ಕಳೆದುಕೊಂಡಿದ್ದನ್ನು ಯಾವತ್ತು ಬೇಕಾದರೂ ಸಂಪಾದಿಸಬಹುದು ... ಸಾಲ ಮಾಡಿ ನೆರವು ಮುಂದುವರೆಸಲು ಪ್ರಕಾಶ್ ರೈ ನಿರ್ಧಾರ

Prakash Raj Final
Published on

ಲಾಕ್‌ಡೌನ್ ಘೋಷಣೆಯಾದಾಗಿನಿಂದ ಬಹುಭಾಷಾ ನಟ ಪ್ರಕಾಶ್ ರೈ, ತಮ್ಮ ಫೌಂಡೇಶನ್ ಮೂಲಕ ಹಲವರಿಗೆ ನೆರವಾಗುತ್ತಲೇ ಇದ್ದಾರೆ. ಹಣಕಾಸಿನ ಸಂಪನ್ಮೂಲಗಳು ಕಡಿಮೆಯಾಗುತ್ತಿರುವುದರಿಂದ, ಸಾಲ ಮಾಡಿಯಾದರೂ ಸಮಾಜ ಸೇವೆಯನ್ನು ಮುಂದುವರೆಸುವುದಾಗಿ ಪ್ರಕಾಶ್ ರೈ ಹೇಳಿಕೊಂಡಿದ್ದಾರೆ.

ಲಾಕ್‌ಡೌನ್ ಪ್ರಾರಂಭವಾದಾಗಿನಿಂದ ಪ್ರಕಾಶ್ ರೈ ಇದುವರೆಗೂ ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ಆಹಾರ ಧಾನ್ಯ ಮತ್ತು ತರಕಾರಿಗಳನ್ನು ಒದಗಿಸಿದ್ದಾರಂತೆ. ಇನ್ನು ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುವವರಿಗೆ ಮುಂಗಡವಾಗಿಯೇ ಸಂಬಳ ನೀಡಿದ್ದಾರಂತೆ. ಈ ಮಧ್ಯೆ, ಅವರಿಗೆ ಹಣಕಾಸಿನ ಸಮಸ್ಯೆ ಎದುರಾಗಿದ್ದು. ಇಂಥ ಸಂದರ್ಭದಲ್ಲಿ ಸಾಲ ಮಾಡಿಯಾದರೂ, ಅಗತ್ಯವಿರುವವರಿಗೆ ನೆರವಾಗುವುದಾಗಿ ಪ್ರಕಾಶ್ ರೈ ಹೇಳಿದ್ದಾರೆ.

ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಅವರು, ‘ನನ್ನ ಹಣಕಾಸಿನ ಸಂಪನ್ಮೂಲಗಳು ಕ್ಷೀಣಿಸುತ್ತಿವೆ. ಸಾಲ ಮಾಡಿ ನೆರವು ಮುಂದುವರೆಸುತ್ತೇನೆ. ಏಕೆಂದರೆ, ನಾನು ಯಾವತ್ತು ಬೇಕಾದರೂ ಕಳೆದುಕೊಂಡಿದ್ದನ್ನು ಸಂಪಾದಿಸಬಹುದು. ಇಂಥ ಕಷ್ಟ ಕಾಲದಲ್ಲಿ ಮನುಷ್ಯತ್ವ ಉಳಿಯಬೇಕಾಗಿರುವುದು ಬಹಳ ಮುಖ್ಯ. ಈ ವಿಷಯದಲ್ಲಿ ಎಲ್ಲರೂ ಕೈಜೋಡಿಸಿ, ಸಾಧ್ಯವಾದಷ್ಟೂ ಸಹಾಯ ಮಾಡೋಣ’ ಎಂದು ಪ್ರಕಾಶ್ ರೈ ಟ್ವೀಟ್ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net