ಸಾವಿನಲ್ಲಿ ರಾಜಕೀಯ; ವಿಪಕ್ಷ ನಾಯಕರಿಗೆ ಹವ್ಯಾಸ: ಬೋಸರಾಜು|Politics in Death

bosaraju
Published on

ಬೆಂಗಳೂರು: ಸಾವಿನಲ್ಲಿ ರಾಜಕೀಯ ಮಾಡುವುದನ್ನು ಪ್ರತಿಪಕ್ಷಗಳು ಹವ್ಯಾಸವ ಮಾಡಿಕೊಂಡಿವೆ(Politics in Death; Hobby for opposition leaders) ಎಂದು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು(N S Bosraju) ವಾಗ್ದಾಳಿ ನಡೆಸಿದ್ದಾರೆ.

ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದ್ದು ಸತ್ಯಾಸತ್ಯತೆ ಹೊರಬರುವ ವರೆಗೂ ಹೋರಾಟ ಮಾಡುವುದರಲ್ಲಿ ಅರ್ಥವಿಲ್ಲ ಎಂದು ಹೇಳಿದ್ದಾರೆ.

ತಮ್ಮ ಪಕ್ಷದ ಆಂತರಿಕ ಹೊಡೆದಾಟಕ್ಕೆ ಕೊನೆ ಹಾಕುವಲ್ಲಿ ವಿಫಲರಾಗಿರುವ ವಿಪಕ್ಷ ನಾಯಕರು ವಿನಾಕಾರಣ ಇಲ್ಲ ಸಲ್ಲದ ಪ್ರಕರಣಗಳಲ್ಲಿ ಮೂಗು ತೂರಿಸುತ್ತಿದ್ದಾರೆ. ಎಲ್ಲೂ ಸಚಿವರ ಹೆಸರು ಪ್ರಸ್ತಾಪವಿಲ್ಲದೇ ಇದ್ದರೂ ವಿಪಕ್ಷ ನಾಯಕರು ಮಾಡಿರುವ ಆರೋಪ ಪ್ರಕರಣವನ್ನು ಸಿಐಡಿ ವಹಿಸುವುದಾಗಿ ಗೃಹ ಸಚಿವರು ಹೇಳಿಕೆ ನೀಡಿದ್ದಾರೆ. ಯಾವುದೇ ಪ್ರಕರಣ ತನಿಖೆ ನಡೆದು ಸತ್ಯಾಸತ್ಯತೆ ಹೊರಬರಬೇಕು. ಅನಂತರ ಹೋರಾಟ ಮಾಡುವುದು ಸರಿ. ಆದರೆ, ಸರ್ಕಾರಕ್ಕೆ ಮಸಿ ಬಳಿಯುವ ಕೆಲಸ ಮಾಡುವ ನಿಟ್ಟಿನಲ್ಲಿ ವಿಪಕ್ಷ ನಾಯಕರು ಸಾವಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ ಎಂದು ಹರಿಹಾಯ್ದಿದ್ದಾರೆ.

ನಿರಾಧಾರ ಆರೋಪಗಳಿಂದ ವಿಪಕ್ಷ ನಾಯಕರು ಏನನ್ನೂ ಸಾಧಿಸಲು ಸಾಧ್ಯವಿಲ್ಲ. ರಾಜಕೀಯ ನಾಯಕರೊಂದಿಗೆ ಫೋಟೊ ತೆಗೆಸಿಕೊಂಡಿದ್ದಾರೆ ಎಂದರೆ ಆಪ್ತರು ಎಂದು ಷರಾ ಬರೆಯಲು ಆಗುವುದಿಲ್ಲ. ರಾಜಕೀಯ ಮುಖಂಡರುಗಳ ಜೊತೆಗೆ ಹಲವು ಕ್ರಿಮಿನಲ್‌ಗಳು ಫೋಟೊ ತಗೆಸಿಕೊಳ್ಳುತ್ತಾರೆ. ಹಾಗೆಂದ ಮಾತ್ರಕ್ಕೆ ಅವರು ಆಪ್ತರು ಎಂದು ಹೇಳಿದರೆ ಒಪ್ಪುತ್ತಾರೆಯೇ? ಎಂದು ಪ್ರಶ್ನಿಸಿದ್ದಾರೆ.

ಅನಾವಶ್ಯಕವಾಗಿ ಸಚಿವರ ರಾಜೀನಾಮೆ ಕೇಳುವುದು ಖಂಡನೀಯ. ವಿಪಕ್ಷ ನಾಯಕರು ಸಾವಿನಲ್ಲೂ ರಾಜಕೀಯ ನಡೆಸುವ ದುಷ್ಟ ಬುದ್ಧಿಯನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.

ಸಚಿನ್ ಆತ್ಮಹತ್ಯೆ ಮಾಡಿಕೊಂಡಿರುವುದು ದುರದೃಷ್ಟಕರ ಸಂಗತಿಯಾಗಿದೆ. ಕುಟುಂಬಕ್ಕೆ ಸಾಂತ್ವನ ಹೇಳುವ ನಿಟ್ಟಿನಲ್ಲಿ ಸರ್ಕಾರ 10 ಲಕ್ಷ ರೂ. ಪರಿಹಾರವನ್ನೂ ನೀಡಿದೆ. ತನಿಖೆ ನಡೆದು ಸತ್ಯಾಸತ್ಯತೆ ಹೊರಬರಲು ಅವಕಾಶ ನೀಡಬೇಕು. ಅಲ್ಲಿಯವರೆಗೂ ವಿಪಕ್ಷ ನಾಯಕರು ತಮ್ಮ ಪಕ್ಷದ ಆಂತರಿಕ ಗೊಂದಲಗಳನ್ನು ಪರಿಹರಿಸಿಕೊಳ್ಳಲಿ ಎಂದು ಬೋಸರಾಜು ವ್ಯಂಗ್ಯವಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net