

ಬೆಂಗಳೂರು: ಯೋಗರಾಜ್ ಭಟ್ ನಿರ್ದೇಶನದ 'ಗರಡಿ' ಸಿನಿಮಾ ಇಂದು ರಾಜ್ಯಾದ್ಯಂತ ಬಹುತೇಕ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ತೆರೆ ಕಂಡಿದೆ. ಈ ಸಿನಿಮಾದ ಪ್ರೀಮಿಯರ್ ಶೋ ನೋಡಿದ ಸೆಲೆಬ್ರಿಟಿಗಳ ಪೈಕಿ ನಟ ಪ್ರಥಮ್ ಕೂಡ ವೀಕ್ಷಿಸಿದ್ದು, ಸಿನಿಮಾ ಹೇಗಿದೆ ಎಂಬುದನ್ನು ತಿಳಿಸುವುದರ ಜತೆಗೆ ತಾವು ಬಿಗ್ಬಾಸ್ ಕಾರ್ಯಕ್ರಮಕ್ಕೆ ಹೋಗಲು ಹೆಚ್ಚು ಸಹಾಯ ಮಾಡಿದ ಕಲಾವಿದರೊಬ್ಬರ ಹೆಸರನ್ನು ಕೂಡ ಹೇಳಿದ್ದಾರೆ.
ಯಶಸ್ ಸೂರ್ಯ, ಸೋನಲ್ ಮೊಂತೆರೋ ಮುಖ್ಯಭೂಮಿಕೆಯಲ್ಲಿ ಅಭಿನಯದ ಗರಡಿ ಚಿತ್ರವನ್ನು ನೋಡಿದ ಪ್ರಥಮ್, "ಸೋನಲ್ ಅವರು ನಮ್ಮ ಮೊದಲ ಸಿನಿಮಾ 'ಎಂಎಲ್ಎ'ಯಿಂದಲೂ ನನಗೆ ಒಳ್ಳೆ ಸ್ನೇಹಿತೆ. ತುಂಬ ಪ್ರತಿಭಾವಂತ ನಟಿ, ಉತ್ತಮವಾಗಿ ನಟನೆ ಮಾಡಿದ್ದಾರೆ. ಸಿನಿಮಾ ವಿಚಾರವಾಗಿ ಹೊರತುಪಡಿಸಿದರೆ ಅನಾವಶ್ಯಕವಾಗಿ ಸೋನಲ್ ಮಾಧ್ಯಮದಲ್ಲಿ ಕಾಣಿಸಿಕೊಳ್ಳುವುದಿಲ್ಲ" ಎಂದರು.
"ಪ್ರೀತಿ-ಪ್ರೇಮ ಕಥೆಯನ್ನು ಬಿಟ್ಟು ಈ ಬಾರಿ ಬೇರೇನೆ ಮಾಡಿದ್ದಾರೆ ಯೋಗರಾಜ್ ಭಟ್ ಸರ್, ಯಶಸ್ ಅವರ ತಾಳ್ಮೆಗೆ ಈ ಚಿತ್ರವನ್ನು ನೋಡಲೇಬೇಕು. ಚಿತ್ರದ ತೀರ ಬೆಸ್ಟ್ ಎಲಿಮೆಂಟ್ ಅಂದ್ರೆ ಅದು ದರ್ಶನ್ ಸರ್. ಭಟ್ಟರು ನನಗೆ ಬಿಗ್ಬಾಸ್ಗೆ ಹೋಗಲು ದೊಡ್ಡ ಸಹಾಯ ಮಾಡಿದವರು. ಈ ಸಿನಿಮಾಗೆ ಅವರು ಹಾಕಿರುವ ಶ್ರಮ ದೊಡ್ಡ ಮಟ್ಟದಲ್ಲಿದೆ. ಚಿತ್ರತಂಡಕ್ಕೆ ಒಳ್ಳೇದಾಗಲಿ" ಎಂದು ಶುಭ ಹಾರೈಸಿದರು.