ದೇವಸ್ಥಾನದ ಮೇಲೆ ದಾಳಿ ನಡೆಸೋದಕ್ಕೆ ಸಿದ್ಧರಾಗಿದ್ರು ಉಗ್ರರು!: ಪಾಕಿಸ್ತಾನದಿಂದ ಕರೆ ಕೂಡ ಬಂದಿತ್ತು ಅವರಿಗೆ!

Possible bid to attack temple foiled in J-K's Poonch
Published on

ಜಮ್ಮು: ಜಮ್ಮು-ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ದೇವಸ್ಥಾನದ ಮೇಲೆ ದಾಳಿ ನಡೆಸುವುದಕ್ಕೆ ಸಿದ್ಧರಾಗಿದ್ದ ನಾಲ್ವರು ಉಗ್ರರನ್ನು ಭಾನುವಾರ ಪೊಲೀಸರು ಬಂಧಿಸಿದ್ದಾರೆ. ಅವರ ಬಳಿ ಇದ್ದ ಆರು ಗ್ರೆನೇಡ್​ಗಳನ್ನು ವಶಪಡಿಸಿಕೊಂಡು ವಿಚಾರಣೆಗೊಳಪಡಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ಕುರಿತು ಪ್ರತಿಕ್ರಿಯಿಸಿರುವ ಪೂಂಛ್​ ಜಿಲ್ಲೆಯ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ರಮೇಶ್ ಕುಮಾರ್​ ಆಂಗ್ರಾಲ್​, ಸ್ಥಳೀಯ ಪೊಲೀಸರು ಮತ್ತು ವಿಶೇಷ ಕಾರ್ಯಾಚರಣೆ ಗುಂಪು ನಡೆಸಿದ ಯಶಸ್ವಿ ಕಾರ್ಯಾಚರಣೆಯಲ್ಲಿ ನಿನ್ನೆ ರಾತ್ರಿ ಸಹೋದರರಿಬ್ಬರನ್ನು ವಾಹನ ತಪಾಸಣೆ ವೇಳೆ ಮೆಂಧಾರ್ ಸೆಕ್ಟರ್​ನ ಬಸೂನಿ ಸಮೀಪ ಬಂಧಿಸಿದ್ದಾರೆ. ಬಂಧಿತರನ್ನು ಮುಸ್ತಾಫಾ ಇಕ್ಬಾಲ್​ ಮತ್ತು ಮುರ್ತಾಝ ಇಕ್ಬಾಲ್ ಎಂದು ಗುರುತಿಸಲಾಗಿದೆ.

ಬಸೂನಿಯಲ್ಲಿರುವ ರಾಷ್ಟ್ರೀಯ ರೈಫಲ್ಸ್​ ಕೇಂದ್ರ ಕಚೇರಿಯಲ್ಲಿ ಬಂಧಿತರ ವಿಚಾರಣೆ ನಡೆಸುತ್ತಿದ್ದ ವೇಳೆ, ಮುಸ್ತಾಫಾನ ಫೋನ್​ಗೆ ಪಾಕಿಸ್ತಾನದ ನಂಬರ್​ನಿಂದ ಕರೆ ಬಂದಿತ್ತು. ಇದೇ ಸಂದರ್ಭದಲ್ಲಿ ಅವರು ಅರಿ ಗ್ರಾಮದಲ್ಲಿ ದೇವಸ್ಥಾನದ ಮೇಲೆ ದಾಳಿ ನಡೆಸುವುದಕ್ಕೆ ಸಿದ್ಧತೆ ನಡೆಸುತ್ತಿದ್ದುದಾಗಿ ಹೇಳಿಕೊಂಡಿದ್ದಾರೆ. ಅವರ ಹೇಳಿಕೆ ಆಧರಿಸಿ ಆರೋಪಿಗಳ ಮನೆ ತಲಾಶ್ ಮಾಡಿದಾಗ ಆರು ಗ್ರೆನೇಡ್​ಗಳು ಪತ್ತೆಯಾಗಿವೆ. ಗ್ರೆನೇಡ್ ಬಳಸುವ ಬಗೆ ಹೇಗೆ ಎಂಬ ತರಬೇತಿ ವಿಡಿಯೋ ಕೂಡ ಆತನ ಬಳಿ ಇತ್ತು. ಜಮ್ಮು-ಕಾಶ್ಮೀರ ಘಜ್ನವಿ ಫೋರ್ಸ್​ನ ಪೋಸ್ಟರ್​ ಕೂಡ ಪತ್ತೆಯಾಗಿದೆ.

ಇನ್ನೊಂದೆಡೆ ಬಾಲಾಕೋಟ್​ ಸೆಕ್ಟರ್​ನ ಗಡಿ ನಿಯಂತ್ರಣ ರೇಖೆ ಸಮೀಪದ ದಾಬಿ ಗ್ರಾಮದಲ್ಲಿದ್ದ ಇಬ್ಬರು ಶಂಕಿತ ಉಗ್ರರನ್ನೂ ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಲಾಗಿದೆ. ಇನ್ನೂ ಹೆಚ್ಚಿನ ಮಾಹಿತಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ಆಂಗ್ರಾಲ್ ತಿಳಿಸಿದ್ದಾರೆ. (ಏಜೆನ್ಸೀಸ್)

ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net