

Supreme Court: 2024ರ ಲೋಕಸಭಾ ಚುನಾವಣೆ ಪ್ರಚಾರದ ವೇಳೆ ಮಾನಹಾನಿಯಾಗುಂತಹ ಭಾಷಣ ಮಾಡಿದ್ದಾರೆ ಎಂದು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ವಿರುದ್ಧ ಬಿಜೆಪಿ ರಾಜ್ಯ ಘಟಕ ದಾಖಲಿಸಿದ್ದ ಮಾನನಷ್ಟ ಕೇಸ್ ಅನ್ನು ತೆಲಂಗಾಣ ಹೈಕೋರ್ಟ್ ರದ್ದುಪಡಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಸೋಮವಾರ ವಜಾಗೊಳಿಸಿದೆ.
ಬಲಿಷ್ಠ ರಾಜಕಾರಣಗಳಾಗಿದ್ದರೆ, ಇಂತಹದ್ದನ್ನು ಸಹಿಸಿಕೊಳ್ಳಲು ನೀವು ದಪ್ಪ ಚರ್ಮವನ್ನು ಹೊಂದಿರಬೇಕು ಎಂದು ಸೋಮವಾರ ಸುಪ್ರೀಂಕೋರ್ಟ್ ಸಿಜೆಐ ಬಿ.ಆರ್.ಗವಾಯಿ, ನ್ಯಾ.ಕೆ ವಿನೋದ್ ಚಂದ್ರನ್ ಹಾಗೂ ಅತುಲ್ ಎಸ್. ಚಂದೂರ್ಕರ್ ಅವರಿದ್ದ ತ್ರಿಸದಸ್ಯ ಪೀಠ ಅಭಿಪ್ರಾಯ ಪಟ್ಟಿದೆ.
ದೂರುದಾರರಿಗೆ ಚಾಟಿ ಬೀಸಿರುವ ಸಿಜೆಐ ಗವಾಯಿ, ನ್ಯಾಯಾಲಯಗಳನ್ನು ರಾಜಕೀಯ ಯುದ್ಧಭೂಮಿಗಳಾಗಿ ಪರಿವರ್ತಿಸಲು ಸಾಧ್ಯವಿಲ್ಲ ಎಂದು ನಾವು ಹಲವು ಸಂದರ್ಭಗಳಲ್ಲಿ ಪದೇ ಪದೇ ಹೇಳಿದ್ದೇವೆ. ಅರ್ಜಿದಾರರು ಮತ್ತೆ ವಾದ ಮಂಡಿಸಲು ಒತ್ತಾಯಿಸಿದರೆ 10 ಲಕ್ಷ ರೂಪಾಯಿ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 400ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆದರೆ ಸಂವಿಧಾನವನ್ನು ಬದಲಾಯಿಸುತ್ತದೆ, ಮೀಸಲಾತಿಯನ್ನು ತೆಗೆಯುತ್ತದೆ ಎಂದು ರೇವಂತ್ ರೆಡ್ಡಿ ಆರೋಪಿಸಿದ್ದರು. ಈ ಹೇಳಿಕೆ ಬಗ್ಗೆ ತೆಲಂಗಾಣ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕರಮ್ ವೆಂಕಟೇಶ್ವರಲು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
ಸದರಿ ಹೈದರಾಬಾದ್ ವಿಚಾರಣಾ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ರೇವಂತ್ ರೆಡ್ಡಿ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ್ದ ಹೈಕೋರ್ಟ್ ಪ್ರಕರಣವನ್ನು ರದ್ದುಗೊಳಿಸಿತ್ತು. ಆದರೆ ಬಿಜೆಪಿ ತೆಲಂಗಾಣ ಘಟಕ, ಕೇಸ್ ರದ್ದುಗೊಳಿಸಿದ್ದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. (ಏಜೆನ್ಸೀಸ್)