ಸಂತೋಷ್ ಮತ್ತು ವರ್ತೂರು ಸಂತೋಷ್ ಗೆಲುವಿನ ಕಿರೀಟಕ್ಕೆ ಭಾರೀ ಪೈಪೋಟಿ ನಡೆಸುತ್ತಿದ್ದಾರೆ. ಇಷ್ಟು ದಿನವಿದ್ದ ಜಗಳ, ಮಾತಿನ ಜಟಾಪಟಿ ಸದ್ಯ ಫಿನಾಲೆ ವಾರದಲ್ಲೂ ಮುಂದುವರೆದಿದ್ದು, ಪ್ರತಾಪ್-ವಿನಯ್ ಮಧ್ಯೆ ಬಾಕ್ಸಿಂಗ್ ಮಾತು ಜೋರಾಗಿದೆ.
ಬಿಗ್ ಬಾಸ್ ಏರ್ಪಡಿಸಿದ್ದ ಕಿಕ್ ಬಾಕ್ಸಿಂಗ್ ಅಖಾಡದಲ್ಲಿ ಮನೆಯ ಸ್ಪರ್ಧಿಗಳು ತಮ್ಮ ಪ್ರತಿಸ್ಪರ್ಧಿಯ ಕುರಿತು ಹೇಳಬೇಕಾದ ವಿಷಯವನ್ನು ಬಾಕ್ಸಿಂಗ್ ಗ್ಲೌಸ್ ಧರಿಸಿ, ಗುದ್ದಿ ತಿಳಿಸಬೇಕಿದೆ. ಈ ಸಾಲಿನಲ್ಲಿ ನಿಂತ ವಿನಯ್, ಪ್ರತಾಪ್ ವಿರುದ್ಧ ಗುಡುಗಿದ್ದು, ನನ್ನ ಬಗ್ಗೆ ಸರಿಯಾಗಿ ಮಾತನಾಡುವುದನ್ನು ಕಲಿ ಎಂದು ಪಂಚ್ ಮಾಡುವ ಮೂಲಕ ಹೇಳಿದ್ದಾರೆ.
ಇದಕ್ಕೆ ಅಖಾಡದಲ್ಲಿ ಪ್ರತಿಕ್ರಿಯಿಸಿದ ಪ್ರತಾಪ್, "ನಿಮ್ಮ ಕೂಗಾಟಕ್ಕೆ ಹೆದರುವವರು ಯಾರು ಇಲ್ಲ. ನೀವು ಅತ್ತರೇ ಅದು ಪ್ರೀತಿ, ನಾನು ನನ್ನ ತಂದೆ-ತಾಯಿ ನೆನೆದು ಅತ್ತರೇ ಅದು ಸಿಂಪಥಿ. ಅಯ್ಯೋ ಭಯ ವಿನಯ್ ಅಣ್ಣ, ಆಗ್ತಿಲ್ಲಾ ಅಣ್ಣ...ಕೇಳಿ ನೀವು, ಕೇಳಲೇಬೇಕು ನೀವು ಇವತ್ತು" ಎಂದು ತೀವ್ರ ವಾಗ್ವಾದ ನಡೆಸಿದ್ದಾರೆ. ಈ ಮಾತುಗಳಿಗೆ ವಿನಯ್ ಹೇಳಿದ್ದೇನು? ಎಂಬುದನ್ನು ಇಂದಿನ ಸಂಚಿಕೆಯಲ್ಲಿ ತಿಳಿಯಬೇಕಿದೆ.