

ಹರಿಪ್ರಸಾದ್ ನಂದಳಿಕೆ ಶಿರ್ವ
ಶಿರ್ವದಿಂದ ಕಟಪಾಡಿ ಉಡುಪಿ ಸಾಗುವ ಪ್ರಮುಖ ಹೆದ್ದಾರಿ ಪಂಜಿಮಾರು ಎಂಬಲ್ಲಿ ರಸ್ತೆ ಅಗೆದು ಮೋರಿ ಹಾಕಿ ಹೊಸ ರಸ್ತೆ ನಿರ್ಮಾಣ ಕಾಮಗಾರಿ ಆರಂಭಗೊಂಡು 8 ತಿಂಗಳು ಕಳೆದರೂ ಅರೆಬರೆ ಕಾಮಗಾರಿಯಿಂದ 200 ಮೀ ರಸ್ತೆ ಸಂಪೂರ್ಣ ಹೊಂಡಗುಂಡಿಗಳಿಂದ ಕೂಡಿದ್ದು, ವಾಹನ ಸವಾರರು ಸಹಿತ ಪಾದಚಾರಿಗಳು ನರಕಯಾತನೆ ಪಡುವಂತಾಗಿದೆ.
ಮಳೆಗಾಲ ಆರಂಭದ ಮುನ್ಸೂಚನೆ ಇದ್ದರೂ ಗುತ್ತಿಗೆದಾರರು ನಿಧಾನಗತಿಯಲ್ಲಿ ಕಾಮಗಾರಿ ನಿರ್ವಹಿಸಿದ ಪರಿಣಾಮ ಮುಂಗಾರಿನ ಮೊದಲ ಮಳೆಗೆ ಮಣ್ಣಿನ ರಸ್ತೆ ಸಂಪೂರ್ಣ ಕೆಸರು ಗದ್ದೆಯಂತಾಗಿದೆ. ಅದೇ ರಸ್ತೆಯಲ್ಲಿ ಓಡಾಡುವ ಅನಿವಾರ್ಯತೆಯಿಂದ ಸಂಚಾರದ ವೇಳೆ ವಾಹನಗಳು ಕೆಸರಿನಲ್ಲಿ ಹೂತು ಹೋಗಿ ರಸ್ತೆ ಮಧ್ಯದಲ್ಲೇ ಬಾಕಿಯಾಗುತ್ತಿದ್ದು, ರಾತ್ರಿ ವೇಳೆ ರಸ್ತೆ ಸ್ಥಿತಿ ಗೊತ್ತಿಲ್ಲದೆ ಸಾಕಷ್ಟು ಬೈಕ್ ಸವಾರರು ಬಿದ್ದು ಗಾಯಗೊಂಡ ನಿದರ್ಶನ ಇದೆ. ಬಳಿಕ ಇಡೀ ರಸ್ತೆ ಬಂದ್ ಮಾಡಿ ಪಾಲಮೆ ರಸ್ತೆ ಮೂಲಕ ಸಾಗಿ ಬಂಟಕಲ್ಲು ಸಂಪರ್ಕಿಸಿ ಉಡುಪಿಯತ್ತ ವಾಹನ ಸಾಗಿದವು. ಆ ಬಳಿಕ ಎಚ್ಚೆತ್ತ ಗುತ್ತಿಗೆದಾರ ರಸ್ತೆಗೆ ಜಲ್ಲಿ ಹಾಕಿ ಸಮತಟ್ಟು ಮಾಡಿದರೂ ಇದೀಗ ಕಳೆದೊಂದು ತಿಂಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದ ರಸ್ತೆಯುದ್ದಕ್ಕೂ ಹೊಂಡ ಗುಂಡಿ ನಿರ್ಮಾಣವಾಗಿ ಮತ್ತೆ ವಾಹನ ಸವಾರರಿಗೆ ಸಂಕಟ ಎದುರಾಗಿದೆ.
ಇದೀಗ ಪದೇಪದೆ ರಸ್ತೆಯಲ್ಲಿ ಹೆಚ್ಚುತ್ತಿರುವ ಹೊಂಡ ಮುಚ್ಚಲು ಆಗಾಗ ಜಲ್ಲಿಕಲ್ಲುಗಳನ್ನು ರಸ್ತೆಗೆ ಹಾಕಿ ಡೋಜಾರ್ ಮೂಲಕ ಸಮತಟ್ಟು ಮಾಡಲಾಗುತ್ತಿದ್ದರೂ ಹಾಕಿದ ಜಲ್ಲಿ ಒಂದೇ ಮಳೆಗೆ ಚೆಲ್ಲಾಪಿಲ್ಲಿಯಾಗಿ ಮಳೆ ನೀರಿನ ಜತೆ ಚರಂಡಿ ಸೇರುತ್ತಿದೆ. ಹೀಗಾಗಿ ಎಷ್ಟು ಬಾರಿ ಜಲ್ಲಿ ಹಾಕಿದರೂ ರಸ್ತೆ ಹೊಂಡಗಳ ಸಂಖ್ಯೆ ಮಾತ್ರ ಇನ್ನೂ ಕಡಿಮೆಯಾಗಿಲ್ಲ.
ಈ ರಸ್ತೆಯಲ್ಲಿ ಹೊರ ಜಿಲ್ಲೆಯ ಹಾಗೂ ಹೊರ ರಾಜ್ಯದ ಪ್ರವಾಸಿ ವಾಹನ ಹೆಚ್ಚಾಗಿ ಓಡಾಡುತ್ತಿದ್ದು, ಹೊಸದಾಗಿ ಈ ರಸ್ತೆಯಲ್ಲಿ ಸಂಚಾರ ನಡೆಸುವ ವಾಹನ ಸವಾರರು ಎಡವಟ್ಟು ಮಾಡಿಕೊಳ್ಳುವಂತಾಗಿದೆ. ವೇಗವಾಗಿ ಬರುವ ವಾಹನಗಳು ಸಡನ್ ಬ್ರೇಕ್ ಹಾಕುವುದರಿಂದಲೂ ಸಾಕಷ್ಟು ಬಾರಿ ಅಪಘಾತಕ್ಕೆ ಕಾರಣ ತಂದೊಡ್ಡುತ್ತಿದೆ. ಅಲ್ಲದೆ ರಸ್ತೆಯೂ ತೀರ ಹದಗೆಟ್ಟಿದ್ದರೂ ರಸ್ತೆಯ ಎರಡೂ ಬದಿಯಲ್ಲಿ ಎಲ್ಲೂ ಕಾಮಗಾರಿ ನಡೆಯುವ ಬಗ್ಗೆ ಹಾಗೂ ರಸ್ತೆ ಹದಗೆಟ್ಟಿರುವ ಬಗ್ಗೆ ಸೂಚನಾ ಫಲಕಗಳಿಲ್ಲದೆ ವಾಹನ ಸವಾರರಿಗೆ ಸಮಸ್ಯೆ ಸೃಷ್ಟಿಸುತ್ತಿದೆ.
ಈ ರಸ್ತೆಯ ಕಾಮಗಾರಿ ಆರಂಭಿಸಿ 8 ತಿಂಗಳು ಹೆಚ್ಚು ಕಳೆಯಿತು, ಆದರೆ ಇಲ್ಲಿವರೆಗೂ ಪೂರ್ಣಗೊಂಡಿಲ್ಲ. ಇದೀಗ ಮಳೆಗಾಲದ ಹಿನ್ನೆಲೆಯಲ್ಲಿ ರಸ್ತೆ ಸಂಪೂರ್ಣ ಕೆಸರು ರಸ್ತೆಯಾಗಿ ಹೊಂಡಗುಂಡಿಗಳಿಂದ ಕೂಡಿದ್ದು, ಅಪಘಾತಕ್ಕೆ ಕಾರಣವಾಗುತ್ತಿದೆ.-ರಮೇಶ್ ಪೂಜಾರಿ ಗ್ರಾಮಸ್ಥ
ಕಾಮಗಾರಿ ಆರಂಭಗೊಂಡು ಹಲವು ಸಮಯ ಕಳೆದರೂ ಇನ್ನೂ ಸಮಸ್ಯೆಗೆ ಮುಕ್ತಿ ಕಂಡಿಲ್ಲ. ಮಳೆ ಬಂತೆಂದರೆ ಈ ರಸ್ತೆಯಲ್ಲಿ ಸಂಚಾರ ನಡೆಸುವಂತಿಲ್ಲ. ಸಾಕಷ್ಟು ಬಾರಿ ಮನವಿ ಮಾಡಿಕೊಂಡರೂ ಪ್ರಯೋಜನವಿಲ್ಲ. ಇನ್ನೂ ಮಳೆಗಾಲ ಮುಗಿಯುವವರೆಗೂ ಕಾಮಗಾರಿ ಪೂರ್ಣಗೊಳ್ಳುವುದು ಅನುಮಾನ.-ಕೆ.ಆರ್.ಪಾಟ್ಕರ್ ಶಿರ್ವ ಗ್ರಾಪಂ ಮಾಜಿ ಅಧ್ಯಕ್ಷ