

ಮಂಗಳೂರು: ಪ್ರಾಣಾಯಾಮವು ಭಾರತದಲ್ಲಿನ ಯೋಗಾಭ್ಯಾಸಗಳಿಂದ ಹುಟ್ಟಿಕೊಂಡ ಒಂದು ಪ್ರಾಚೀನ ಉಸಿರಾಟದ ತಂತ್ರ. ಮನಸ್ಸಿನ ನಿಯಂತ್ರಣಕ್ಕೆ ಪ್ರಾಣಾಯಾಮ ಸಹಕಾರಿ ಎಂದು ಯೋಗ ಶಿಕ್ಷಕ ಜಗನಾಥ ಕರ್ಕೇರಾ ಹೇಳಿದರು.
ಸುರತ್ಕಲ್‌ನ ಆಶ್ರಯ ಮಹಿಳಾ ವೇದಿಕೆ ಸಹಯೋಗದಲ್ಲಿ ಕಡಂಬೋಡಿಯಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಾಣಾಯಾಮ ವಿಭಿನ್ನ ಶೈಲಿಗಳಲ್ಲಿ ನಿಮ್ಮ ಉಸಿರಾಟವನ್ನು ನಿಯಂತ್ರಿಸುವುದನ್ನು ಒಳಗೊಂಡಿರುತ್ತದೆ. ಪ್ರಾಣಾಯಾಮ ಅಭ್ಯಾಸದಿಂದ ಬರುವ ಅನೇಕ ಆರೋಗ್ಯ ಪ್ರಯೋಜನಗಳಿಂದಾಗಿ ಇದು ಇತ್ತೀಚೆಗೆ ಪಾಶ್ಚಿಮಾತ್ಯ ಜಗತ್ತಿನಲ್ಲಿ ಜನಪ್ರಿಯತೆ ಗಳಿಸಿದೆ. ಪ್ರಾಣಾಯಾಮವನ್ನು ಸಾಮಾನ್ಯವಾಗಿ ಯೋಗದ ಜೊತೆಗೆ ಅಭ್ಯಾಸ ಮಾಡಲಾಗುತ್ತದೆ. ಇದನ್ನು ಯೋಗದ ನಾಲ್ಕನೇ ಅಂಗ ಎಂದು ಕರೆಯಲಾಗುತ್ತದೆ. ಯೋಗ ತಂತ್ರಗಳು ರೋಗಲಕ್ಷಣಗಳನ್ನು ಕಡಿಮೆ ಮಾಡುವುದಲ್ಲದೇ ನೈಜ ಕಾರಣವನ್ನು ತೆಗೆದು ಹಾಕುವಲ್ಲಿ ಸಹಕಾರಿಯಾಗುವುದು ಎಂದರು.
ಪ್ರಮುಖರಾದ ಓಂ ಪ್ರಕಾಶ್ ಶೆಟ್ಟಿಗಾರ್, ಮಹಾಬಲ ಪೂಜಾರಿ ಕಡಂಬೋಡಿ, ಕುಳಾಯಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸುರಕ್ಷಾ ಅಧಿಕಾರಿ ಶ್ವೇತಾ, ಮಹಿಳಾ ವೇದಿಕಯ ಗೌರವಾಧ್ಯಕ್ಷ ರಾದ ಕುಸುಮ ಪೂಜಾರಿ ಮತ್ತು ಅಧ್ಯಕ್ಷೆ ಸುಮತಿ ಹಂದೆ, ಅನುರಾಧ ರಾಜೀವ್, ಶಕುಂತಲಾ ಶೆಟ್ಟಿ, ಆಶಾಲತಾ, ರತ್ನ ಮತ್ತಿತರರು ಉಪಸ್ಥಿತರಿದ್ದರು.
ಗೀತಾಜಯ ಯೋಗ ಪ್ರಾತ್ಯಕ್ಷಿಕೆ ನಡೆಸಿದರು, ಕಾರ್ಯದರ್ಶಿ ವಿನುತಾ ಶೆಟ್ಟಿ ಅತಿಥಿ ಪರಿಚಯಿಸಿದರು, ಉಪಾಧ್ಯಕ್ಷೆ ಸುಚಿತ್ರ ವಂದಿಸಿದರು. ಸಂಗೀತ ಓಂ ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು. ಮೊದಲಾದವರು ಉಪಸ್ಥಿತರಿದ್ದರು.
----------
ಯೋಗಾಭ್ಯಾಸವನ್ನು ನಿರಂತರವಾಗಿ ಮಾಡುವುದರಿಂದ ಮಾನಸಿಕ ಒತ್ತಡದಂತಹ ಕಾಯಿಲೆಗಳನ್ನು ಸಂಪೂರ್ಣವಾಗಿ ನಿರ್ಮೂಲನ ಮಾಡಲು ಸಾಧ್ಯ. ಕಷ್ಟಕರವಾದ ಯೋಗ ಭಂಗಿಗಳಿಗೆ ದೈಹಿಕ ಮತ್ತು ಮಾನಸಿಕ ತರಬೇತಿಯ ಅಗತ್ಯವಿರುತ್ತದೆ. ಆದ್ದರಿಂದ ಅವುಗಳನ್ನು ಸಾಧಿಸಲು ಸಮಯ ತೆಗೆದುಕೊಳ್ಳುತ್ತದೆ. ತಾಳ್ಮೆ, ಸಮರ್ಪಿತ ಭಾವನೆ ನಿಯಮಿತ ಅಭ್ಯಾಸ ಅಗತ್ಯವಿದೆ.
-ಜಗನಾಥ ಕರ್ಕೇರಾ, ಯೋಗ ಶಿಕ್ಷಕ