

ಮಂಗಳೂರು: ಕೊಂಕಣಿ ಎಲ್ಲಾ ವರ್ಗದವರು ಮಾತನಾಡುವ ಸುಂದರ ಭಾಷೆ. ಅದೊಂದು ವಿಶೇಷ ಮಾನ್ಯತೆ ಪಡೆದ ಭಾಷೆ ಎಂದು ಕೊಂಕಣಿ ಭಾಷಾ ಮಂಡಳ ಕರ್ನಾಟಕದ ಕಾರ್ಯಕಾರಿ ಸದಸ್ಯ, ಸ್ವರ್ಣ ಉದ್ಯಮಿ ಪ್ರಶಾಂತ್ ಶೇಟ್ ಹೇಳಿದರು.
ಮಂಗಳೂರಿನ ಶ್ರೀನಿವಾಸ್ ವಿವಿಯಿಂದ ಕೊಂಕಣಿಯಲ್ಲಿ ರಾಜ್ಯದಲ್ಲಿಯೇ ಮೊದಲ ಬಾರಿಗೆ ಪಿಎಚ್ಡಿ ಪದವಿ ಪಡೆದ ಪ್ರೇಮ್ ಮೊರಾಸ್ ಅವರನ್ನು ನಗರದ ಪ್ರೆಸ್ಕ್ಲಬ್ನಲ್ಲಿ ಬುಧವಾರ ಸನ್ಮಾನಿಸಿ, ಅವರು ಮಾತನಾಡಿದರು.
ಕೊಂಕಣಿ ಭಾಷೆಗೆ ಸಂವಿಧಾನದ ಮಾನ್ಯತೆ ಬರಲು ಸಾಕಷ್ಟು ಮಂದಿ ವಿಶೇಷವಾದ ಕೊಡುಗೆಯನ್ನು ನೀಡಿದ್ದಾರೆ. ಕೊಂಕಣಿ ಭಾಷಿಗರಲ್ಲಿ ಉದ್ಯಮಿಗಳು, ವೈದ್ಯರು, ಐಎಎಸ್ ಅಧಿಕಾರಿಗಳು ಸೇರಿದಂತೆ ದೊಡ್ಡ ದೊಡ್ಡ ಕೈಗಾರಿಕೋದ್ಯಮಿಗಳು ಮಾತನಾಡುತ್ತಾರೆ. ಕೊಂಕಣಿ ಭಾಷೆ ಸಮೃದ್ಧವಾಗಿದೆ ಎಂದರು.
ಪ್ರೇಮ್ ಮೊರಾಸ್ ಮಾತನಾಡಿ,‘ಗೋವಾದಿಂದ ಮಂಗಳೂರಿಗೆ ವಲಸೆ ಹೋದ ಕೊಂಕಣಿಗರ ಒಂದು ಅಧ್ಯಯನ’ದಲ್ಲಿ ಡಾ.ಅರವಿಂದ್ ಶಾನುಭಾಗ್ ಅವರ ಮಾರ್ಗದರ್ಶನದಲ್ಲಿ ಕೊಂಕಣಿ ಭಾಷೆಯಲ್ಲಿ ಪಿಎಚ್ಡಿ ಮಾಡಿದ್ದೇನೆ. ಕಳೆದ ನಾಲ್ಕು ವರ್ಷಗಳಿಂದ ಇದಕ್ಕಾಗಿ ಶ್ರಮಿಸಿದ್ದೇನೆ. ಕೊಂಕಣಿ ಭಾಷೆಗೊಂದು ಇದೊಂದು ವಿಶೇಷ ಕೊಡುಗೆಯಾಗಿದೆ. ಇದನ್ನು ಶೀಘ್ರದಲ್ಲಿಯೇ ಕೃತಿ ರೂಪಕ್ಕೆ ಇಳಿಸುವ ಕೆಲಸ ಮಾಡುತ್ತೇನೆ ಎಂದರು.
ಈ ಸಂದರ್ಭ ಕೊಂಕಣಿ ಭಾಷಾ ಮಂಡಳ ಕರ್ನಾಟಕದ ಅಧ್ಯಕ್ಷ ಕೆ.ವಸಂತ ರಾವ್, ಕಾರ್ಯದರ್ಶಿ ರೇಮಂಡ್ ಡಿಕುನ್ಹಾ, ಸಹ ಕಾರ್ಯದರ್ಶಿ ಜೂಲಿಯೆಟ್ ಮೊರಾಸ್ ಮತ್ತು ಡಾ.ಅರವಿಂದ್ ಶಾನುಭಾಗ್ ಉಪಸ್ಥಿತರಿದ್ದರು.