

ಕೋಟ: ಕೋಟತಟ್ಟು ಗ್ರಾಮ ಪಂಚಾಯಿತಿ ಹಾಗೂ ಕೋಟ ಕಲ್ಮಾಡಿ ಅಂಗನವಾಡಿ ಸಹಯೋಗದೊಂದಿಗೆ ಥೀಂ ಪಾರ್ಕ್‌ನ ಕಿರು ಸಭಾಂಗಣದಲ್ಲಿ ಪೋಷಣ್ ಮಾಸಾಚರಣೆ ಇತ್ತೀಚೆಗೆ ಜರುಗಿತು.
ಕೋಟತಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ್ ಬಾರಿಕೆರೆ ಉದ್ಘಾಟಿಸಿದರು. ಕಾರಂತ ಥೀಂ ಪಾರ್ಕ್ ಟ್ರಸ್ಟಿ ಸುಬ್ರಾಯ ಆಚಾರ್ ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಬಗ್ಗೆ ಮೇಲ್ವಿಚಾರಕಿ ಸವಿತಾ ಮಾಹಿತಿ ನೀಡಿದರು. ಬಳಿಕ ಮಕ್ಕಳ ಹಾಗೂ ಗರ್ಭಿಣಿಯರ ತೂಕ ಪರಿಶಿಲಿಸಲಾಯಿತು. ಗಿಡ ವಿತರಣೆ ಬಳಿಕ ವಿವಿಧ ಬಗೆಯ ಪೌಷ್ಟಿಕ ಆಹಾರಗಳು, ಸೊಪ್ಪು-ತರಕಾರಿಗಳು ಹಾಗೂ ಔಷಧೀಯ ಸಸ್ಯಗಳನ್ನು ಪ್ರದರ್ಶನಗೊಳಿಸಲಾಯಿತು. ಪಂಚಾಯಿತಿ ಉಪಾಧ್ಯಕ್ಷೆ ಸರಸ್ವತಿ, ಸದಸ್ಯ ವಾಸು ಪೂಜಾರಿ ಉಪಸ್ಥಿತರಿದ್ದರು. ಕೋಟತಟ್ಟು ಕಲ್ಮಾಡಿ ಅಂಗನವಾಡಿ ಕಾರ್ಯಕರ್ತೆ ಜಯಲಕ್ಷ್ಮೀ ಎನ್ ಕಾರ್ಯಕ್ರಮ ನಿರೂಪಿಸಿದರು.