ಪ್ರಜ್ವಲ್ ಪಾಸ್‌ಪೋರ್ಟ್ ರದ್ದು, ಕೇಂದ್ರದಿಂದ ಯಾವುದೇ ಪ್ರತಿಕ್ರಿಯೆ ಇಲ್ಲ: ಪರಮೇಶ್ವರ

Parameswar
Published on

ಬೆಂಗಳೂರು: ಪ್ರಜ್ವಲ್ ರೇವಣ್ಣ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದುಗೊಳಿಸುವ ಕುರಿತ ಪತ್ರಕ್ಕೆ ಕೇಂದ್ರದಿಂದ ಯಾವ ಪ್ರತಿಕ್ರಿಯೆಯೂ ಬಂದಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.

ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾಧ್ಯಮದವರ ಜತೆ ಮಾತನಾಡಿದ ಅವರು, ವಿದೇಶಾಂಗ ಸಚಿವರು, ಇನ್ನೆರಡು ದಿನಗಳಲ್ಲಿ ರದ್ದು ಮಾಡುವುದಾಗಿ ಈ ಬಗ್ಗೆ ಕ್ರಮ ತೆಗೆದುಕೊಳ್ಳುತ್ತಿರುವುದಾಗಿ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿರುವುದನ್ನು ಗಮನಿಸಿದ್ದೇನೆ ಎಂದರು.

ಮುಖ್ಯಮಂತ್ರಿಯವರು ಮೇ 1ರಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಆ ಪತ್ರ ಎಲ್ಲಿ ಹೋಯಿತು? ಮುಖ್ಯಮಂತ್ರಿಯವರ ಪತ್ರ ಪ್ರಧಾನಮಂತ್ರಿಯವರ ಕಚೇರಿಗೆ ಹೋಗುತ್ತದೆ ಎಂದಾದರೆ ಅದಕ್ಕೆ ಗೌರವ ಸಿಗಬೇಕಲ್ಲವೇ? ಕರ್ನಾಟಕ ಮುಖ್ಯಮಂತ್ರಿ, ಈಗ ಪತ್ರ ಬರೆದಿದ್ದಾರೆ ಎಂದು ವಿದೇಶಾಂಗ ಸಚಿವರು ಹೇಳಿರುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸಂತ್ರಸ್ತೆಯರಿಗೆ ರಕ್ಷಣೆ ನೀಡಲು ಬದ್ಧ

ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಹಿತಿಗಳ ಅಸಮಾದಾನ ಕುರಿತ ಪ್ರಶ್ನೆಗೆ, ಸಂತ್ರಸ್ತೆಯರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ರಕ್ಷಣೆ ನೀಡುವುದಾಗಿ ನಾನು ಮತ್ತು ಮುಖ್ಯಮಂತ್ರಿಯವರು ಹೇಳಿದ್ದೇವೆ. ಸಂತ್ರಸ್ತೆಯರನ್ನು ಯಾರು ಕೂಡ ಒತ್ತಾಯ ಮಾಡಿ, ಬೇರೆ ರೀತಿಯಲ್ಲಿ ಬಳಸಿಕೊಳ್ಳಲು ಬಿಡುವುದಿಲ್ಲ. ಸಂತ್ರಸ್ತೆಯರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವಂತೆ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ವಲಯ ಐಜಿಪಿಯವರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ನಾವೂ ಅದೇ ಕೆಲಸ ಮಾಡುತ್ತಿದ್ದೇವೆ

ಪೆನ್‌ಡ್ರೈವ್ ಪ್ರಕರಣದಲ್ಲಿ ನಿಜವಾದ ಆರೋಪಿಗೆ ಶಿಕ್ಷೆಯಾಗಿಸಬೇಕು ಎಂದು ಆಗ್ರಹಿಸಿರುವ ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾವು ಅದೇ ಕೆಲಸವನ್ನು ಮಾಡುತ್ತಿದ್ದೇವೆ.

ನಿಜವಾದ ಆರೋಪಿ ಯಾರು? ಪ್ರಕರಣದಲ್ಲಿ ಪ್ರಜ್ವಲ್ ಪಾತ್ರ ಏನು? ಎಂಬುದಕ್ಕಾಗಿಯೇ ತನಿಖೆ ನಡೆಸಬೇಕು ಎಂಬ ಕಾರಣಕ್ಕಾಗಿಯೇ ಎಸ್‌ಐಟಿ ರಚಿಸಲಾಗಿದೆ. ಗಾಳಿಯಲ್ಲಿ ಗುಂಡು ಹೊಡೆದ ಹಾಗೇ ಯಾರದ್ದೋ ಹೆಸರು ಹೇಳುವ ಅಗತ್ಯವಿಲ್ಲ. ತನಿಖೆ ಆಗುವ ಮುಂಚೇಯೇ ಹೇಳಿಕೆಗಳನ್ನು ನೀಡಿದರೆ ತನಿಖೆಗೆ ತೊಂದರೆಯಾಗುತ್ತದೆ ಎಂದು ಡಾ.ಪರಮೇಶ್ವರ ತಿರುಗೇಟು ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net